ಕಲಿಯುಗದ 'ಹರಿಶ್ಚಂದ್ರ'! ಇವರ ಹೆಸರು ನಿಮಗೆ ಗೊತ್ತಿಲ್ಲವೆ? ಹಾಗಿದ್ದರೆ ನೀವಿನ್ನೂ ಅಪ್‌ಡೇಟ್ ಆಗಿಲ್ಲ. ಸೆಲೆಬ್ರಿಟಿಗಳ ಬಗ್ಗೆ ಹೆಚ್ಚಿನ ಜ್ಞಾನ ಪಡೆಯುವುದು ಅಗತ್ಯವಿದೆ. ಇವರು ಈಗ ಬೆಂಗಳೂರಿನಲ್ಲಿ ಸುತ್ತಾಡುತ್ತಿದ್ದಾರೆ. ಒಂದು ಕಾಲದಲ್ಲಿ ಎಐಸಿಸಿ ಸದಸ್ಯರಾಗಿದ್ದರು. ಕಾಂಗ್ರೆಸ್ ನಾಯಕರಿಗೆಲ್ಲ ಪ್ರೀತಿಪಾತ್ರರಾಗಿದ್ದರು. ಅಂತರಾಷ್ಟ್ರೀಯ ಮಟ್ಟದ ಕಾಂಗ್ರೆಸ್ ನಾಯಕರಿಗೆಲ್ಲ ತಮ್ಮ ಅಮೂಲ್ಯ ನೀತಿಬೋಧೆಯನ್ನೂ, ಕಾಲಜ್ಞಾನವನ್ನೂ ಬೋಧಿಸುತ್ತಿದ್ದರು. ಇವರ ಎಚ್ಚರಿಕೆ ನುಡಿಗಳನ್ನು ಪಾಲಿಸಿದ ನಾಯಕರೆಲ್ಲ ಉದ್ಧಾರವಾಗಿದ್ದಾರಂತೆ, ಕೇಳದೆ ಹೋದವರೆಲ್ಲ ಹಾಳಾಗಿ ಹೋಗಿದ್ದಾರೆ. ಹಾಗಾಂತ ಇವರೇ ಹೇಳಿಕೊಳ್ಳುತ್ತಾರೆ. ಉದಾಹರಣೆಗೆ ನೋಡಿ-1980ರಲ್ಲಿ ಸಂಜಯ್ ಗಾಂಧಿಗೆ ಒಂದು ಮಗು ಜನಿಸಿತು. ಆತ ವರುಣ್ ಗಾಂಧಿ. ಮಗುವಿನದು ಮೂಲಾ ನಕ್ಷತ್ರ, ಆದ್ದರಿಂದ ಮಗುವಿನ ಮುಖವನ್ನು ತಂದೆ ನೋಡಲೇಬಾರದು, ನೋಡಿದರೆ ಅಪಾಯ ಎಂದು ಇವರು ಹೇಳಿದ್ದರು. ಆದರೆ ಸಂಜಯ್ ಮಗುವನ್ನು ನೋಡಿಯೇಬಿಟ್ಟರು. ಅದೇ ವರ್ಷ ಮಾರ್ಚ್‌ನಲ್ಲಿ ಹೆಲಿಕಾಪ್ಟರ್ ಅಪಘಾತವಾಗಿ ಸಂಜಯ್ ಗಾಂಧಿ ಹೊರಟೇ ಹೋದರಲ್ಲ! ತಗೊಳ್ಳಿ ಇನ್ನೊಂದು. 1977ರಲ್ಲಿ ಲೋಕಸಭೆ ಚುನಾವಣೆ ಘೋಷಿಸಲು ಇಂದಿರಾ ಗಾಂಧಿ ತೀರ್ಮಾನಿಸಿದರು. ಬೇಡಾ ತಾಯಿ, ಸೋಲುತ್ತೀರಿ ಎಂದು ಇವರು ಎಚ್ಚರಿಸಿದ್ದರು. ಮೇಡಂ ಕೇಳಲೇ ಇಲ್ಲ. ಚುನಾವಣೆಯಲ್ಲಿ ಮಣ್ಣು ಮುಕ್ಕಿದರು. 1980ರಲ್ಲಿ ನೀವು ಮತ್ತೆ ಪಿಎಂ ಆಗುತ್ತೀರೆಂದು ಹೇಳಿದ್ದ ಇವರ ಕಾಲಜ್ಞಾನ ಇಂದಿರಾ ವಿಚಾರದಲ್ಲಿ ಮತ್ತೆ ನಿಜವಾಯ್ತು. 1984ರ ಫೆಬ್ರುವರಿಯಲ್ಲಿ, ಇದೇ ಅಕ್ಟೋಬರ್‌ನಲ್ಲಿ ಅಂಗರಕ್ಷಕರಿಂದಲೇ ನಿಮ್ಮ ಹತ್ಯೆಯಾಗುತ್ತದೆ, ಎಚ್ಚೆತ್ತುಕೊಳ್ಳಿ ಎಂದು ಎಚ್ಚರಿಕೆ ಸಂದೇಶವನ್ನು ಇಂದಿರಾಗೆ ರವಾನಿಸಿದ್ದರು. ಅಕಟಕಟಾ, ಇಂದಿರಾ ಅದಕ್ಕೆ ಕಿವಿಗೊಡಲೇ ಇಲ್ಲ. ಮುಂದೆ ಏನಾಯ್ತು ಎಂದು ನಿಮಗೇ ಗೊತ್ತಿದೆ. ಇವರ ಭವಿಷ್ಯ ಜ್ಞಾನ ಮೆಚ್ಚಿ ನಿಮ್ಮನ್ನು ವಿದೇಶಾಂಗಮಂತ್ರಿ ಮಾಡುತ್ತೇನೆಂದು ಪಿ.ವಿ.ನರಸಿಂಹರಾವ್ ಹೇಳಿದ್ದರಂತೆ. ಇನ್ನೂ ಮಂತ್ರಿಯಾಗುವ ಆಸೆ ಹೋಗಿಲ್ಲ. ಮುಂದಾಗುವುದೆಲ್ಲ ಇವರಿಗೆ ಹೇಗೆ ಗೊತ್ತಾಗುತ್ತದೆ ಎಂದಿರಾ? ಇವರೇ ಹೇಳುವ ಪ್ರಕಾರ, ಪರಬ್ರಹ್ಮನಿಗೆ ಮಾತ್ರ ಮುಂದಾಗುವುದು ಗೊತ್ತಿರುತ್ತದೆ. ಅಂದ ಹಾಗೆ ಆಧುನಿಕ ಪರಬ್ರಹ್ಮನ ಹೆಸರು ಹೇಳಲು ಮರತೇಬಿಟ್ಟೆ ಎಂದಿರಾ? ಬರೆದಿಟ್ಟುಕೊಳ್ಳಿ - ಹರಿಶ್ಚಂದ್ರ ಗೌಡ. ಮೂಲತಃ ಚಿಕ್ಕಮಗಳೂರು, ಈಗ ಕೇರಾಫ್ ಬೆಂಗಳೂರು. -ನೀತಿನ್ ಕಾಲೆಳೆಯಪ್ಪ