ಹಸಿರು ಪೇಯ: ಗ್ರೀನ್ ಟೀ ಎಂಬ ಮಿರ್ಯಾಕಲ್ ದ್ರವ ಸಪೂರ ಮೈಕಟ್ಟು ಹೊಂದಿರಲು ಯಾರು ತಾನೆ ಇಚ್ಛಿಸುವುದಿಲ್ಲ? ಎಲ್ಲರಿಗೂ ತೆಳಗಾಗಬೇಕು ಎಂಬಾಸೆ. ಅದಕ್ಕಾಗಿ ಜಿಮ್‌ಗೆ ಹೋಗುವುದು, ವಾಕಿಂಕ್, ಜಾಗಿಂಗ್ ಇತ್ಯಾದಿ ಮಾಡುತ್ತೇವೆ. ಆದರೆ ಗ್ರೀನ್ ಟೀ ಸೇವನೆಯಂತಹ ಸರಳ ಉಪಾಯದ ಮೂಲಕ ಸಪೂರ ದೇಹ ಹೊಂದಲು ಸಾಧ್ಯ ಎಂಬುದು ಗೊತ್ತಿದೆಯೇ? ಇದಷ್ಟೆ ಅಲ್ಲ. ಗ್ರೀನ್ ಟೀನಲ್ಲಿ ಇನ್ನೂ ಹತ್ತು ಹಲವಾರು ಆರೋಗ್ಯ ಸಂಬಂಧಿ ಲಾಭಗಳಿವೆ. ಗ್ರೀನ್ ಟೀನಲ್ಲಿ ಹತ್ತು ಹಲವಾರು ಔಷಧಿಯ ಗುಣಗಳಿವೆ. ನಿಮ್ಮ ಇಡೀ ಶರೀರದ ಅಂದ ಹೆಚ್ಚಿಸುವುದರ ಜತೆಗೆ ಚರ್ಮ, ತಲೆಗೂದಲಿಗೂ ಇದು ಲಾಭಕರ. ನಳನಳಿಸುವ ತಲೆಕೂದಲು ಸರಿಸುಮಾರು ವಿಶ್ವದ ಎಲ್ಲೆಡೆ ಇಂದು ಮಹಿಳೆಯರಲ್ಲಿ ನಿಸ್ತೇಜ ಹಾಗೂ ಒರಟು ತಲೆಗೂದಲಿನ ಸಮಸ್ಯೆ ಕಾಣಬಹುದು. ಪುರುಷರಲ್ಲಿ ಬಕ್ಕತಲೆಯ ಸಮಸ್ಯೆ ಇದೆ. ಶರೀರದಲ್ಲಿ ಡಿಹೈಡ್ರೊಟೆಸ್ಟೊಟೆರೊನ್(ಡಿಎಚ್‌ಟಿ) ಪ್ರಮಾಣ ಹೆಚ್ಚಾದಾಗ ಇದು ನಿಸ್ತೇಜ, ದುರ್ಬಲ ಹಾಗೂ ಒರಟು ಕೂದಲು, ಕೂದಲು ಉದುರುವಿಕೆ, ಕೂದಲು ವಿರಳವಾಗುವಿಕೆ ಮುಂತಾದ ಸಮಸ್ಯೆ ಉಂಟು ಮಾಡುತ್ತದೆ. ಪ್ರತಿದಿನ ಒಂದು ಕಪ್ ಗ್ರೀನ್ ಟೀ ಕುಡಿಯುವುದರಿಂದ ತಲೆಗೂದಲಿನ ಸಮಸ್ಯೆಗೆ ಗುಡ್‌ಬೈ ಹೇಳಬಹುದು ಎಂದು ಕೇಶ ತಜ್ಞರು ಹೇಳುತ್ತಾರೆ. ದಟ್ಟವಾದ, ಹೊಳೆಯುವ, ಸೊಂಪಾದ ಕೆಪ್ಪು ಕೂದಲು ನಿಮ್ಮದಾಗುತ್ತದೆ. ಹೊಳೆಯುವ ಮೈಕಾಂತಿ ಗ್ರೀನ್ ಟೀ, ಸ್ವಾಭಾವಿಕ ಆಂಟಿ ಆಕ್ಸಿಡೆಂಟ್ ಹೊಂದಿದ್ದು, ಅಲ್ಟ್ರಾವಯಲೆಟ್(ಎವಿ) ಕಿರಣಗಳು ಮತ್ತು ಇತರ ಮಾಲಿನ್ಯ ಕಾರಕ ವಸ್ತುಗಳ ದುಷ್ಪ್ರಭಾವ ತಡೆಗಟ್ಟಿ ಚರ್ಮಕ್ಕೆ ರಕ್ಷಣೆ ನೀಡುತ್ತದೆ. ಎವಿ ಕಿರಣಗಳು ಚರ್ಮ ಸುಕ್ಕುಗಟ್ಟಲು, ಭಂಗು ಅಥವಾ ಕಲೆ, ಮೊಡವೆ ಮತ್ತು ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಗ್ರೀನ್ ಟೀನಲ್ಲಿ ಬ್ಯಾಕ್ಟಿರಿಯಾ ನಿರೋಧಕ ಗುಣಗಳಿದ್ದು ಮೊಡವೆಗಳ ನಿವಾರಣೆಗೆ ಸಹಕಾರಿ. ಶರೀರ ಚಯಪಚಯ ವ್ಯವಸ್ಥೆ ಉತ್ತಮಪಡಿಸುವ ಮೂಲಕ ಆರೋಗ್ಯಕರ, ಹೊಳೆಯುವ ಮೈಕಾಂತಿ ನೀಡುತ್ತದೆ. ಗ್ರೀನ್ ಟೀಯ ಎಲೆಗಳನ್ನು ಹರ್ಬಲ್ ಫೇಸ್ ಮಾಸ್ಕ್‌ನಂತೆ ಸಹ ಬಳಸಬಹುದಾಗಿದೆ. ಇದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಮೌತ್ ಫ್ರೆಶ್ನರ್ ಉಸಿರಿನ ದುರ್ವಾಸನೆ ತಡೆಯಲು ಗ್ರೀನ್ ಟೀ ಉತ್ತಮ ವಿಧಾನ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಎಲ್ಲ ಬಗೆಯ ಪ್ರಯತ್ನ ಮಾಡಿಯೂ ಸೋತಿರುತ್ತಿರಿ ಎಂದಿಟ್ಟುಕೊಳ್ಳೋಣ. ಚಿಂತಿಸಬೇಡಿ. ಗ್ರೀನ್ ಟೀ ಇಲ್ಲಿ ಪವಾಡಕಾರಿ ಪರಿಣಾಮ ಬೀರುತ್ತದೆ. ಗ್ರೀನ್ ಟೀನಿಂದ ತಯಾರಿಸಲಾದ ಟೂತ್‌ಪೇಸ್ಟ್ ನಿಮ್ಮ ಮತ್ತು ನಿಮ್ಮ ಕುಟುಂಬದ ಸದಸ್ಯರ ಆರೋಗ್ಯ ರಕ್ಷಣೆಯಲ್ಲಿ ಉತ್ತಮ ಪಾತ್ರ ವಹಿಸುತ್ತದೆ. ಮಾರುಕಟ್ಟೆಯಲ್ಲಿ ನಿಮಗೆ ಗ್ರೀನ್ ಟೀ ಅಂಶವಿರುವ ಟೂತ್‌ಪೇಸ್ಟ್ ಸಿಗದ ಪಕ್ಷದಲ್ಲಿ ಮನೆಯಲ್ಲೇ ಇದನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು. 100 ಗ್ರಾಂ ಗ್ರೀನ್ ಟೀ ಪುಡಿಯ ಮೇಲೆ ಒಂದು ಕಪ್ ಕುದಿಯುವ ನೀರು ಸುರಿಯಿರಿ. ಅರ್ಧಗಂಟೆ ಕಾಲ ಹಾಗೆಯೇ ಬಿಡಿ. ನಂತರ ಇದಕ್ಕೆ ಒಂದು ಟೀ ಸ್ಪೂನ್ ಅಡುಗೆ ಸೋಡಾ ಬೆರೆಸಿ ಪೇಸ್ಟ್ ತಯಾರಿಸಿ. ಇದು ಉಸಿರಿನ ದುರ್ವಾಸನೆ ತಡೆಯುವುದಷ್ಟೇ ಅಲ್ಲ ಹಲ್ಲುಗಳ ಆರೋಗ್ಯ ರಕ್ಷಣೆಗೂ ಸಹಕಾರಿ. ಹಿತಕಾರಕ ಮಿಶ್ರಣ ನಿಮ್ಮ ಬಾಹ್ಯ ಆರೋಗ್ಯವಷ್ಟೇ ಅಲ್ಲದೆ ಆಂತರಿಕ ಆರೋಗ್ಯಕ್ಕೆ ಸಹಾ ಗ್ರೀನ್ ಟೀ ನೆರವಾಗುತ್ತದೆ. ಬಳಲಿದ ಕಣ್ಣುಗಳ ಮತ್ತು ಕಳೆಗುಂದಿದ ಮುಖದಲ್ಲಿ ಮತ್ತೆ ಚೈತನ್ಯ ಮೂಡಿಸಲು ಇದು ಸಹಕಾರಿ. ಇದರಲ್ಲಿ ಆಂಟಿಸೆಪ್ಟಿಕ್ ಗುಣಗಳಿರುವ ಕಾರಣ ಗಾಯ, ತರಚುವಿಕೆ, ಸುಟ್ಟ ಗಾಯ ಇತ್ಯಾದಿಗಳಿಗೆ ಇದನ್ನು ಹಚ್ಚಬಹುದು. ಸೂರ್ಯನ ಪ್ರಖರ ಬಿಸಿಲಿಗೆ ನಲುಗಿದ ಚರ್ಮಕ್ಕೂ ಇದು ಪ್ರಯೋಜನಕಾರಿ. ಸ್ವಾಭಾವಿಕ ಪರಿಸರದಲ್ಲಿ ಬೆಳೆದ ಸಾವಯವ ದ್ರೀನ್ ಟೀ ಪ್ರಯೋಜನೆಗಳು ಒಂದೆರಡಲ್ಲ. ಹಲವಾರಿವೆ. ಒಮ್ಮೆ ಪ್ರಯತ್ನಿಸಿ ನೋಡಿ. -ಪ್ರೇಮ್‌ರಾಜ್