ಹೊಸ ವರ್ಷಕ್ಕೆ ಹೊಸ ಸಂಕಲ್ಪ ಹಳೆಯ ನೋವು, ನೆನಪುಗಳನ್ನೆಲ್ಲಾ ಬದಿಗೆ ಸರಿಸಿ ಹೊಸದೇನನ್ನೋ... ಪಟ್ಟಿ ಮಾಡಿಕೊಂಡಿದ್ದೇ ಗಟ್ಟಿ!? ಹಳೆಯ ನೋವು, ನೆನಪುಗಳನ್ನೆಲ್ಲಾ ಬದಿಗೆ ಸರಿಸಿ ಹೊಸದೇನನ್ನೋ ಹೊತ್ತು ಬಂದಿದೆ ಮತ್ತೊಂದು ವರುಷ. ಹಿಂದಿನ ವರ್ಷ ಹಾಕಿಕೊಂಡ ಸಂಕಲ್ಪ (ರೆಸಲೂಷನ್ಸ್)ಗಳೆಲ್ಲಾ ಈಡೇರದೆ ಹಾಗೆಯೇ ಉಳಿದಿವೆ ಎನ್ನುವುದು ಡೈರಿ ತೆಗೆದಾಗ ನಮಗೆ ಕಾಡುವ ನೋವು. ಎಲ್ಲಿ ಮರೆತೆವು? ಏಕೆ ಮರೆತೆವು? ಮತ್ತಷ್ಟು ಪ್ರಯತ್ನಿಸಿದ್ದರೆ ಜೀವನ ಮತ್ಯಾವುದೋ(ಬಯಸಿದ) ಹಾದಿಯ ಹಿಡಿಯುತ್ತಿತ್ತಾ? ಬರೆದಿಟ್ಟುಕೊಳ್ಳುವಾಗ ಇದ್ದ ಆಸಕ್ತಿ, ತುಡಿತ, ದಿನಗಳು ಬೆಳಕಾಗಿ ಇರುಳ ಕಾಣುವುದರೊಳಗೆ ಕಮರಿ ಹೋಯಿತಾ? ಪ್ರತಿ ಡಿಸೆಂಬರ್ ಅಂತ್ಯದಲ್ಲೂ ಹೊಸ ಡೈರಿಯ ತಂದುಕೊಂಡು ಜನವರಿಯ ಮೊದಲ ಮುಂಜಾವಿನ ಬೆಳಗಿನಿಂದ ನಾವು ಏನನ್ನು ಮಾಡಬೇಕು? ಹೇಗೆ ಇರಬೇಕು? ಎಂದೆಲ್ಲಾ ಪ್ರತಿ ವರುಷ ಬರೆದಿಟ್ಟ ಕಾರ್ಯಪಟ್ಟಿಯಲ್ಲಿನ ಎಲ್ಲಾ ಸಂಕಲ್ಪಗಳೂ ಕೈಗೆ ನಿಲುಕದೆ ಮುಂದಿನ ವರ್ಷಕ್ಕೆ ಎತ್ತಂಗಡಿಯಾಗುತ್ತಲೇ ಬರುತ್ತಿವೆ. ವರುಷದ ಕೊನೆಯ ಹಾಗೂ ಮೊದಲ ವಾರ ಇರುವಷ್ಟು ಚಾಕಚಕ್ಯತೆ ಇನ್ನುಳಿದ ದಿನಗಳಲ್ಲಿ ಸೋಮಾರಿಯಾಗಿ ಮೂಲೆಗುಂಪಾಗಿರುತ್ತದೆ. ಈ ರೀತಿ ಕಸದ ಬುಟ್ಟಿ ಸೇರಿದ ಕಾರ್ಯಕ್ರಮದ ಪಟ್ಟಿಯಲ್ಲಿ ನಾವು, ನಮ್ಮವರ, ನೆರೆಹೊರೆಯವರ, ಸಮಾಜದ ಒಳಿತಿಗಾಗಿಯೂ ಯೋಚಿಸಿ ಯೋಜಿಸಿದ ಸಂಕಲ್ಪಗಳಿರುತ್ತವೆ. ನಿನ್ನೆಗಳಲ್ಲಿ ಕಂಡ ಸೋಲುಗಳನ್ನು ನಾಳಿನ ಗೆಲುವಾಗಿಸುವ ತಂತ್ರಗಳೂ ಸೇರಿಕೊಂಡಿರುತ್ತವೆ. ಆದರೆಅವುಗಳೆಲ್ಲಾ ಹೊಸತಿನ ಸ್ವಲ್ಪ ದಿನ ನೆನಪಿದ್ದು, ಆಮೇಲೆ ನಮ್ಮ ಮನದಿಂದ ಇದ್ದೂ ಇಲ್ಲದಷ್ಟು ದೂರ ನಡೆದುಬಿಟ್ಟಿರುತ್ತವೆ. ಸಾಲದೆಂಬಂತೆ ವರುಷದ ಅಂಚಿನಲ್ಲಿ ನೀನು ನನ್ನನ್ನು ಮೆಟ್ಟಿ ನಿಲ್ಲಲೇ ಇಲ್ಲ ಎಂದು ಅಣಕಮಾಡಿ ನಗುತ್ತವೆ. ನಾವು ಹಾಕಿಕೊಂಡ ರೆಸಲೂಷನ್ಸ್‌ನ ಪಾಡು ಇದೇ ಅಲ್ಲವೇ? 2015ಕ್ಕೆ 15 ರೆಸಲೂಷನ್ಸ್ ಸಂಕಲ್ಪಗಳನ್ನು ಬರೆದಿಟ್ಟುಕೊಂಡ ಮಾತ್ರಕ್ಕೆ ಬದುಕಿನ ಪುಟಗಳಲ್ಲಿ ಅಚ್ಚಾಗದು. ನಮ್ಮ ಪ್ರಯತ್ನ ಎನ್ನುವ ನೀರು ಸೇರಿದರೇನೇ ಕಂಡ ಕನಸು ಹೆಮ್ಮರವಾಗಿ ನನಸಾಗುವುದು. ಆ ರೀತಿ ಬಯಸಿದ ಸಂಕಲ್ಪಗಳಲ್ಲಿ ನಾವು ಸಾಧಿಸಲಾಗದ, ಮಾಡಲಾಗದ, ಉಪಯೋಗವಿಲ್ಲದ, ಕಾಟಾಚಾರಕ್ಕೆ, ಪ್ರತಿಷ್ಠೆಗೆಂದು ಮಾಡಿಕೊಂಡ ಹುಚ್ಚುತನಗಳೇ ಹೆಚ್ಚು. ಅದಕ್ಕಾಗಿಯೇ ವರುಷಗಳು ತುಂಬಿದರೂ, ಡೈರಿಯ ಹಳೆಯ ಪುಟಗಳು ಮಾಸಿದರೂ ಹೊಸ ಪುಟಕ್ಕೆ ಸ್ಥಳಾಂತರಿಸಿ ಯಾವುದಾದರೂ ಲಾಟರಿ ಹೊಡೆದೋ, ಮ್ಯಾಜಿಕ್ ಆಗಿಯೋ ಘಟಿಸಲೆಂದು ನಮ್ಮನ್ನು ಕಾದು ಕುಳಿತಿರುವಂತೆ ಮಾಡುತ್ತವೆ. ವರುಷದ ಅಂಚಿಗೆ ಬಂದಾಗ ನಮ್ಮ ಅದೃಷ್ಟವ ಶಪಿಸಿ ಕೈತೊಳೆದುಕೊಂಡು ಬಿಡುತ್ತೇವೆ, ಅಲ್ಲವೇ? ಅದರ ಬದಲು ಕೈಗೆಟಕುವ, ಸಂತಸ ತರುವ, ನಾಲ್ಕು ಜನರೆದುರಿಗೆ ನಮ್ಮನ್ನು ಎದ್ದು ಕಾಣುವಂತೆ ಮಾಡುವ ಸಂಕಲ್ಪಗಳಿಗೆ ಒತ್ತು ನೀಡಿದರೆ ಬರಲಿರುವ ನಾಳೆಗಳು ನಮ್ಮ ಮುಖದಲ್ಲಿ ಮಂದಹಾಸ ಮಾಸದಂತೆ ಮಾಡುತ್ತವೆ. ಅಂತಹ ಬದುಕು ನಮ್ಮದಾಗಬೇಕೆಂದರೆ ಕೆಳಗಿನ 15 ದೃಢ ಸಂಕಲ್ಪಗಳಲ್ಲಿ ನಾವು ಭಾಗಿಯಾಗಬೇಕು. 1. ಕಳೆದ ವರ್ಷದ ಉತ್ತಮ ಸಾಧನೆಯನ್ನು ಮೆಲುಕು ಹಾಕುತ್ತಾ ಬರುವ ದಿನಗಳಿಗೊಂದಷ್ಟು ಆತ್ಮವಿಶ್ವಾಸವನ್ನುಬೆಳೆಸಿಕೊಳ್ಳೋಣ. ಎಷ್ಟೇ ಕಷ್ಟ ಬಂದರೂ ದೃಢವಾಗಿ ಹೆಜ್ಜೆ ಇಡೋಣ. 2. ಕಷ್ಟಗಳನ್ನು ನೋಡುವ ದೃಷ್ಟಿಯನ್ನು ಬದಲಾಯಿಸಿಕೊಂಡು, ಅವುಗಳನ್ನು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರೇರಕಗಳಂತೆ ಕಾಣುವ ಭಾವವನ್ನು ಬೆಳೆಸಿಕೊಳ್ಳೋಣ. ಬರುವ ಸಂಕಟ, ಕಷ್ಟ, ರೋಗ, ಕಠಿಣ ಸಂದರ್ಭಗಳನ್ನು ಯಾವುದೋ ಜನ್ಮದ ಶಾಪ ಎಂದು ಭಾವಿಸದೆ ನಮ್ಮನ್ನು ಹೆಚ್ಚು ಶಕ್ತರನ್ನಾಗಿಸುವ ಸೂತ್ರಗಳೆಂದು ತಿಳಿಯೋಣ. 3. ನನ್ನಿಂದ ಸಾಧ್ಯವಿಲ್ಲ ಎಂದು ಸೋಲುಂಡು ಹಿಂದಕ್ಕೆ ಸರಿಯುವ ನಿರ್ಧಾರವನ್ನು ಬದಲಿಸಿ ಮರಳಿ ಯತ್ನವ ಮಾಡಲು ಮನಸ್ಸು ಮಾಡಿ ಸೋಲಿಗೆ ಕಾರಣ ಹುಡುಕಿ, ಆತ್ಮವಿಶ್ವಾಸ ಮತ್ತು ಸ್ಥೈರ್ಯದಿಂದ ಹೆಜ್ಜೆ ಹಾಕೋಣ. 4. ಪರಿಸ್ಥಿತಿ ಎಂತಹದ್ದೇ ಆದರೂ ನಾಳಿನ ಭರವಸೆಯ ಹಾಗೆಯೇ ಉಳಿಸಿಕೊಳ್ಳೋಣ. ಸೋಲಿಗೆ ಸೋತು ಹೋಗದೆ ನಮ್ಮ ವ್ಯಕ್ತಿತ್ವವನ್ನು ಕೊರೆದು ಅತ್ಯುತ್ತಮ ಶಿಲ್ಪವನ್ನು ಹೊರಹೊಮ್ಮಿಸೋಣ. 5. ತಾಳ್ಮೆ, ಸಹನೆ, ಉತ್ಸಾಹ, ಕ್ರಿಯಾಶೀಲತೆ, ಭರವಸೆಗಳನ್ನು ಬದುಕಿನ ಯಾವುದೇ ಸಂದರ್ಭದಲ್ಲಿಯೂ ಕಳೆದುಕೊಳ್ಳದೆ ಧೈರ್ಯವಾಗಿ ಮುನ್ನುಗ್ಗೋಣ. 6. ಸಾಧ್ಯವಾಗದು ಎಂದು ಕೈಕಟ್ಟಿ ಕುಳಿತುಕೊಳ್ಳದೆ, ಸಾಧ್ಯವಿರುವ ಕೆಲಸಗಳನ್ನು ಮಾಡುತ್ತಲೇ ಇದ್ದರೆ ಆಕಾಶದೆತ್ತರದ ಪರ್ವತವನ್ನೂ ನೆಲಸಮಮಾಡಬಹುದು ಎಂದು ಸೂಕ್ಷ್ಮಜೀವಿಯಾದ ಇರುವೆಯಿಂದ ಕಲಿಯೋಣ. 7. ನಮ್ಮ ಯಶಸ್ಸಿನ ಮುನ್ನುಡಿ ಭರವಸೆಯೇ ಆಗಿರಲಿ. ಬಾಣವನ್ನು ಹಿಂದಕ್ಕೆಳೆದು ಬಿಟ್ಟರೇನೇ ಮುಂದೆ ಸಾಗುವುದು. ಸಂಕಟ, ಕಷ್ಟಗಳು ಬಂದಾಗ ಹೆದರದೆ ಅವು ನಮ್ಮನ್ನು ಹಿಂದಿಕ್ಕಲು ಬಿಡದೆ ನಾವೇ ಅವುಗಳಿಗಿಂತ ಮುಂದೆ ಸಾಗಿ ಮುಗುಳ್ನಗೆ ಚೆಲ್ಲೋಣ. 8. ನಮ್ಮ ಹವ್ಯಾಸ ಬದಲಿಸಿಕೊಂಡಾಗ ಕಷ್ಟವೂ ಬದಲಾಗುವ ಸಾಧ್ಯತೆಯೇ ಹೆಚ್ಚು. ನೋಡುವ ದೃಷ್ಟಿಕೋನಬದಲಾದಾಗ ದೃಶ್ಯವೂ ಬದಲಾಗುತ್ತದೆ. ನಾವು ಸಾಗುತ್ತಿರುವ ದೋಣಿ ಬದಲಿಸುವ ಅವಶ್ಯಕತೆ ಇಲ್ಲ. ದಿಕ್ಕನ್ನುಬದಲಿಸಿದರೆ ಸಾಕು. ದಡ ಸೇರುವುದಂತೂ ಗ್ಯಾರಂಟಿ. 9. ಸಮಸ್ಯೆಗಳು ಎದುರಾಗಿವೆ ಎಂದು ಬೆಳಗಿನಿಂದ ಸಂಜೆಯವರೆಗೆ ಚಿಂತಿಸುತ್ತಾ ಕೂರುವ ಬದಲು 'ಹೋಗಿ ಬನ್ನಿ ಗೆಳೆಯರೆ' ಎಂದು ಸಮಸ್ಯೆಗಳಿಗೆ ಒಂದು ನಮಸ್ಕಾರ ಹಾಕೋಣ. ಚಿಂತೆ ಚಿತೆಗೆ ದಾರಿ ತೋರುವುದೇ ವಿನಃ ಸಮಸ್ಯೆಗೆ ಪರಿಹಾರವನ್ನಲ್ಲ. 10. ನೆರೆಹೊರೆಯವರನ್ನು ಪ್ರೀತಿಸಿ, ಆದರಿಸಿ, ಗೌರವಿಸಿ, ಕಷ್ಟದಲ್ಲಿದ್ದಾಗ ಸಹಾಯ ಮಾಡೋಣ. ಇದರಿಂದ ನಾವು ಇತರರಿಗೆ ಮಾದರಿಯಾಗುವುದರ ಜೊತೆಗೆ ಒಬ್ಬಿಬ್ಬರಿಗೆಸ್ಪೂರ್ತಿಯಾಗುತ್ತೇವೆ. 11. ಬೇರೆಯವರಿಗೆ ಇಷ್ಟವಾಗುವಂತೆ ಇರಲು ಹೋಗಿ ಸ್ವಂತಿಕೆ ಕಳೆದುಕೊಂಡು ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಬೇಡ. ಮನುಷ್ಯನ ನಾಲಿಗೆ ಚಪಲಕ್ಕೆಮಹಾತ್ಮರೂ ಬಲಿಯಾಗಿದ್ದಾರೆ ಹಾಗಾಗಿ ಬೇರೆಯವರ ಟೀಕೆಗೆ ಎಂದಿಗೂ ಹೆದರೊಲ್ಲ ಎಂದು ಪ್ರತಿಜ್ಞೆ ಮಾಡೋಣ. 12. ದುಡ್ಡಿಲ್ಲದಿರುವುದು, ಕೆಲಸವಿಲ್ಲದಿರುವುದು, ಬಡವರಾಗಿರುವುದು ನಿಜವಾದ ಬಡತನವಲ್ಲ. ಆತ್ಮವಿಶ್ವಾಸದ ಕೊರತೆ ಇರುವವರು, ಬದುಕನ್ನು ಎದುರಿಸಲು ಸಾಮರ್ಥ್ಯ ಇಲ್ಲದವರು ನಿಜವಾದಬಡವರು ಎನ್ನುವುದನ್ನು ಮನಸ್ಸಿಗೆ ಅರ್ಥ ಮಾಡಿಸಿ ಸಿರಿವಂತಿಕೆಯ ಹೊಸ ಅರ್ಥ ಅರಿಯುವಂತೆ ಮಾಡೋಣ. 13. ನಾಲ್ಕು ದಿನಗಳ ಜೀವನದ ಗೊಂಚಲಿನಲ್ಲಿ ಸಿಗುವ ಒಳ್ಳೆಯವರು ಸಂತಸ ಹಂಚಿ ಹೋಗುತ್ತಾರೆ, ಕೆಟ್ಟವರು ಅನುಭವ ನೀಡುತ್ತಾರೆ, ವಂಚಕರು ಪಾಠ ಕಲಿಸುತ್ತಾರೆ, ಉತ್ತಮ ವ್ಯಕ್ತಿಗಳು ಸದಾ ನೆನಪಿನಲ್ಲಿ ಉಳಿಯುತ್ತಾರೆ... ಈ ವ್ಯಕ್ತಿಗಳಲ್ಲಿ ನೀವು ಯಾರಾಗ ಬಯಸುತ್ತೀರಿ? ಇಂದೇ ನಿರ್ಧರಿಸಿ! 14. ಬದುಕಿನ ಪಯಣ ತುಂಬಾ ಚಿಕ್ಕದು. ಅದನ್ನು ಸುಂದರವಾಗಿಸುವ ದಾಳ ನಮ್ಮ ಕೈಯಲ್ಲೇ ಇದೆ. ನಮ್ಮೊಂದಿಗಿರುವವರನ್ನು ಪ್ರೀತಿಸುತ್ತಾ, ಗೌರವಿಸುತ್ತಾ ಬಾಳನ್ನು ಹಸನು ಮಾಡಿಕೊಳ್ಳೋಣ... ಮೂರ್ಖತನದಿಂದ ಹಾಳು ಮಾಡಿಕೊಳ್ಳುವುದು ಬೇಡ. 15. ಹೊಸ ವರ್ಷದಲ್ಲಿ ಹೊಸ ದೃಷ್ಟಿಕೋನದಿಂದ ಜಗತ್ತನ್ನು ನೋಡೋಣ. ಸೋಲನ್ನು ಸೋಲಿಸುವ ಸಾಮರ್ಥ್ಯ ನಮ್ಮಲ್ಲೇ ಅಡಗಿದೆ ಎನ್ನುವುದನ್ನು ಮನಸ್ಸಿಗೆ ಅರ್ಥ ಮಾಡಿಸಿ ಮುನ್ನುಗ್ಗೋಣ. ಮಾನವೀಯ, ಉತ್ಸಾಹಿ ಮತ್ತು ಕೈಗೆಟುಕುವ ಸಂಕಲ್ಪ ಮಾಡಿ ಸಾಧಿಸಬೇಕಿರುವ, ಬಯಸಿರುವ ಮೇರು ಶಿಖರ ಹತ್ತಲು ನಿಧಾನವಾಗಿ ಹಾದಿಯನ್ನು ಹಸನು ಮಾಡಿಕೊಳ್ಳೋಣ. ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳೋಣ. ನಾಳೆ ನನ್ನದೇ ಎನ್ನುವ ಹಮ್ಮುಬಿಮ್ಮಿನೊಂದಿಗೆ. -ಜಮುನಾ ರಾಣಿ ಎಚ್.ಎಸ್. .@. (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/ಗೆ ಭೇಟಿನೀಡಿ.