ನರಕದ ಸೇತುವೆ ಮೇಲೆ ಕೊನೆಗೆ ನಡೆದಿದ್ಯಾರು? ನರಕದ ಸೇತುವೆ ಮೇಲೆ ಕೊನೆಗೆ ನಡೆದಿದ್ಯಾರು? ಅದೊಂದು ದ್ವೀಪದಂಥ ಊರು. ಅದೊಂದು ದ್ವೀಪದಂಥ ಊರು. ಮೂರು ದಿಕ್ಕಿಗೆ ನೀರೋ ನೀರು. ನಾಲ್ಕನೆಯ ದಿಕ್ಕಿನಲ್ಲಿ ಭೂಮಿಯಿದೆಯಾದರೂ ಅದರ ಮೇಲೆ ನಡೆದು ಹೋದರೆ ಯಾವ ಊರಿಗೂ ಹೋಗಲು ಸಾಧ್ಯವಿರಲಿಲ್ಲ. ಹಾಗಾಗಿ ಜನರು ಅನಿವಾರ್ಯವಾಗಿ ದೋಣಿ ಅಥವಾ ತೆಪ್ಪವನ್ನೇ ಬಳಸಬೇಕಿತ್ತು. ಆ ಊರಲ್ಲೊಬ್ಬ ಶ್ರೀಮಂತ ವ್ಯಕ್ತಿ ಗಜಪತಿರಾಯರು. ಎಪ್ಪತ್ತರ ಆಸಾಮಿ. ಶ್ರೀಮಂತಿಕೆಗೆ ತಕ್ಕಂತೆ ಉದಾರಿ ಕೂಡ. ಕೊನೆಗಾಲದಲ್ಲಿ ಅವರಿಗೆ ತಮ್ಮಲ್ಲಿರುವ ಹಣದಿಂದ ಊರಿಗೆ ಉಪಕಾರವಾಗುವಂಥಾದ್ದೇನನ್ನಾದರೂ ಮಾಡಬೇಕೆಂಬ ಬಯಕೆ ಬಂದುಬಿಟ್ಟಿತು. ಏನು ಮಾಡಬೇಕು ಎಂದು ಊರವರನ್ನು ಕೇಳಲಾಗಿ, ಅವರೆಲ್ಲ ಈ ದ್ವೀಪಕ್ಕೊಂದು ಸೇತುವೆ ಕಟ್ಟಿಸಿ ಪುಣ್ಯ ಕಟ್ಟಿಕೊಳ್ಳಿ ಅಂದರು. ಗಜಪತಿರಾಯರು ಖುಷಿಯಿಂದ ಸೇತುವೆ ಕಟ್ಟಿಸಿದರು. ಒಂಭತ್ತು ತಿಂಗಳು ಹದಿಮೂರು ದಿನದ ಕೆಲಸದ ನಂತರ ಸೇತುವೆ ಉದ್ಘಾಟನೆಯಾಯಿತು. ಖುದ್ದು ಗಜಪತಿರಾಯರೇ ಟೇಪು ಕತ್ತರಿಸಿ ಸೇತುವೆ ಲೋಕಾರ್ಪಣೆ ಮಾಡಿ ಸುದೀರ್ಘ ಭಾಷಣವೊಂದನ್ನು ಬಿಗಿದರು. ಆವತ್ತಿನಿಂದಲೇ ಊರಿಗೆ ಗ್ರಹಚಾರ ವಕ್ಕರಿಸಿತು. ಆ ಸೇತುವೆ ಶುರುವಾಗುತ್ತಿದ್ದುದು ಗಜಪತಿರಾಯರ ಮನೆಯ ಪಕ್ಕದಿಂದಲೇ. ಸೇತುವೆ ಉದ್ಘಾಟನೆಯಾದ ಮೊದಲ ದಿನದಿಂದಲೇ ರಾತ್ರಿ ಹೊತ್ತು ಅಲ್ಲೇನೋ ಸರಪರ ಸದ್ದು ಕೇಳಿಸತೊಡಗಿತು. ಗಜಪತಿರಾಯರು ಮೊದಲ ದಿನ ಸುಮ್ಮನಿದ್ದರು. ಎರಡನೇ ದಿನವೂ ಆ ಸದ್ದು ಬಂದಾಗ ಟಾರ್ಚ್ ಹಿಡಿದು ಎದ್ದುಹೋಗಿ ನೋಡಿದರು. ಯಾರೂ ಇಲ್ಲ, ಏನೂ ಕಾಣಿಸುತ್ತಿಲ್ಲ. ಸೇತುವೆ ತನ್ನ ಪಾಡಿಗೆ ತಾನು ನಿಂತಿದೆ. ಮತ್ತೆ ಮೂರನೇ ದಿನವೂ ಯಾರೋ ಒಂದಷ್ಟು ಜನ ಹಾ ಹೂ ಎಂದು ಸದ್ದು ಮಾಡುತ್ತ ಸೇತುವೆ ಮೇಲೆ ಸರಪರ ನಡೆದು ಹೋಗುವ ಶಬ್ದ ಕೇಳಿತು. ಗಜಪತಿರಾಯರು ಹೋಗಿ ನೋಡಿದರು. ಎಂದಿನಂತೆ ಏನೂ ಕಾಣಿಸಲಿಲ್ಲ. ನಾಲ್ಕನೆಯ ದಿನ ರಾತ್ರಿ ಸೇತುವೆ ಬಳಿ ಒಂದಷ್ಟು ಜನ ಅಳುವ ಸದ್ದು ಕೇಳಿತು. ಗಜಪತಿರಾಯರಿಗೆ ನಡುಕ ಹುಟ್ಟಿತು. ಎದ್ದು ಹೋಗಿ ನೋಡುವ ರಿಸ್ಕ್ ತೆಗೆದುಕೊಳ್ಳಲಿಲ್ಲ. ಮರುದಿನ ಊರವರೆಲ್ಲ ಒಂದೆಡೆ ಸೇರಿದರು. ಸೇತುವೆ ಕಟ್ಟುವಾಗ ನೀರಿಗೆ ಬಿದ್ದು ಸತ್ತ ಕೆಲಸದವನೊಬ್ಬ ದೆವ್ವವಾಗಿರಬಹುದು ಎಂಬ ಅಭಿಪ್ರಾಯ ಬಂತು. ಅವನಿಗೆ ಶಾಂತಿ ಮಾಡಿಸಬೇಕೆಂದು ಕೇರಳದಿಂದ ಮಂತ್ರವಾದಿ ಕರೆಸಿ, ಸೇತುವೆ ಮೇಲೆ ಮೂರು ಕುರಿ ಬಲಿ ಕೊಟ್ಟು ಪೂಜೆ ಮಾಡಿಸಲಾಯಿತು. ಆವತ್ತು ರಾತ್ರಿ ಮತ್ತೆ ಸದ್ದು ಬಂತು! ಸೇತುವೆ ಉದ್ಘಾಟನೆಯಾದ ಹತ್ತನೇ ದಿನದಿಂದ ಹಗಲು ಹೊತ್ತು ಅದರ ಮೇಲೆ ನಡೆದು ಹೋಗುವವರಿಗೆ ಮೂಳೆ, ಮಾಂಸದ ಚೂರುಗಳು ಸಿಗಲಾರಂಭಿಸಿದವು. ಒಂದಿಬ್ಬರಿಗೆ ಮನುಷ್ಯರ ಕೈ-ಕಾಲ್ಬೆರಳುಗಳು ಸಿಕ್ಕಿದವು ಎಂಬಲ್ಲಿಗೆ ಊರವರೆಲ್ಲ ಥರಗುಟ್ಟಿಹೋದರು. ಕೊನೆಗೆ ಗೋಕರ್ಣಕ್ಕೆ ಹೋಗಿ ತಾಂತ್ರಿಕರೊಬ್ಬರನ್ನು ಕರೆದುಕೊಂಡು ಬಂದು ಅಷ್ಟಮಂಗಲ ಪ್ರಶ್ನೆ ಕೇಳಿಸಲಾಯಿತು. ತಾಂತ್ರಿಕರು ಹೇಳಿದ್ದನ್ನು ಕೇಳಿ ಊರವರು ಬೆಚ್ಚಿಬೀಳದೆ ಬೇರೆ ವಿಧಿಯಿರಲಿಲ್ಲ. 'ನಿಮಗೆ ಗೊತ್ತಿಲ್ಲದೆಯೇ ಇದು ನರಕದ ಸೇತುವೆಯಾಗಿ ಮಾರ್ಪಟ್ಟಿದೆ. ನರಕಕ್ಕೆ ಪ್ರಪಂಚದ ತುಂಬಾ ಹಲವಾರು ಸೇತುವೆಗಳಿರುತ್ತವೆ. ಸತ್ತ ಪಾಪಿಗಳು ಅದರ ಮೇಲೆ ರಾತ್ರಿ ಹೊತ್ತು ನಡೆದು ನರಕಕ್ಕೆ ಹೋಗುತ್ತಾರೆ. ಹಾಗೆ ಹೋಗುವಾಗ ಒಬ್ಬರನ್ನೊಬ್ಬರು ಕೊಂದು ಮಾಂಸ ತಿನ್ನುತ್ತಾರೆ. ಹೊಡೆತ ತಿಂದವರು ಅಳುತ್ತಾರೆ, ಕಿರುಚುತ್ತಾರೆ. ಅವರು ಈ ಸೇತುವೆ ಬಳಸದಂತೆ ಮಾಡಲು ದಾರಿಯೇ ಇಲ್ಲ. ಒಂದೋ ಇದನ್ನು ಕೆಡವಬೇಕು, ಇಲ್ಲವೇ ಪಾಪಿಗಳಲ್ಲೇ ಪಾಪಿಯೊಬ್ಬ ಸತ್ತು ಇದರ ಮೇಲೆ ನಡೆದು ಹೋಗಬೇಕು. ಆ ನಂತರ ಕಡಿಮೆ ಪಾಪಿಗಳು ಇದನ್ನು ಬಳಸುವುದನ್ನು ನಿಲ್ಲಿಸುತ್ತಾರೆ'. ತಾಂತ್ರಿಕರು ವಾಪಸ್ ಗೋಕರ್ಣಕ್ಕೆ ಹೋದಮೇಲೆ ರಾತ್ರಿ ಹೊತ್ತು ಏನೇ ಶಬ್ದ ಬಂದರೂ ಊರವರ್ಯಾರೂ ಸೇತುವೆ ಬಳಿಗೆ ಯಾರೂ ಹೋಗಬಾರದು ಎಂದು ನಿರ್ಬಂಧ ವಿಧಿಸಲಾಯಿತು. ದೆವ್ವಗಳು ಬಳಸುವ ಸೇತುವೆ ಇದು ಎಂಬ ಕಾರಣಕ್ಕೆ ಹಗಲು ಹೊತ್ತಿನಲ್ಲೂ ಜನರು ಅದನ್ನು ಬಳಸುವುದನ್ನು ನಿಲ್ಲಿಸಿದರು. ಗಜಪತಿರಾಯರು ತುಂಬಾ ಬೇಸರ ಮಾಡಿಕೊಂಡರು. ಕೆಲ ದಿನಗಳಲ್ಲೇ ಅವರು ಹಾಸಿಗೆ ಹಿಡಿದರು. ತಿಂಗಳೊಪ್ಪತ್ತು ಕಳೆಯುವುದರೊಳಗೆ ಸತ್ತೂ ಹೋದರು. ಆವತ್ತು ರಾತ್ರಿ ಖುದ್ದು ಗಜಪತಿರಾಯರೇ ಆ ಸೇತುವೆ ಮೇಲೆ ನಡೆದು ಹೋಗುತ್ತಿದ್ದುದನ್ನು ನಾನು ನೋಡಿದೆ ಎಂದು ಊರವನೊಬ್ಬ ಹೇಳಿದ. ಮಾರನೆಯ ದಿನದಿಂದ ರಾತ್ರಿ ಹೊತ್ತು ಸೇತುವೆಯಿಂದ ಸದ್ದು ಬರುವುದು ನಿಂತುಹೋಯಿತು! ಇಷ್ಟು ದಿನ ಗಜಪತಿರಾಯರ ಬಗ್ಗೆ ಮಾತನಾಡಲು ಹೆದರುತ್ತಿದ್ದ ಊರಿನ ಹಳೆಯ ಹೆಂಗಸರು ಈಗ ಧೈರ್ಯದಿಂದ ಗಜಪತಿರಾಯರು ಪ್ರಾಯದ ಕಾಲದಲ್ಲಿ ಮಾಡಿದ ಅನಾಚಾರಗಳನ್ನು ಎಲ್ಲರೆದುರು ಹೇಳಿ ಶಾಪ ಹಾಕತೊಡಗಿದರು. (ಮುಂದುವರೆಯುವುದು..) -ಅಮ್ಮಜ್ಜನದುಗ್ಗ(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/55398ಗೆ ಭೇಟಿನೀಡಿ.