ಪ್ರಾಚೀನ ಭಾರತದಲ್ಲಿ ಶೃಂಗಾರ (ಭಾಗ-4) ಸಂಸ್ಕೃತದಲ್ಲಿ ಶೃಂಗಾರಕಾವ್ಯಗಳಲ್ಲದೇ ಮಹಾಕಾವ್ಯಗಳಲ್ಲಿ ಶೃಂಗಾರದ... ಸಂಸ್ಕೃತದಲ್ಲಿ ಶೃಂಗಾರಕಾವ್ಯಗಳಲ್ಲದೇ ಮಹಾಕಾವ್ಯಗಳಲ್ಲಿ ಶೃಂಗಾರದ ಸುದೀರ್ಘ ವರ್ಣನೆಗಳು ಬರುತ್ತವೆ. ಕಾಳಿದಾಸನ 'ಕುಮಾರಸಂಭವ'ದಲ್ಲಿ ಶಿವ, ಪಾರ್ವತಿಯರ ಸುರತಕ್ರೀಡೆ, 'ರಘುವಂಶ'ದಲ್ಲಿ ಅಗ್ನಿವರ್ಣನ ರಸಮಯ ಶೃಂಗಾರ ಜೀವನದ ವರ್ಣನೆ, ಭಾರವಿಯ 'ಕಿರಾತಾರ್ಜುನೀಯ' ಹಾಗೂ ಮಾಘನ 'ಶಿಶುಪಾಲವಧಾ'ಗಳಲ್ಲಿ ಬರುವ ಶೃಂಗಾರ, ಜಲಕ್ರೀಡೆಗಳ ವರ್ಣನೆಗಳು, ಶ್ರೀಹರ್ಷನ 'ನೈಷಧೀಯ ಚರಿತ'ದಲ್ಲಿನ ದಮಯಂತಿಯ ನಖಶಿಖಾಂತ ಸೌಂದರ್ಯ ವರ್ಣನೆ ಹಾಗೂ ನಳ, ದಮಯಂತಿಯರ ಸುರತಕ್ರೀಡೆಯ ವರ್ಣನೆ, ಕೆಲವು ಉದಾಹರಣೆಗಳು. ಗದ್ಯಕಾವ್ಯಗಳಾದ ಬಾಣಭಟ್ಟನ 'ಕಾದಂಬರೀ', ದಂಡಿಯ 'ದಶಕುಮಾರಚರಿತೆ', ಸುಬಂಧುವಿನ 'ವಾಸವದತ್ತಾ', ಧನಪಾಲನ 'ತಿಲಕಮಂಜರೀ', ಸೋಡ್ಡಲನ 'ಉದಯಸುಂದರೀಕಥಾ' ಮೊದಲಾದವುಗಳಲ್ಲಿ ಪ್ರಣಯದ ವಸ್ತುಗಳೂ ಹೇರಳವಾದ ಶೃಂಗಾರ ವರ್ಣನೆಗಳೂ ಇವೆ. ಅಂತೆಯೇ ಅನೇಕ ಸಂಸ್ಕೃತ ನಾಟಕಗಳೂ ಶೃಂಗಾರದ ವಸ್ತುವನ್ನೇ ಹೊಂದಿವೆ. ಕಾಳಿದಾಸನ 'ಅಭಿಜ್ಞಾನ ಶಾಕುಂತಲ', ದುಷ್ಯಂತ, ಶಕುಂತಲೆಯರ ಅಮರ ಪ್ರೇಮಕಥೆಯನ್ನು ಹೇಳುತ್ತದೆ. ಅಂತೆಯೇ ಪುರೂರವ ಮತ್ತು ಊರ್ವಶಿಯರ ಪ್ರಣಯಕಥೆ ಹೇಳುವ ಅವನ 'ವಿಕ್ರಮೋರ್ವಶೀಯ' ನಾಟಕ ಬಹು ಪ್ರಸಿದ್ಧ. ಅಂತೆಯೇ ಚಾರುದತ್ತ, ವಸಂತಸೇನೆಯರ ಪ್ರೇಮಕಥೆಯ ಶೂದ್ರಕನ 'ಮೃಚ್ಛಕಟಿಕಾ' ನಾಟಕ ಹಾಗೂ ಭಾಸನ 'ಚಾರುದತ್ತ' ನಾಟಕ, ಉದಯನ ಮತ್ತು ವಾಸವದತ್ತೆಯರ ಪ್ರೇಮಕಥೆಯುಳ್ಳ ಭಾಸನ 'ಸ್ವಪ್ನವಾಸವದತ್ತಾ', 'ರತ್ನಾವಲೀ' ಮತ್ತು 'ಪ್ರಿಯದರ್ಶಿಕಾ' ಎಂಬ ಹರ್ಷನ ನಾಟಕಗಳು, ಮಾಲತಿ ಮತ್ತು ಮಾಧವ ಎಂಬ ಪ್ರೇಮಿಗಳ ಸುಂದರ ಕಥಾವಸ್ತುವನ್ನು ಹೊಂದಿರುವ ಭವಭೂತಿಯ 'ಮಾಲತೀಮಾಧವ' ನಾಟಕ, ಭಾಸನ ಅವಿಮಾರಕವೆಂಬ ಪ್ರೇಮಕಥಾವಸ್ತುವಿನ ನಾಟಕ, ರಾಜಶೇಖರನ ಕರ್ಪೂರಚಂದ್ರಿಕಾ, ಹೀಗೆ ಹಲವಾರು ನಾಟಕಗಳಿವೆ. ಗ್ರಾಮ್ಯಶೃಂಗಾರವನ್ನು ಮುಖ್ಯ ವಸ್ತುವನ್ನಾಗಿ ಉಳ್ಳ 'ಭಾಣ' ಎಂಬ ಏಕಾಂಕದ ಏಕವ್ಯಕ್ತಿ ಅಭಿನಯದ ನಾಟಕ ಪ್ರಕಾರವೂ ಇದೆ. ಈ ಭಾಣಗಳ ಶೃಂಗಾರ ಸ್ವಲ್ಪ ಅಶ್ಲೀಲವಾಗಿಯೂ ಇರುತ್ತವೆ. ಪದ್ಮಪ್ರಾಭೃತಕ, ಪಾದತಾಡಿತಕ ಮೊದಲಾದ ಇಂಥ ಭಾಣಗಳಿವೆ. ಪ್ರೇಮ, ಶೃಂಗಾರಗಳನ್ನು ವಸ್ತುವಾಗಿ ಉಳ್ಳಂಥ ಸಣ್ಣ ಕಥೆಗಳೂ ಸಂಸ್ಕೃತದಲ್ಲಿ ಅನೇಕವಿವೆ. ಪುರಾಣಗಳಲ್ಲೇ ದುಷ್ಯಂತ ಶಕುಂತಲೆ, ನಳ-ದಮಯಂತಿ, ಉಷಾ-ನಿರುದ್ಧ, ಕೃಷ್ಣ-ರುಕ್ಮಿಣಿ, ಅರ್ಜುನ-ಸುಭದ್ರೆ, ಊರ್ವಶಿ- ಪುರೂರವ ಹೀಗೆ ಹಲವಾರಿವೆ. ಆದರೆ ಅಂದಿನ ಸಾಮಾಜಿಕ ಹಾಗೂ ರಮ್ಯ ಪ್ರಣಯಕಥೆಗಳ ದೊಡ್ಡ ಭಂಡಾರವೆಂದರೆ ಸೋಮದೇವನ 'ಕಥಾಸರಿತ್ಸಾಗರ'. ಇದಕ್ಕೆ ಆಧಾರವಾದಪೈಶಾಚೀಪ್ರಾಕೃತದ 'ಬೃಹತ್ಕಥೆ' ಇಂದು ಉಪಲಬ್ಧವಿಲ್ಲ. ಆದರೆ ಕಥಾಸರಿತ್ಸಾಗರದಂತೆ ಕ್ಷೇಮೇಂದ್ರನ 'ಬೃಹತ್ಕಥಾಮಂಜರೀ' ಹಾಗೂ ಬುಧಸ್ವಾಮಿಯ 'ಬೃಹತ್ಕಥಾಶ್ಲೋಕ ಸಂಗ್ರಹ' ಇದರ ಇನ್ನೆರಡು ಸಂಸ್ಕೃತ ರೂಪಾಂತರಗಳಾಗಿವೆ. ಇವುಗಳಲ್ಲಿ ಜನಪ್ರಿಯವಾದ ಉದಯನರಾಜನ ಹಾಗೂ ಅವನ ಪುತ್ರ ನರವಾಹನದತ್ತನ ಪ್ರಣಯ ಕಥೆಗಳು ಹಾಗೂ ಇನ್ನಿತರ ಹಲವಾರು ಪ್ರಣಯ ಕಥೆಗಳಿವೆ. ಗಿಳಿಯೊಂದು ತನ್ನ ಒಡತಿ ಪ್ರಭಾವತಿಯು ಪತಿಯಿಲ್ಲದ ಸಮಯದಲ್ಲಿ ಪರಪುರುಷನ ಬಳಿ ಹೋಗುವುದನ್ನು ತಪ್ಪಿಸಲು ಹೇಳುವ ಎಪ್ಪತ್ತು ಶೃಂಗಾರಕಥೆಗಳ ಸಂಗ್ರಹವಾದ 'ಶುಕಸಪ್ತತೀ' ಎಂಬ ಜನಪ್ರಿಯ ಗ್ರಂಥವೂ ಒಂದಿದೆ. ಅಂತೆಯೇ ಬೇತಾಳನು ವಿಕ್ರಮಾದಿತ್ಯನಿಗೆ ಹೇಳುವ ಕಥೆಗಳಲ್ಲೂ ಪಂಚತಂತ್ರದಲ್ಲೂ ಕೆಲವು ಶೃಂಗಾರ ಕಥೆಗಳಿವೆ. ಸಂಸ್ಕೃತದ ಶೃಂಗಾರಕಾವ್ಯಗಳು ಚಿತ್ರಕಲೆಯ ಮೇಲೂ ಸಾಕಷ್ಟು ಪ್ರಭಾವ ಬೀರಿವೆ. ಅಮರುಶತಕ, ಚೌರಪಂಚಾಶಿಕಾ, ಗೀತಗೋವಿಂದಗಳ ಸನ್ನಿವೇಶಗಳನ್ನು ತೋರಿಸುವ ಚಿತ್ರಪರಂಪರೆಯೇ ಇದೆ. ಅಂತೆಯೇ ರಾಧಾಕೃಷ್ಣರ ಪ್ರಣಯಲೀಲೆಗಳ ಚಿತ್ರಗಳು ಪ್ರಸಿದ್ಧ. ರಜಪೂತ ಹಾಗೂ ಮೊಘಲ್ ಕಾಲದ ಚಿತ್ರಕಲೆಯ ಮೇಲೂ ಶೃಂಗಾರಕಾವ್ಯಗಳ ಪ್ರಭಾವವಿದೆ. ಈ ಅವಧಿಯಲ್ಲಿ ಇತರ ಭಾಷೆಗಳಲ್ಲೂ ಶೃಂಗಾರಕಾವ್ಯಗಳ ರಚನೆಯಾಗಿರುವುದನ್ನು ಹಾಗೂ ಅವುಗಳ ಪ್ರಭಾವವಿರುವುದನ್ನು ಕಾಣಬಹುದು. ಈ ಚಿತ್ರಗಳು ಅಂದಿನ ಜನರ ಶ್ರೀಮಂತ ಶೃಂಗಾರ ಜೀವನವನ್ನು ತೋರಿಸುತ್ತವೆ. ಇತರ ಭಾಷೆಗಳಲ್ಲೂ ಶೃಂಗಾರದ ಬಗ್ಗೆ ಸಾಕಷ್ಟು ಬರಹಗಳು ಪ್ರಾಚೀನ, ಮಧ್ಯಯುಗೀನ ಭಾರತದಲ್ಲಿ ಕಾಣಸಿಗುತ್ತವೆ. ಪ್ರಾಕೃತದ 'ಗಾಹಾಸತ್ತಸಈ' (ಗಾಥಾಸಪ್ತಶತೀ) ಬಗ್ಗೆ ಈಗಾಗಲೇ ಹೇಳಲಾಗಿದೆ. ಇದರಂತೆ ಜಯವಲ್ಲಭನ 'ವಜ್ಜಾಲಗ್ಗ' ಎಂಬ ಸುಭಾಷಿತಗಳ ಸಂಕಲನವೂ ಪ್ರಾಕೃತದಲ್ಲಿದ್ದು ಇದರಲ್ಲಿ ಅನೇಕ ಶೃಂಗಾರದ, ಪ್ರಕೃತಿ ವರ್ಣನೆಯ ಸುಂದರ ಪದ್ಯಗಳಿವೆ. ತಮಿಳಿನ ಸುವರ್ಣಯುಗವಾದ 'ಸಂಗಂ' ಯುಗದಲ್ಲಿ 'ಎತ್ತುತೊಕೈ' ಎಂಬ ಎಂಟು ಪದ್ಯ ಸಂಕಲನಗಳೂ 'ಪಟ್ಟುಪಾಟ್ಟು' ಎಂಬ ಹತ್ತು ಹಾಡುಗಳೂ ರಚಿತವಾದವು. 'ಎತ್ತುತೊಕೈ'ಯಲ್ಲಿ ಒಟ್ಟು ಸುಮಾರು 2400 ಪದ್ಯಗಳಿದ್ದು ಇವನ್ನು 'ಅಗಂ' (ಅಹಂ) ಮತ್ತು 'ಪುರಂ' ಎಂದು ವಿಭಾಗಿಸಲಾಗಿದೆ. 'ಅಗಂ', ಶೃಂಗಾರ ಪದ್ಯಗಳನ್ನೊಳಗೊಂಡಿದ್ದು ಒಳಗಿನ, ಹೃದಯಕ್ಕೆ, ಭಾವಜೀವನಕ್ಕೆ ಸಂಬಂಧಿಸಿದ್ದಾದರೆ, 'ಪುರಂ', ಯುದ್ಧ, ವೀರತನದ ಪದ್ಯಗಳನ್ನೊಳಗೊಂಡಿದ್ದು, ಹೊರಗಿನ ಜೀವನಕ್ಕೆ ಸಂಬಂಧಿಸಿದೆ. ಅಗಂ ಅಥವಾ ಪ್ರೇಮಪದ್ಯಗಳುಳ್ಳ ಐದು ಸಂಕಲನಗಳಿದ್ದು, ಅವು 'ಕುರುಂತೊಕೈ', 'ನರ್ರಿಣೈ', 'ಐಂಗುರುನೂರು', 'ಅಗನಾನೂರು' ಮತ್ತು 'ಕಲಿತ್ತುಗೈ' ಎಂಬುವಾಗಿವೆ. ಹಲವಾರು ಕವಿಗಳು ರಚಿಸಿರುವ ಈ ಪದ್ಯಗಳು ಬಹಳ ಸೊಗಸಾಗಿವೆ. ಇವುಗಳನ್ನು ಪದ್ಯಗಳ ಸನ್ನಿವೇಶಗಳು ನಡೆಯುವ ಸ್ಥಳಗಳಿಗೆ ತಕ್ಕಂತೆ 'ತಿಣೈ'ಗಳೆಂಬ ವಿಂಗಡಣೆಗಳಿಗೆ ಸೇರಿಸಿದ್ದಾರೆ. ಈ 'ತಿಣೈ'ಗಳೆಂದರೆ, 'ಕುರಿಂಜಿ' (ಬೆಟ್ಟದ ಪ್ರದೇಶ), 'ಪಾಲೈ' (ಮರುಭೂಮಿ), 'ಮುಳ್ಳೆ'ೈ (ವನಪ್ರದೇಶ), 'ಮರುದಂ' (ನದಿ ತೀರ), 'ನೇಯ್ದಲ್‌' (ಸಮುದ್ರ ತೀರ). ಹೀಗೆ ಈ ಪದ್ಯಗಳಲ್ಲಿ ಶೃಂಗಾರವು ಸೊಗಸಾಗಿ ವ್ಯಕ್ತವಾಗಿದ್ದು, ಇವುಗಳ ಮೇಲೆ ಸಂಸ್ಕೃತ, ಪ್ರಾಕೃತಗಳ ಪ್ರಭಾವವೂ ಇದೆ. ಹಿಂದೀ/ಬ್ರಜ ಭಾಷೆಯಲ್ಲಿ ಆದಿಕಾಲ (ವೀರಗಾಥಾಕಾಲ), ಭಕ್ತಿಕಾಲ, ರೀತಿಕಾಲ ಹಾಗೂ ಆಧುನಿಕಕಾಲ ಎಂದು ಗುರುತಿಸುತ್ತಾರೆ. ಇವುಗಳಲ್ಲಿ ರೀತಿಕಾಲದಲ್ಲಿ ಶೃಂಗಾರ ಬಗೆಗೆ ಉಲ್ಲೇಖವಿದೆ. ಕೇಶವದಾಸರ 'ರಸಿಕಪ್ರಿಯಾ' ಎಂಬಲಕ್ಷಣಗ್ರಂಥ, ಹಾಗೆಯೇ ಮತಿರಾಮನ 'ರಸರಾಜ' ಎಂಬ ಲಕ್ಷಣಗ್ರಂಥ, 'ಸತಸಈ' ಎಂಬ ಮುಕ್ತಕಗ್ರಂಥ, ಬಿಹಾರಿಯ 'ಬಿಹಾರೀಸತಸಾಈ', ಘನಾನಂದನ 'ಮುಕ್ತಕಪದ್ಯಗಳು', ಮೊದಲಾಗಿ ಹಲವಾರು ಶೃಂಗಾರಗ್ರಂಥಗಳಿವೆ. ಇವರಲ್ಲಿ ಬಿಹಾರೀ ಅತ್ಯಂತ ಶ್ರೇಷ್ಠಕವಿ ಎನ್ನಲಾಗಿದೆ. ಆದಿಕಾಲದ ವಿದ್ಯಾಪತಿ, ವೀರ ಮತ್ತು ಭಕ್ತಿಯುಗದ ಸಂಧಿಕಾಲದಲ್ಲಿದ್ದು ರಾಧಾಕೃಷ್ಣರ ಹಲವಾರು ಗೀತೆಗಳನ್ನು ಮೈಥಿಲೀ ಭಾಷೆಯಲ್ಲಿ ರಚಿಸಿದ್ದಾನೆ. ಮೀರಾಬಾಯಿ ಸೂರದಾಸರ ಶೃಂಗಾರಭಕ್ತಿ ಗೀತೆಗಳೂ ಪ್ರಸಿದ್ಧವಾಗಿವೆ. ಬಂಗಾಳಿಯಲ್ಲಿ ಚಂಡೀದಾಸನ ಶೃಂಗಾರಭಕ್ತಿ ಗೀತೆಗಳು, ಅವನ ಸಹಜೀಯ ಪಂಥ, ಬೌಲ್‌ಗಳ ಶೃಂಗಾರ ಭಕ್ತಿಗೀತೆಗಳು, ಚೈತನ್ಯಮಹಾಪ್ರಭುಗಳ ಶೃಂಗಾರಭಕ್ತಿ ಗೀತೆ ಬಹಳ ಪ್ರಸಿದ್ಧ. ಕನ್ನಡದಲ್ಲಿ ಶೃಂಗಾರಮುಕ್ತಕಗಳೆಂಬ ಬಿಡಿಪದ್ಯ ಗಳಿಲ್ಲದಿದ್ದರೂ ಕಾವ್ಯಗಳಲ್ಲಿ ವಿಫುಲವಾದ ಶೃಂಗಾರವರ್ಣನೆಗಳಿವೆ. 'ಪಂಪಭಾರತ', ಲಕ್ಷ್ಮೀಶನ 'ಜೈಮಿನೀಭಾರತ', ಕುಮಾರವ್ಯಾಸಭಾರತಗಳಲ್ಲೆಲ್ಲಾ ಶೃಂಗಾರವರ್ಣನೆಗಳಿವೆ. ಸೋಮರಾಜನ 'ಉದ್ಭಟಕಾವ್ಯ', ರುದ್ರಭಟ್ಟನ 'ಜಗನ್ನಾಥವಿಜಯ', ನೇಮಿಚಂದ್ರನ 'ನೇಮಿನಾಥಪುರಾಣ'ಗಳಲ್ಲೂ ಅಂತೆಯೇ ಇವೆ. ರತ್ನಾಕರವರ್ಣಿಯ 'ಭರತೇಶವೈಭವ'ದಲ್ಲಿ ತೊಂಭತ್ತಾರುಸಾವಿರ ಪತ್ನಿಯರ ಭರತೇಶನಶೃಂಗಾರಲೀಲೆಗಳ ವಿಫುಲವಾದ ವರ್ಣನೆಗಳು ಬಹಳ ಮನೋಜ್ಞವಾಗಿವೆ.ಕನಕದಾಸರ 'ಮೋಹನತರಂಗಿಣಿ'ಯು, ಕೃಷ್ಣ-ರುಕ್ಮಿಣೀ, ಪ್ರದ್ಯುಮ್ನ-ಮಾಯಾವತೀ, ಮತ್ತು ಉಷಾ-ಅನಿರುದ್ಧರ ಮೂರು ಪೀಳಿಗೆಯ ಪ್ರೇಮಕಥೆಗಳ ಸೊಗಸಾದ ಶೃಂಗಾರಕಾವ್ಯ. ಕವಿಕಾಮದೇವನ 'ಶೃಂಗಾರರತ್ನಾಕರ' ಮೊದಲಾದ ಲಕ್ಷಣಗ್ರಂಥಗಳೂ ಕನ್ನಡದಲ್ಲಿವೆ. ಹರಿದಾಸರ ಹಾಡುಗಳಲ್ಲೂ ಶೃಂಗಾರಭಕ್ತಿಯನ್ನು ಕಾಣಬಹುದು. ತೆಲುಗಿನಲ್ಲೂ ಶೃಂಗಾರ ಪ್ರಧಾನವಾದ ಮತ್ತು ಶೃಂಗಾರ ವರ್ಣನೆಗಳಿರುವ ಮಹಾಕಾವ್ಯಗಳಿವೆ.ತಂಜಾವೂರಿನ ದೇವದಾಸಿಯೂ ಪ್ರತಾಪಸಿಂಹರಾಜನ ಉಪಪತ್ನಿಯೂ ಆಗಿದ್ದ ಮುದ್ದುಪಳನಿ ಬರೆದಿರುವ 'ರಾಧಿಕಾಸಾಂತ್ವನಮು' ಒಂದು ಪ್ರಮುಖ ಶೃಂಗಾರಕಾವ್ಯವಾಗಿದ್ದು ನೂತನ ವಧೂವರರಿಗೆ ಶೃಂಗಾರಪಾಠ ಕಲಿಸುವುದಾಗಿದೆ. ಶ್ರೀಕೃಷ್ಣದೇವರಾಯನ 'ಆಮುಕ್ತಮೌಲ್ಯದಾ'ವಿನಲ್ಲಿ ಹೇರಳವಾದ ಶೃಂಗಾರವರ್ಣನೆಗಳಿವೆ. ಅಂತೆಯೇ ಅಲ್ಲಸಾನಿ ಪೆದ್ದಣ್ಣನ 'ಮನುಚರಿತಮು', ರಾಮರಾಜಭೂಷಣನ 'ವಸುಚರಿತಮು', ಶ್ರೀನಾಥನ 'ಶೃಂಗಾರನೈಷಧಮು', ಮೊದಲಾದ ಅನೇಕ ಶೃಂಗಾರಕಾವ್ಯಗಳಿವೆ. ಈ ಸಾಲಿನಲ್ಲಿ ಕ್ಷೇತ್ರಯ್ಯ, ಅನ್ನಮಾಚಾರ್ಯರ ಶೃಂಗಾರ ಭಕ್ತಿಗೀತೆಗಳೂ ಇವೆ. ಹೀಗೆ ಪ್ರಾಚೀನ ಭಾರತೀಯರ ಜೀವನದಲ್ಲಿ, ಸಾಹಿತ್ಯ, ನಾಟ್ಯ, ಸಂಗೀತ, ಶಿಲ್ಪ, ಚಿತ್ರಕಲೆಗಳೆಲ್ಲದರಲ್ಲಿಯೂ ಶೃಂಗಾರವು ಹಾಸುಹೊಕ್ಕಾಗಿತ್ತು. ಶೃಂಗಾರಮಯವಾದ, ರಸಮಯವಾದ ಜೀವನ ನಡೆಸಿ ಅವರು ಧನ್ಯರಾದರು. ಅದರಲ್ಲಿನ ಅನುಭವದ ಒಂದು ಹನಿ ಸೇವಿಸಿದರೂ ನಾವು ಕೃತಾರ್ಥರಾಗುವೆವು! -ಡಾ. ಬಿ.ಆರ್. ಸುಹಾಸ್ 9880451062 (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/52390ಗೆ ಭೇಟಿನೀಡಿ.