ಮಾತು ಮುತ್ತು ಮೊಬೈಲ್ ಫೋನ್ ಇರುವುದ್ಯಾಕೆ? ಇದೇನು ಪ್ರಶ್ನೆ? ಮೊಬೈಲ್ ಫೋನ್... ಮೊಬೈಲ್ ಫೋನ್ ಇರುವುದ್ಯಾಕೆ? ಇದೇನು ಪ್ರಶ್ನೆ? ಮೊಬೈಲ್ ಫೋನ್ ಇರೋದೇ ಮಾತಾಡೋಕೆ ಅನ್ನುತ್ತೀರಾ? ನಿಮ್ಮ ನಂಬಿಕೆ ನಿಜವಲ್ಲ! ಹಿಂದೆ ಮಾತನಾಡಲು ಮಾತ್ರ ಬಳಕೆಯಾಗುತ್ತಿದ್ದ ಮೊಬೈಲ್ ಈಗ ಇತರ ಹಲವಾರು ಕಾರ್ಯಗಳಿಗಾಗಿಯೂ ಬಳಕೆಯಾಗುತ್ತಿದೆ. ಇಂದು 'ಮಾತು' ಮೊಬೈಲ್ ಉಪಯೋಗಗಳಲ್ಲಿ ಆರನೆಯ ಸ್ಥಾನಕ್ಕೆ ಕುಸಿದಿದೆ ಎಂದರೆ ನೀವು ನಂಬಲೇಬೇಕು. ಮೆಸೇಜ್ ಕಳುಹಿಸುವುದು ಮತ್ತು ಸ್ವೀಕರಿಸುವುದು, ಇ-ಮೇಲ್ ನೋಡುವುದು, ಇಂಟರ್‌ನೆಟ್ ಬ್ರೌಸ್ ಮಾಡುವುದು, ಅಲಾರಂ ಗಡಿಯಾರವಾಗಿ ಬಳಸುವುದು ಇಂದು ಸೆಲ್‌ಫೋನ್‌ಗಳ ಬಹು ಬಳಕೆಯ ಲಿಸ್ಟಿನಲ್ಲಿವೆ. ಆರನೆಯದಾಗಿ ಇತರರಿಗೆ ಕರೆ ಮಾಡಿ ಮಾತನಾಡಲು ಮೊಬೈಲ್ ಬಳಕೆಯಾಗುತ್ತಿದೆ. ಮೊಬೈಲ್ ಹೆಚ್ಚಾಗಿ ಬಳಕೆಯಾಗುತ್ತಿರುವ ಹತ್ತು ವಿಷಯಗಳು ಯಾವುವು ಎಂಬುದು ಕುತೂಹಲಕಾರಿ. ಹತ್ತರಲ್ಲಿ ನಾಲ್ವರು ಸ್ಮಾರ್ಟ್‌ಫೋನ್ ಬಳಕೆದಾರರು, ಕರೆ ಮಾಡುವ ಅವಕಾಶವಿಲ್ಲದೆಯೂ ಮೊಬೈಲ್ ನಿರ್ವಹಣೆ ಸಾಧ್ಯ ಎಂದೇ ಹೇಳುತ್ತಾರೆ. ಸಂದೇಶಗಳನ್ನು ಕಳುಹಿಸುವುದು ಮತ್ತು ಸ್ವೀಕರಿಸುವುದು ಇಂದು ಮೊಬೈಲ್ ಫೋನ್‌ನ ಬಹಳ ಮುಖ್ಯ ಉಪಯೋಗ. ಪತ್ರಿ ದಿನ ವ್ಯಕ್ತಿಯೊಬ್ಬ ಒಂದು ಗಂಟೆ 52 ನಿಮಿಷ ಮೊಬೈಲ್ ಬಳಕೆ ಮಾಡುತ್ತಾನೆ ಎಂದು ಹೈಲೋ ಎಂಬ ಟ್ಯಾಕ್ಸಿ ಆ್ಯಪ್ ನಡೆಸಿದ ಸಮೀಕ್ಷೆ ತಿಳಿಸಿದೆ. ಈ ಸಮಯದಲ್ಲಿ ಬಹಳಷ್ಟು ಅವಧಿ ಸಂದೇಶ ರವಾನೆ, ಇ-ಮೇಲ್, ಇಂಟರ್‌ನೆಟ್ ವೀಕ್ಷಣೆ ಮುಂತಾದವುಗಳಿಗೆ ವೆಚ್ಚವಾಗುತ್ತದೆ. ಸರಾಸರಿ ಮೂರು ಕರೆಗಳಿಗೆ ಈ ಅವಧಿಯಲ್ಲಿ 20 ನಿಮಿಷ ವೆಚ್ಚವಾಗಿರುತ್ತದೆ. ಸಾಮಾಜಿಕ ಜಾಲತಾಣಗಳ ಆ್ಯಪ್‌ಗಳು, ಕ್ಯಾಲ್ಕುಲೇಟರ್‌ಗಳು, ಕ್ಯಾಲೆಂಡರ್ ಮತ್ತು ಕ್ಯಾಮೆರಾ ಸಹ ಮೊಬೈಲ್‌ಗಳ ಮುಖ್ಯ ಉಪಯೋಗಗಳ ಪೈಕಿ ಸೇರಿದೆ. ಸುಮಾರು 2,000 ಮಂದಿ ಒಳಗೊಂಡಿದ್ದ ಸಮೀಕ್ಷೆಯಲ್ಲಿ ಈ ವಿಷಯ ಬಯಲಾಗಿದೆ. ದಾರಿ ತೋರಿಸುವ ಆ್ಯಪ್‌ಗಳು, ವಿಶೇಷವಾಗಿ ಗೂಗಲ್ ನಕಾಶೆಗಳು ಜನಪ್ರಿಯ. ಅಪರಿಚಿತ ನಗರಗಳಲ್ಲಿ ಈ ಸೌಲಭ್ಯವಿಲ್ಲದೆ ಹೋಗುವುದೇ ಸಾಧ್ಯವಿಲ್ಲ ಎಂದು ಆರರಲ್ಲಿ ಒಬ್ಬರು ಹೇಳಿದ್ದಾರೆ. ಕರೆ ಮಾಡುವುದಕ್ಕಿಂತ ಹೆಚ್ಚಾಗಿ ಫೇಸ್‌ಬುಕ್ ನೋಡಲು, ಇತರರ ಚಿತ್ರಗಳನ್ನು ಕ್ಲಿಕ್ ಮಾಡಲು ಮೊಬೈಲ್ ಬಳಕೆ ನಡೆಯುತ್ತಿದೆಯಂತೆ. ದಿನಚರಿ ಮತ್ತು ಜನ್ಮದಿನ ನೆನಪಿಟ್ಟುಕೊಳ್ಳಲು ಕ್ಯಾಲೆಂಡರ್ ಬಳಕೆ, ಮೊಬೈಲ್ ಬ್ಯಾಕಿಂಗ್ ಮತ್ತು ಸುದ್ದಿಗಳಿಗಾಗಿ ಮೊಬೈಲ್ ಬಳಕೆಯಾಗುತ್ತಿದೆ. ಇವೆಲ್ಲವೂ ದಿನನಿತ್ಯದ ಕೆಲಸವನ್ನು ಹಗುರಗೊಳಿಸಿದೆ. ಕಳೆದ ಒಂದು ದಶಕದಲ್ಲಿ ಸ್ಮಾರ್ಟ್ ಫೋನ್‌ನ ವೈಶಿಷ್ಟಗಳು ಭಾರಿ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿವೆ ಮತ್ತು ಸುಧಾರಿಸಿವೆ ಎಂದು ಹೈಲೊದ ಮುಖ್ಯ ಕಾರ್ಯವಾಹಕ ಅಧಿಕಾರಿ ಟಾಮ್ ಬಾರ್ ಹೇಳುತ್ತಾರೆ. 10 ಮುಖ್ಯ ಉಪಯೋಗಗಳು * ಸಂದೇಶಗಳನ್ನು ರವಾನಿಸುವುದು * ಸಂದೇಶಗಳನ್ನು ಓದುವುದು * ಇ-ಮೇಲ್ ಓದುವುದು * ಇಂಟರ್‌ನೆಟ್ ನೋಡುವುದು * ಅಲಾರಂ ಸೆಟ್ ಮಾಡುವುದು * ಕರೆ ಮಾಡುವುದು * ಇ-ಮೇಲ್ ಕಳುಹಿಸುವುದು * ಸಮಯ ನೋಡುವುದು * ಕ್ಯಾಲ್ಕುಲೇಟರ್ ಬಳಸುವುದು * ಫೇಸ್‌ಬುಕ್ ನೋಡುವುದು -ಪ್ರೇಮ್