ಹನಿ ಖಜಾನೆ ಅದು 1976ನೇ ಇಸವಿ. ಗುಜರಾತಿನ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದ ಐದು ಲಕ್ಷಕ್ಕೂ ಹೆಚ್ಚು ಸದಸ್ಯರು ಚಿತ್ರ ನಿರ್ಮಾಣಕ್ಕೆಂದು ತಲಾ ಎರಡು ರುಪಾಯಿ ಕಾಣಿಕೆ ನೀಡಿದರು. ನಿರ್ದೇಶಕ ಶ್ಯಾಮ್ ಬೆನಗಲ್ ಈ ಹಣದ ನೆರವಿನಿಂದ 'ಮಂಥನ್‌' ಚಿತ್ರ ನಿರ್ಮಿಸಿದರು. ಹೀಗೆ ನೋಡಿದರೆ ಮಂಥನ್ ಭಾರತದಲ್ಲಿ ಕ್ರೌಡ್ ಫಂಡಿಂಗ್‌ನ ಮೊದಲ ಉದಾಹರಣೆ ಎನ್ನಬಹುದು. ಕನ್ನಡದ 'ಲೂಸಿಯಾ' ಇತ್ತೀಚಿನ ಉದಾಹರಣೆ. ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಚಿತ್ರ ನಿರ್ಮಿಸುವ ಈ ಪ್ರಕ್ರಿಯೆಯಡಿ ಅನೇಕ ಚಿತ್ರಗಳು ನಿರ್ಮಾಣವಾಗಿವೆ. ಸಾಮೂಹಿಕ ಹಣಕಾಸು ನೆರವು ಎಂಬುದು ಇದೀಗ ಭಾರತದಲ್ಲಿ ಕೇವಲ ಚಿತ್ರ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿಲ್ಲ. ಸಣ್ಣಪುಟ್ಟ ಉದ್ಯಮಗಳು, ಇತರ ಹಲವಾರು ಕ್ಷೇತ್ರಗಳಿಗೆ ವ್ಯಾಪಿಸುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ದೊಡ್ಡದಾಗಿ ಬೆಳೆಯುವ ಲಕ್ಷಣ ತೋರಿದೆ. ಇದಕ್ಕೆ ಮಾಧ್ಯಮಗಳ ಪ್ರಚಾರ ಹಾಗೂ ವೈಯಕ್ತಿಕ ಪ್ರಯತ್ನಗಳು ಕಾರಣ. ಈಗಾಗಲೇ ಇಂತಹ 11 ವೇದಿಕೆಗಳು ಕಾರ್ಯನಿರತವಾಗಿವೆ. ಇನ್ನೂ ಹಲವು ವೇದಿಕೆಗಳು ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ. ದೇಶದಲ್ಲಿ ಈ ಮಾರುಕಟ್ಟೆ ಬಹಳ ವೇಗವಾಗಿ ಬೆಳೆಯುವ ಲಕ್ಷಣಗಳಿವೆ. 2001ರಲ್ಲಿ ಬೆಳೆಯಲು ಆರಂಭಿಸಿದ ಈ ಮಾರುಕಟ್ಟೆ ಕಳೆದ ಎರಡು ವರ್ಷದಲ್ಲಿ ಅಪಾರ ಚಟುವಟಿಕೆ ಕಂಡಿದೆ. ದೊಡ್ಡ ಬಂಡವಾಳದಾರರನ್ನು ಆಕರ್ಷಿಸದ ಹೊಸ ವಿಚಾರ, ಹೊಸ ಆವಿಷ್ಕಾರ, ಹೊಸ ಉದ್ದೇಶ ಹೊಂದಿದ ಯಾವುದೇ ವ್ಯಕ್ತಿ ಈ ಕ್ರೌಡ್ ನಿಧಿಸಂಗ್ರಹದ ಮೊರೆ ಹೋಗಬಹುದು. ಇದು ಸಾಂಸ್ಕೃತಿಕ ನಿಯಂತ್ರಣ ಕಳೆದುಕೊಳ್ಳದೆ ಹಣಕಾಸನ್ನು ಪಡೆಯುವ ಪ್ರಜಾತಾಂತ್ರಿಕ ವಿಧಾನ ಎಂದು ಹೇಳಬಹುದು. ಮಾಮೂಲಿನಂತಾದರೆ ನಿರ್ಮಾಪಕ ಅಥವಾ ಹಣ ಹೂಡುವವನು ನಿರ್ದೇಶಕನ ಬೌದ್ಧಿಕ ಸ್ವಾತಂತ್ರ್ಯವನ್ನು ನಿಯಂತ್ರಿಸಬಲ್ಲ. ಆದರೆ ಸಾಮೂಹಿಕ ಹಣಕಾಸು ನೆರವು ನಿರ್ದೇಶಕನ ಮೂಲ ವಿಚಾರದ ಸಾರವನ್ನು ಯಥಾವತ್ ಆಗಿ ಉಳಿಸಿಕೊಳ್ಳಲು ನೆರವಾಗುತ್ತದೆ. ನಿರ್ದೇಶಕ ಬೌದ್ಧಿಕ ರಾಜಿಗೆ ಒಳಗಾಗದೆ ಇಲ್ಲಿ ತನ್ನತನವನ್ನು ಉಳಿಸಿಕೊಳ್ಳಬಹುದು. ಜಾಗತಿಕ ಮಟ್ಟದಲ್ಲಿ ಸಾಮೂಹಿಕ ಹಣಕಾಸು ನೆರವು ಎನ್ನುವುದು ಕೇವಲ ಹಣ ಒಟ್ಟುಗೂಡಿಸುವ ಸಾಧನ ಮಾತ್ರವಾಗಿ ಉಳಿದಿಲ್ಲ. ಬದಲಿಗೆ ಈ ಪ್ರಕ್ರಿಯೆಯಲ್ಲಿ ಸಕ್ರಿಯೆವಾಗುವಿಗೆಯೂ ಕೂಡ. ಹಣಕಾಸು ಕ್ರೋಢೀಕರಿಸುವುದಷ್ಟೇ ಅಲ್ಲ, ಇದರಲ್ಲಾಗುವ ಲಾಭ-ನಷ್ಟಗಳನ್ನೂ ದಾನಿಗಳು ಹಂಚಿಕೊಳ್ಳಬಹುದು. ಸದ್ಯಕ್ಕೆ ಸಾಮೂಹಿಕ ಹಣಕಾಸು ತತ್ವದ ಫಲಾನುಭವಿಗಳಲ್ಲಿ ಹಣಕಾಸಿನ ಅಡಚಣೆಯಿಂದಾಗಿ ತಮ್ಮ ಯೋಜನೆಗಳನ್ನು ಆರಂಭಿಸುವಲ್ಲಿ ಸೋತಿರುವ ಸೃಜನಶೀಲ ಪ್ರತಿಭೆಗಳಾದ ಚಿತ್ರ ನಿರ್ಮಾಪಕರು, ಸಂಗೀತಗಾರರು ಮತ್ತು ಕಲಾವಿದರು ಮಾತ್ರ ಇದ್ದಾರೆ. ಬಂಡವಾಳದಾರ ಅಥವಾ ನಿರ್ಮಾಪಕನಿಂದ ಹಣ ಪಡೆಯುವುದು ದುಸ್ತರವಷ್ಟೇ ಅಲ್ಲ ಸೃಜನಶೀಲ ಸ್ವಾತಂತ್ರ್ಯದ ಜತೆಗೆ ರಾಜಿಯನ್ನೂ ಮಾಡಿಕೊಳ್ಳಬೇಕಾಗುತ್ತದೆ. ಸಾಮೂಹಿಕ ಹಣಕಾಸು ನೆರವಿಗೆ ಬರುವುದು ಇಂಥಲ್ಲೇ. ಎಲ್ಲ ತಂದೆ-ತಾಯಿಯರೂ ಆದಷ್ಟು ಬೇಗ ತಮ್ಮ ಮಕ್ಕಳು ಜೀವನದಲ್ಲಿ ನೆಲೆ ಕಂಡುಕೊಳ್ಳಬೇಕು ಎಂದೇ ಬಯಸುತ್ತಾರೆ. ಸ್ಥಿರ ಉದ್ಯೋಗದ ಮೂಲಕ ಬದುಕಿಗೆ ಭದ್ರತೆ ಕಂಡುಕೊಳ್ಳಲಿ ಎಂದು ಅಪೇಕ್ಷಿಸುತ್ತಾರೆ. ಸೃಜನಶೀಲತೆಯ ಹಿಂದೆ ಹೋಗುವುದು ಇಲ್ಲರ ರಿಸ್ಕ್ ಅನ್ನು ಮೈಮೇಲೆ ಎಳೆದುಕೊಂಡಂತೆ ಎಂಬುದು ಇವರ ಭಾವನೆ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಯಾರಾದರೂ ಅಪರಿಚಿತ ಕ್ಷೇತ್ರಕ್ಕೆ ಧುಮುಕಲು ಬಯಸಿದರೆ ಅಂಥವರ ನೆರವಿಗೆ ಸಾಮೂಹಿಕ ಹಣಕಾಸು ಇದೆ. ಮುಂಬಯಿಯ ಸಂಸ್ಥೆಯೊಂದು ಮುಂಬಯಿ ಮತ್ತು ರೂರ್ಕೆಲಾದ ಐಐಟಿಗಳಲ್ಲಿ ಸಾಮೂಹಿಕ ಹಣಕಾಸು ನೆರವಿನ ತತ್ವವವನ್ನು ಪರಿಚಯಿಸಿದೆ. ಅಲ್ಲಿನ ವಿದ್ಯಾರ್ಥಿಗಳು ಹಾಗೂ ತಾಂತ್ರಿಕ ಯೋಜನೆಗಳು ಇದರ ಫಲಾನುಭವಿಗಳು. ಭಾರತ ಹಾಗೂ ಇಡೀ ವಿಶ್ವದಲ್ಲಿ ಮುಂದಿನ ಅತಿ ಪ್ರಮುಖ ವಿಷಯ ಇದೇ ಆಗಿರಲಿದೆ. ಹೊಸ ವಿಚಾರಗಳು ಕ್ಷಿಪಣಿಗಳಂತೆ ಚಿಮ್ಮಲು ಕಾದುಕುಳಿತಿವೆ. ಕಿಡಿ ಹೊತ್ತಿಸಲು ಅಗತ್ಯವಿರುವ ಸೂಕ್ತ ಇಂಧನ ಪೂರೈಸುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಈ ಸಂಸ್ಥೆಯ ಮುಖ್ಯಸ್ಥರು ಹೇಳುತ್ತಾರೆ. ಕ್ರೌಡ್ ಫಂಡಿಂಗ್ ಕುರಿತು ಸೆಬಿ ಪತ್ರವೊಂದನ್ನು ಬಿಡುಗಡೆ ಮಾಡಿದೆ. ಈ ಮಾದರಿಯ ಹಣಕಾಸು ವಿಧಾನಕ್ಕೆ ಮಾನ್ಯತೆ ನೀಡುವ ಬಗ್ಗೆ ಜಾಗೃತಿ ಹೆಚ್ಚಾಗುತ್ತಿರುವುದು, ಸಾಂಸ್ಥಿಕ ಹಣಕಾಸಿನ ಪಾತ್ರ ಕಡಿಮೆಯಾಗಿರುವುದು, ಫೈನಾನ್ಸ್, ದತ್ತಿನಿಧಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ಪಾತ್ರಕ್ಕೆ ಮನ್ನಣೆ ಹೆಚ್ಚಾಗುತ್ತಿರುವುದು ಉತ್ತಮ ಭವಿಷ್ಯ, ಆದರೆ ಹಣಕಾಸಿನ ತೊಂದರೆ ಇರುವ ಉದ್ದಿಮೆದಾರರಿಂದಾಗಿ ಸಾಮೂಹಿಕ ಹಣಕಾಸು ನೆರವು ತತ್ವ ಹೆಚ್ಚು ಗೌರವಾರ್ಹ ಆರ್ಥಿಕ ಮಾದರಿ ಎನಿಸಿದೆ. ಭಾರತದಲ್ಲಿ ಈ ತತ್ವ ಕೇವಲ ಪ್ರೋತ್ಸಾಹ ಹಾಗೂ ದೇಣಿಗೆಯ ಮಾದರಿಯಲ್ಲೇ ಇದೆ. ಮುಂಬರುವ ದಿನಗಳಲ್ಲಿ ಮಾದರಿ ಸಂಪೂರ್ಣ ಬದಲಾಗಲಿದೆ. ತರ್ಕ, ಯೋಜನೆ, ಮಾರುಕಟ್ಟೆಯ ತಿಳಿವಳಿಕೆ, ರಿಸ್ಕ್ ತಾಳಿಕೊಳ್ಳುವಿಕೆ, ಗಾತ್ರ, ಲಾಭ ಎಲ್ಲವನ್ನು ಆಧರಿಸಿ ರೂಪುಗೊಳ್ಳಲಿದೆ. ಇದು ತಾಂತ್ರಿಕ, ಕಲೆ, ಫ್ಯಾಶನ್ ಮತ್ತು ಜವಳಿ ಮುಂತಾದ ವಿಭಿನ್ನ ಉದ್ಯಮಗಳಿಗೆ ಲಾಭಕರವಾಗಲಿದೆ ಎಂಬ ಅಂದಾಜು. ಜತೆಗೆ ಒಂದಷ್ಟು ಸಮಸ್ಯೆಗಳೂ ಇವೆ. ದಾಖಲೆಗಳ ನಿಖರತೆ ಮತ್ತು ಏಕರೂಪತೆಯ ಕೊರತೆ, ವಸೂಲಿ ನಿಬಂಧನೆಗಳು ಮತ್ತು ಸಾಲದ ದಾಖಲೆಗಳಲ್ಲಿ ಕೊರತೆ ಇದೆ. ಸೂಕ್ತ ಒಡಂಬಡಿಕೆ ಮತ್ತು ನಿಯಂತ್ರಣದ ಕೊರತೆ ತಮ್ಮ ಹಣವನ್ನು ಹೆಚ್ಚು ಅಪಾಯಕ್ಕೆ ನೂಕುತ್ತದೆ ಎಂದು ಹಣ ಹೂಡಿಕೆದಾರರು ಯೋಚಿಸುತ್ತಿದ್ದಾರೆ. ಹನಿಗೂಡಿದರೆ ಹಳ್ಳ ಎಂಬ ಈ ತತ್ವ ಮುಂದಿನ ದಿನಗಳಲ್ಲಿ ಅತ್ಯಂತ ದೊಡ್ಡ ಯಶಸ್ಸು ಕಾಣುವುದರಲ್ಲಂತೂ ಸಂದೇಹವಿಲ್ಲ. ಲಾಭ-ನಷ್ಟಗಳ ವಿಚಾರ ಒತ್ತಟ್ಟಿಗಿರಲಿ. ಉತ್ತಮ ಕೆಲಸಕ್ಕೆ ಉದ್ಯಮ, ವ್ಯಾಪಾರ ಅಥವಾ ಕಲಾತ್ಮಕ, ಸೃಜನಶೀಲ ಯತ್ನಕ್ಕೆ ಕೈಜೋಡಿಸಿದ ತೃಪ್ತಿಯನ್ನಂತೂ ಇದು ನೀಡುತ್ತದೆ. ಕ್ರೌಡ್ ಸಂಸ್ಥೆಗಳು ದಿ ಹಾಟ್‌ಸ್ಪಾರ್ಚ್: ಕಲ್ಯಾಣಂ ಚಿತ್ರ ತಾನ್ ಬೆಕ್ರೊ ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದೆ. ಬಿಟ್‌ಗಿವಿಂಗ್: ಆಸಿಡ್ ದಾಳಿಗೆ ತುತ್ತಾದವರ ಬಗ್ಗೆ 'ಕ್ರೈ ಇಂಡಿಯಾ' ಡಾಕ್ಯುಮೆಂಟರಿಗೆ 30 ಲಕ್ಷ ಕಲೆಹಾಕಿದೆ. ಎನ್‌ಸಿಎಫ್‌ಎ ಇಂಡಿಯಾ: ನ್ಯಾಷನಲ್ ಕ್ರೌಡ್ ಫಂಡಿಂಗ್ ಅಸೋಸಿಯೇಶನ್- ನಿಧಿ ಸಂಗ್ರಹಕಾರರಿಗೆ ಮಾರ್ದದರ್ಶನ ನೀಡುತ್ತದೆ. -ಪ್ರೇಮ್‌ರಾಜ್