ಪ್ರಾಚೀನ ಭಾರತದಲ್ಲಿ ಶೃಂಗಾರ (ಭಾಗ-2) ಕಾವ್ಯಗಳಲ್ಲಿ ವರ್ಣಿತವಾಗುವ ಶೃಂಗಾರದ ವಿಚಾರಗಳನ್ನು ವಿವರಿಸುವ.. ಕಾವ್ಯಗಳಲ್ಲಿ ವರ್ಣಿತವಾಗುವ ಶೃಂಗಾರದ ವಿಚಾರಗಳನ್ನು ವಿವರಿಸುವ ಲಕ್ಷಣ ಗ್ರಂಥಗಳೂ ಸಂಸ್ಕೃತದಲ್ಲಿ ಹಲವಾರಿವೆ. ಉದಾಹರಣೆಗೆ ಭಾನುದತ್ತನ 'ರಸಮಂಜರಿ' ಹಾಗೂ 'ರಸತರಂಗಿಣಿ', ರುದ್ರಭಟ್ಟನ 'ಶೃಂಗಾರತಿಲಕ', ರೂಪಗೋಸ್ವಾಮಿಯ 'ಉಜ್ಜಲನೀಲಮಣಿ', ಸಂತ ಅಕ್ಬರ್‌ಶಹನ 'ಶೃಂಗಾರಮಂಜರಿ' ಮೊದಲಾದವು. ಅಲ್ಲದೇ ಭರತನ 'ನಾಟ್ಯಶಾಸ್ತ್ರ', ರುದ್ರಟನ ಕಾವ್ಯಾಲಂಕಾರ, ಭೋಜನ 'ಶೃಂಗಾರಪ್ರಕಾಶ' ಹಾಗೂ 'ಸರಸ್ವತೀಕಂಠಾಭರಣ', ಆನಂದವರ್ಧನನ 'ಧ್ವನ್ಯಾಲೋಕ', ಮಮ್ಮಟನ 'ಕಾವ್ಯಪ್ರಕಾಶ' ಮೊದಲಾದ ಲಕ್ಷಣ ಗ್ರಂಥಗಳಲ್ಲೆಲ್ಲಾ ಶೃಂಗಾರದ ವಿಚಾರಗಳು ಬರುತ್ತವೆ. ಇವುಗಳಲ್ಲಿನ ಶೃಂಗಾರದ ವಿಚಾರಗಳನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು. ಶೃಂಗಾರಕಾವ್ಯಗಳಲ್ಲಿ ದಂಪತಿಗಳು ಅಥವಾ ಪ್ರೇಮಿಗಳನ್ನು ನಾಯಿಕೆ, ನಾಯಕರೆಂದು ಕರೆಯಲಾಗಿದೆ. ನಾಯಕನ ಪ್ರೇಮಕ್ಕೆ ಸಹಾಯಕರಾದ ಕೆಲ ಮಿತ್ರರು ಅವನಿಗಿರುತ್ತಾರೆ. ವಿಟ (ಎಲ್ಲಾ ಕಾಮಕಲೆ, ತಂತ್ರಗಳನ್ನು ಬಲ್ಲವನು), ಚೇಟಕ (ನಾಯಕ, ನಾಯಕಿಯರ ಮಿಲನಕ್ಕೆ ಸಹಾಯ ಮಾಡುವವನು), ಪೀಠಮರ್ದ (ಕೋಪ್ನಿಕೊಂಡ ನಾಯಕಿಯನ್ನು ಸಮಾಧಾನಪಡಿಸುವ ಸಹಾಯಕ), ವಿದೂಷಕ (ಹಾಸ್ಯಗಾರ ಸಹಾಯಕ) ಇಂಥ ಮಿತ್ರರು. ಅಂತೆಯೇ ನಾಯಕಿ ಮತ್ತು ನಾಯಕರ ನಡುವೆ ಸಂದೇಶಗಳನ್ನೊಯ್ಯುವ ದೂತಿಯರಿರುತ್ತಾರೆ. ಇವರೆಲ್ಲರನ್ನೂ ಸಂಸ್ಕೃತದ ಶೃಂಗಾರಕಾವ್ಯ ನಾಟಕಗಳಲ್ಲಿ ನೋಡಬಹುದು. ಅನೇಕ ನಾಟಕಗಳಲ್ಲಿ ಬೌದ್ಧ ಸಂನ್ಯ್ನಾನಿಯರೂ ಇಂಥ ದೂತಿ, ಸಹಾಯಕಿಯರಾಗಿರುವುದನ್ನು ನೋಡಬಹುದು. ಶೃಂಗಾರದಲ್ಲಿ ಸಾಮಾನ್ಯವಾಗಿ ಎರಡು ವಿಧಗಳನ್ನು ಗುರುತಿಸಲಾಗಿದೆ. ಅವು ನಾಯಕ ನಾಯಿಕೆಯರು ಒಟ್ಟಿಗಿದ್ದು ಸುಖವನ್ನನುಭವಿಸುವ ಸಂಭೋಗ ಅಥವಾ ಸಂಯೋಗಶೃಂಗಾರ ಮತ್ತು ಅವರು ಬೇರೆಯಾಗಿದ್ದು ದುಃಖ ಅಥವಾ ವಿರಹವೇದನೆಯನ್ನನುಭವಿಸುವ ವಿಪ್ರಲಂಭಶೃಂಗಾರ. ಇನ್ನು ನಾಯಕ, ನಾಯಕಿಯರನ್ನು ಹಲವಾರು ಬಗೆಗಳಲ್ಲಿ ವಿಂಗಡ್ನಿದ್ದಾರೆ. ಕೆಲವು ಸರಳ ಹಾಗೂ ಪ್ರ್ನದ್ಧ ವಿಂಗಡಣೆಗಳನ್ನು ನೋಡೋಣ. ನಾಯಕರಲ್ಲಿ ಮುಖ್ಯವಾಗಿ, ಅನುಕೂಲ (ಒಬ್ಬಳೇ ನಾಯಿಕೆಯಲ್ಲಿ ಅನುರಕ್ತನಾಗಿರುವ ದಕ್ಷಿಣ (ಒಬ್ಬ ನಾಯಕಿಯಲ್ಲಿ ಅನುರಕ್ತನಾಗಿದ್ದರೂ ಅವನ ಹೃದಯ ಇನ್ನೊಬ್ಬಳಿಗೂ ವಶವಾಗಿರುತ್ತದೆ), ಕುಟಿಲ ಅಥವಾ ಶಠ (ಮೋಸಗಾರ: ಬಾಹ್ಯದಲ್ಲಿ ಒಬ್ಬಳನ್ನು ಪ್ರೀತಿಸುವಂತೆ ತೋರಿಕೊಳ್ಳುವ ಇವನು ಗೂಢವಾಗಿ ಇನ್ನೊಬ್ಬಳನ್ನು ಪ್ರೀತಿಸುತ್ತಿರುತ್ತಾನೆ), ಮತ್ತು ಧೃಷ್ಟ (ನಿರ್ಲಜ್ಜನೂ ಅವಿಶ್ವ್ನಾಯೂ ಆದ ನಾಯಕ) ಎಂಬ ಬಗೆಗಳಿದ್ದಾರೆ. ನಾಯಕಿಯರ ಒಂದು ವಿಂಗಡಣೆ, ್ನ್ವಯಾ (ನಾಯಕನಿಗೆ ಸ್ವಂತ ನಾಯಿಕೆ, ಪತ್ನಿ), ಅನ್ಯಾ (ನಾಯಕನಿಗೆ ಸೇರಿರದ, ಪರಕೀಯ ನಾಯಕಿ) ಮತ್ತು ಸಾಧಾರಣಾ (ಯಾರಿಗಾದರೂ ಭೋಗ್ಯವಾದ ್ನ್ತ್ರ, ವೇಶ್ಯೆ). ಇನ್ನೊಂದು ವಿಂಗಡಣೆ, ಮುಗ್ಧಾ (ಯೌವನಾರಂಭದ, ಸರಳ ಮುಗ್ಧ ಸ್ವಭಾವದ ಹೆಣ್ಣು), ಮಧ್ಯಾ (ಯೌವನದ ಮಧ್ಯದಲ್ಲಿರುವ ಹೆಣ್ಣು), ಪ್ರಗಲ್ಫಾ (ಬುದ್ಧಿ ಬೆಳೆದಿರುವ, ಬಹಳ ಧೈರ್ಯವಂತಳಾದ, ಗಂಡನನ್ನೇ ಆಳುವ ಹೆಣ್ಣು). ಮತ್ತೊಂದು ವಿಂಗಡಣೆ, ಧೀರಾ (ತನ್ನ ಪತಿ ಅಥವಾ ಪ್ರೇಮಿಯ ಮೇಲೆ ಈರ್ಷ್ಯೆ, ಕೋಪಗಳಿದ್ದರೂ ನೇರವಾಗಿ ತೋರಿಸದೇ ವ್ಯಂಗ್ಯವಾಗಿ ತೋರಿಸುವವಳು, ವ್ಯಂಗ್ಯಕೋಪಪ್ರಕಾಶಿಕೆ), ಅಧೀರಾ (ಕೋಪವನ್ನು ನೇರವಾಗಿ ವ್ಯಕ್ತಪಡಿಸುವಳು, ಅವ್ಯಂಗ್ಯಕೋಪಪ್ರಕಾಶಿಕೆ), ಧೀರಾಧೀರಾ (ಕೋಪವನ್ನು ಸರದಿಯಂತೆ ವ್ಯಂಗ್ಯವಾಗಿ ಹಾಗೂ ನೇರವಾಗಿ ವ್ಯಕ್ತಪಡಿಸುವ ನಾಯಿಕೆ, ವ್ಯಂಗ್ಯಾವ್ಯಂಗ್ಯಕೋಪಪ್ರಕಾಶಿಕೆ). ಶೃಂಗಾರಕಾವ್ಯಗಳಲ್ಲಿ ಅಷ್ಟವಿಧ ನಾಯಕಿಯರು ಬಹಳ ಪ್ರ್ನದ್ಧ. ಇವರುಗಳೆಂದರೆ, ಸ್ವಾಧೀನಪತಿಕಾ (ಪತಿಯನ್ನು ಸಂಪೂರ್ಣವಾಗಿ ತನ್ನ ಹತೋಟಿಯಲ್ಲಿಟ್ಟುಕೊಂಡಿರುವವಳು), ವಾಸಕಸಜ್ಜಾ (ಸೊಗಸಾದ ವಸ್ತ್ರಾಭರಣಗಳಿಂದ ತನ್ನನ್ನು ್ನಂಗರ್ನಿಕೊಂಡು, ಅಂತೆಯೇ ಮನೆಯನ್ನು ಸಜ್ಜಾಗಿಟ್ಟುಕೊಂಡು ಪ್ರಿಯತಮನು ಇಂಥ ಸಮಯಕ್ಕೆ ಬರುವನೆಂದು ಕಾಯುವವಳು, ವಿರಹೋತ್ಕಂಠಿತಾ (ವಿರಹವಿಹ್ವಲಳು), ಖಂಡಿತಾ (ರತಿಚಿಹ್ನೆಗಳಿಂದ ಅನ್ಯ್ನ್ತ್ರ ಸಂಭೋಗಶಂಕೆ ಸೂಚಿಸುವ ಪತಿಯಲ್ಲಿ ಕೋಪ ತೋರುವವಳು), ಕಲಹಾಂತರಿತಾ (ಪತಿಯಿಂದ ಜಗಳವಾಡಿ ಅವನಿಂದ ಬೇರೆಯಾಗಿ ಇನ್ನೂ ಕೋಪವಿದ್ದರೂ ಪಶ್ಚಾತ್ತಾಪಪಡುವವಳು), ವಿಪ್ರಲಬ್ಧಾ (ಪ್ರಿಯನು ಹೇಳಿರುವ ಸಂಕೇತ ಸ್ಥಳಕ್ಕೆ ತಾನು ಬಂದಿದ್ದರೂ ಅವನು ಬರದೇ ಆಶಾಭಂಗಗೊಂಡವಳು), ಪ್ರೋಷಿತ್ಪತಿಕಾ (ಪರದೇಶದ ಪ್ರವಾಸಕ್ಕೆ ಹೋಗಿರುವ ನಾಯಕನ ದುಃಖಿತ ಪತ್ನಿ), ಅಭಿಸಾರಿಕಾ (ಪ್ರಿಯನನ್ನು ಭೇಟಿ ಮಾಡಲು ಸಂಕೇತಸ್ಥಳಕ್ಕೆ ಹೋಗುವ ಹೆಣ್ಣು). ಹೀಗೆ ಅನೇಕ ಬಗೆಯ ಶೃಂಗಾರ ನಾಯಕ, ನಾಯಕಿಯರಿದ್ದಾರೆ. ಇಲ್ಲಿ ಪ್ರಮುಖವಾದ ಕೆಲವನ್ನು ಹೇಳಲಾಗಿದೆಯಷ್ಟೆ. ಈ ವಿವಿಧ ಬಗೆಯ ನಾಯಕ, ನಾಯಕಿಯರ ಮೂಲಕ, ಸಂಸ್ಕೃತ ಕವಿಗಳು, ಪ್ರೇಮ, ಶೃಂಗಾರಗಳ ವಿವಿಧ ಮುಖಗಳನ್ನು ಬಹಳ ಸುಂದರವಾಗಿ ವ್ಯಕ್ತಪಡ್ನಿದ್ದಾರೆ. ಈಗ ಪ್ರ್ನದ್ಧವಾದ ಶೃಂಗಾರಕಾವ್ಯಗಳ ಕಿರುಪರಿಚಯ ಮಾಡಿಕೊಳ್ಳೋಣ. ಕಾಳಿದಾಸನೇ ಇಂಥ ಶೃಂಗಾರಕಾವ್ಯಗಳ ಪ್ರವರ್ತಕನೆಂದು ಹೇಳುತ್ತಾರೆ. ಅವನ 'ಮೇಘದೂತ', 'ಋತುಸಂಹಾರ', ಹಾಗೂ ಅವನದೆಂದೇ ಹೇಳಲಾಗಿರುವ 'ಶೃಂಗಾರತಿಲಕ', 'ಪುಷ್ಪಬಾಣವಿಲಾಸ', 'ಘಟಕರ್ಪರ'ಗಳು ಇಂಥ ಶೃಂಗಾರಕಾವ್ಯಗಳು! ಆದರೆ ಕಾಳಿದಾಸನಿಗೆ ಶಾತವಾಹನರ ಹಾಲಮಹಾರಾಜನ 'ಗಾಥಾಸಪ್ತಶತೀ' ಎಂಬ ಮಹಾರಾಷ್ಟ್ರೀಪ್ರಾಕೃತಭಾಷೆಯ ಪ್ರೇಮಗೀತೆಗಳ ಸಂಕಲನ ಗ್ರಂಥ ಸ್ಫೂರ್ತಿ ಕೊಟ್ಟಿತೆಂದು ವಿದ್ವಾಂಸರು ಹೇಳುತ್ತಾರೆ. ಏಳುನೂರು ಸುಂದರ ಪದ್ಯಗಳುಳ್ಳ 'ಗಾಥಾಸಪ್ತಶತೀ', ಗ್ರಾಮೀಣ ಸೊಗಡನ್ನು ಹೊಂದಿದೆ. ಇದರ ಪದ್ಯಗಳು ಗ್ರಾಮೀಣ ರೀತಿಯ ಶೃಂಗಾರವನ್ನು ಚಿತ್ರಿಸುತ್ತವೆ. ಹಾಗಾಗಿ ಇವು ಸಹಜ ಸೌಂದರ್ಯದಿಂದ ಮನಸೆಳೆಯುತ್ತವೆ. ಕಾಳಿದಾಸನ ಮೇಘದೂತವು ವಿಶ್ವದ ಪ್ರೇಮ ಸಾಹಿತ್ಯದಲ್ಲೇ ಒಂದು ಅತ್ಯುತ್ತಮ ಕೃತಿ ಎಂದು ಹೊಗಳ್ನಿಕೊಂಡಿದೆ. ಇದು ತನ್ನ ಪತ್ನಿಯಿಂದ ಬೇರೆಯಾಗಿರುವ ಯಕ್ಷನೊಬ್ಬನು ಅವಳಿಗೆ ಒಂದು ಮೇಘದ ಮೂಲಕ ಪ್ರೇಮಸಂದೇಶ ಕಳಿಸುವುದು ಮತ್ತು ಅದು ದಾರಿಯಲ್ಲಿ ಹೋಗುವಾಗ ಕಾಣ್ನಗುವ ಪ್ರಕೃತಿರಮ್ಯ ತಾಣಗಳನ್ನು ವರ್ಣಿಸುವುದನ್ನೊಳಗೊಂಡಿರುವ ಒಂದು ಸುಂದರವಾದ ಖಂಡಕಾವ್ಯ. ಋತುಸಂಹಾರವೂ ಒಂದು ಖಂಡಕಾವ್ಯವಾಗಿದ್ದು, ಇದು ಆರು ಋತುಗಳನ್ನೂ, ಆ ಋತುಗಳಲ್ಲಿ ಪ್ರೇಮಿಗಳು ಹೇಗೆ ಸುಖಿಸುವರೆಂದೂ ವರ್ಣಿಸುತ್ತದೆ. ಕಾಳಿದಾಸನದೆಂದೇ ಹೇಳಲಾಗಿರುವ, ಆದರೆ ಭಿನ್ನಾಭಿಪ್ರಾಯವಿರುವ ಶೃಂಗಾರತಿಲಕ ಮತ್ತು ಪುಷ್ಪಬಾಣವಿಲಾಸಗಳು, ಬಿಡಿ ಬಿಡಿ ಮುಕ್ತಕಗಳ ಪುಟ್ಟ ಕಾವ್ಯಗಳು. ಅಂತೆಯೇ 'ಘಟಕರ್ಪರ', ಕಾಳಿದಾಸನದೆಂದು ಕೆಲವರು ಹೇಳಿದರೆ, ಘಟಕರ್ಪರನೆಂಬ ಕವಿಯೇ ಬರೆದುದು ಎಂದು ಕೆಲವರು ಹೇಳುತ್ತಾರೆ. ಪ್ರಿಯತಮನನ್ನು ಕಾಯುವ ವಿರಹಿಣಿಯ ಸುಂದರ ಚಿತ್ರಣ ಈ ಪುಟ್ಟ ಕಾವ್ಯದಲ್ಲಿದೆ. ಕಾಳಿದಾಸನ ಶ್ರೀಮಂತ ವರ್ಣನೆಯನ್ನು ಮೇಘದೂತದ ಒಂದು ಪದ್ಯದಲ್ಲಿ ಯಕ್ಷನು ಮೇಘಕ್ಕೆ ತನ್ನ ಪತ್ನಿಯ ಸೌಂದರ್ಯವನ್ನು ವರ್ಣಿಸುವಲ್ಲಿ ನೋಡಬಹುದು- ತನ್ವೀ ಶ್ಯಾಮಾ ಶಿಖರಿದಶನಾ ಪಕ್ವಬಿಂಬಾಧರೋಷ್ಠೀ, ಮಧ್ಯೇ ಕ್ಷಾಮಾ ಚಕಿತಹರಿಣೀಪ್ರೇಕ್ಷಣಾ ನಿಮ್ಮನಾಭಿಃ ಶ್ರೋಣೀ ಭಾರಾದಲಸಗಮನಾ ಸ್ತೋಕನಮ್ರಾ ಸ್ತನಾಭ್ಯಾಂ ಯಾ ತತ್ರ ಸ್ಯಾದ್ಯುವತಿವಿಷಯಾ ಸೃಷ್ಟಿರಾದ್ಯೇವ ಧಾತುಃ ॥ 'ಅಲ್ಲಿರುವ ತೆಳು ತನುವಿನ ಆ ಶ್ಯಾಮಲ ಹೆಣ್ಣು, ಸೊಗಸಾದ ಚೂಪು ಹಲ್ಲುಗಳನ್ನೂ ಪಕ್ವವಾದ ಬಿಂಬಫಲದಂಥ ಕೆಂಪಾದ ಅಧರವನ್ನೂ ಹೊಂದಿದ್ದು, ಸಣ್ಣ ನಡುವನ್ನೂ ಚಕಿತಗೊಂಡ ಜಿಂಕೆಯ ಕಂಗಳಂಥ ಕಂಗಳನ್ನೂ ಆಳವಾದ ಸುಂದರ ನಾಭಿಯನ್ನೂ ಹೊಂದಿರುತ್ತಾಳೆ! ನಿತಂಬಗಳ ಭಾರದಿಂದ ನಿಧಾನವಾಗಿ ನಡೆಯುವ ಅವಳು, ಕುಚಗಳ ಭಾರದಿಂದ ಸ್ವಲ್ಪ ಬಾಗಿರುತ್ತಾಳೆ! ಹೀಗಿರುವ ಅವಳು, ಹೆಣ್ಣನ್ನು ಸೃಷ್ಟಿಸುವಲ್ಲಿ ಸೃಷ್ಟಿಕರ್ತನ ಪ್ರಥಮ ಪ್ರಯತ್ನದಂತಿರುವಳು!' -ಡಾ. ಬಿ.ಆರ್. ಸುಹಾಸ್ 9880451062 (ಮುಂದುವರೆಯುವುದು..) (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/51515ಗೆ ಭೇಟಿನೀಡಿ.