ಸಲ್ಲಾಪ: ಯಾವಾಗ ದುಃಖವಾಗುತ್ತದೆ? ಜಾನಪದರು ಶಾಲಿನಲ್ಲಿ ಕೆರ ಸುತ್ತಿ ಹೊಡೆಯುವುದರಲ್ಲಿ ನಿಷ್ಣಾತರು. ಅವರು... ಜಾನಪದರು ಶಾಲಿನಲ್ಲಿ ಕೆರ ಸುತ್ತಿ ಹೊಡೆಯುವುದರಲ್ಲಿ ನಿಷ್ಣಾತರು. ಅವರು ಹೇಳೇಕೆನ್ನಿಸಿದ್ದನ್ನು ಕಲಾತ್ಮಕ ಮಾತುಗಳಲ್ಲೂ ಹೇಳಬಲ್ಲರು , ನಾಟುವಂತೆಯೂ ಹೇಳಬಲ್ಲರು. ಹಾಗೆಯೇ ಒಬ್ಬ ವಿಟನಿಗೆ ಆತನ ವೇಶ್ಯೆ ಹೇಳಿದ್ದು ಇಲ್ಲಿದೆ. ಆತ ಸರಸದಲ್ಲಿ ಅಷ್ಟು ಚತುರನಲ್ಲ. ತರುಣಿಯರ ಕಣ್ಸನ್ನೆ ಕೈಸನ್ನೆ ತುಟಿಸನ್ನೆಗಳನ್ನು ತಕ್ಷಣ ಅರಿಯಬಲ್ಲಷ್ಟು ನಿಷ್ಣಾತನಲ್ಲ. ಅಂಥವನಿಗೂ ವೇಶ್ಯೆಯರ ಬಳಿ ಹೋಗುವ ಚಟ. ಆತ ಯಾವಾಗಲೂ ಹೋಗುತ್ತಿದ್ದ ವೇಶ್ಯೆ, ತನ್ನ ಗಿರಾಕಿಯ ಸಂಸಾರದ ಸ್ಥಿತಿ ಹೇಗಿದ್ದೀತು ಎಂಬುದನ್ನು ಸೂಕ್ಷ್ಮವಾಗಿ ಅರ್ಥಯಿಸಿಕೊಂಡಳು. ನಂತರ ಆತನಿಗೆ ಹೇಳಿದಳು. ಅವಿದಗ್ದಃ ಪತಿಃ ಸ್ತ್ರೀಣಾಂ ಪ್ರೌಢಾನಾ ನಾಯಕೋಗುಣೀ ಗುಣಿನಾಂ ತ್ಯಾಗಿನಾಂ ಸೋಕ್ತೋ ವಿಭವಶ್ಚೇತಿ ದುಃಖಕೃತ್ ತ್ಯಾಗಿಗಳು ಮತ್ತು ಗುಣವಂತರಾದವರಿಗೆ ಕೈಯಲ್ಲಿ ಹಣವಿಲ್ಲದಿದ್ದರೆ ದುಃಖವಾಗುತ್ತದೆ. ಯಾಕೆಂದರೆ ಅದು ತಮಗಾಗಿ ಅಲ್ಲ, ಇನ್ನೊಬ್ಬರಿಗೆ ವಿನಿಯೋಗಿಸುವುದಕ್ಕಾಗಿ . ಪ್ರೌಢ ವ್ಯಕ್ತಿಗಳಿಗೆ ಒಬ್ಬ ಸೂಕ್ತ ನಾಯಕನಿಲ್ಲದಿದ್ದರೆ ದುಃಖವಾಗುತ್ತದೆ. ಯಾಕೆಂದರೆ ತಮ್ಮನ್ನು ನಿರ್ದಿಷ್ಟ ಗುರಿಯತ್ತ ಒಯ್ಯುವವನಿಲ್ಲವಲ್ಲಾ ಎಂದು. ಅಂತೆಯೇ, ಮದನಕಲೆಯಲ್ಲಿ ಆಸಕ್ತರೂ ನಿಷ್ಣಾತರೂ ಆದ ತರುಣಿಯರಿಗೆ ಅರಸಿಕನಾದ ನಲ್ಲ ದೊರೆತರೆ ದುಃಖವಾಗುತ್ತದೆ. ಯಾಕೆಂದು ನಾನು ವಿವರಿಸಬೇಕೆ? ಪ್ರಣಯಕಲೆಯ ಸೂಕ್ಷ್ಮಗಳನ್ನು ಕರಗತ ಮಾಡಿಕೊಂಡರೆ ನೀನು ಬದುಕಿಕೊಳ್ಳುತ್ತೀ ಎಂಬ ಆಕೆಯ ಮಾತನ್ನು ಆತ ಅರ್ಥ ಮಾಡಿಕೊಂಡಿರಬಹುದು. -ಹರಿಹರ