ಮಧುರೈಪುರಿ ಭಾರತದ ಸಂಗೀತದ ಇತಿಹಾಸದಲ್ಲಿ ಸುಬ್ಬುಲಕ್ಷ್ಮಿ ಎಂಬ ಹೆಸರು ಕೇವಲ ಹೆಣ್ಣು... ಭಾರತದ ಸಂಗೀತದ ಇತಿಹಾಸದಲ್ಲಿಸುಬ್ಬುಲಕ್ಷ್ಮಿ ಎಂಬ ಹೆಸರು ಕೇವಲ ಹೆಣ್ಣು ಜೀವವೊಂದರ ನಾಮ ಸೂಚಿ ಪದವಲ್ಲ ಅಥವಾ ಸುಲಭದವ್ಯಾಖ್ಯಾನಕ್ಕೆ ಮತ್ತು ವಿವರಣೆಗೆ ಸಿಗುವಂತಹ ಸಡಿಲ ವ್ಯಕ್ತಿತ್ವವೂ ಅವರದಲ್ಲ. ಅದೊಂದು ರೀತಿಯಲ್ಲಿ ಭಾರತದ ಸಂಗೀತ ಶೋತೃಗಳು ಮತ್ತು ಜನಸಾಮಾನ್ಯರ ಮನದಲ್ಲಿ ಸದಾ ಹಸಿರಾಗಿರುವ ಅಂತ್ಯವಿಲ್ಲದ ಸುಪ್ರಭಾತ. ಎಂ.ಎಸ್. ಸುಬ್ಬುಲಕ್ಷ್ಮಿ ಎಂದರೆ, ಕರ್ನಾಟಕ ಸಂಗೀತ, ಎಂ. ಎಸ್. ಸುಬ್ಬುಲಕ್ಷ್ಮಿ ಎಂದರೆ,ಶ್ರೀ ವೆಂಕಟೇಶ್ವರಸುಪ್ರಭಾತ, ಎಂ.ಎಸ್. ಸುಬ್ಬುಲಕ್ಷ್ಮಿ ಎಂದರೆ, ಮಾಸದ ಮುಗುಳ್ನಗೆ, ಎಂ.ಎಸ್.ಸುಬ್ಬುಲಕ್ಷ್ಮಿ ಎಂದರೆ, ಭಾರತದ ಬೆಳಗಿನ ಸೂರ್ಯೋದಯಕ್ಕೆ ಬರೆದ ಹೊಸ ಹೆಸರು ಹೀಗೆ ಯಾವ ಉಪಮೆಗಳನ್ನು ಸೇರಿಸಿ ಕರೆದರೂ ಅದು ಅವರಿಗೆ ಸಲ್ಲುತ್ತದೆ. ಅದು 1996 ರ ಡಿಸೆಂಬರ್ ತಿಂಗಳಿನ ಒಂದು ಸಂಜೆ. ಆ ದಿನ ಮದ್ರಾಸ್ ನಗರದಲ್ಲಿ ನಡೆಯುತ್ತಿದ್ದ ಸಂಗೀತ ಕಛೇರಿಯೊಂದರಲ್ಲಿ ಶ್ರೀಮತಿ ಎಂ.ಎಸ್. ಸುಬ್ಬುಲಕ್ಷ್ಮಿಯವರು ಮೈ ಮರೆತು ಧ್ಯಾನಸ್ಥ ಮನಸ್ಸಿನಿಂದ ದೇವರನಾಮ ಮತ್ತು ಕೀರ್ತನೆಗಳನ್ನು ಹಾಡುತ್ತಿದ್ದರು. ತೀವ್ರ ಭಾವಪರವಶರಾಗಿ ಅವರು ಕಣ್ಮುಚ್ಚಿ ಹಾಡುತ್ತಿದ್ದರೆ, ಶೋತೃಗಳು ಸಹ ಕಣ್ಮುಚ್ಚಿ ಸುಬ್ಬುಲಕ್ಷ್ಮಿಯವರ ಸಂಗೀತದ ಮಾಧುರ್ಯವು ಸೃಷ್ಟಿಸುತ್ತಿದ್ದ ಅನುಭಾವದ ಅಲೆಯಲ್ಲಿ ತೇಲುತ್ತಿದ್ದರು. ಸಂಗೀತ ಕೇಳುತ್ತಿದ್ದ ರಸಿಕರ ಮೊದಲನೆಯ ಸಾಲಿನಲ್ಲಿ ಕುಳಿತಿದ್ದ ಹಿರಿಯ ಕರ್ನಾಟಕ ಸಂಗೀತ ವಿದ್ವಾಂಸ ಚಂಬೈ ವೈದ್ಯನಾಥ ಭಾಗವತರ್ ಅವರ ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಹರಿಯುತ್ತಿತ್ತು. ಅವರು ತಮ್ಮ ಹೆಗಲ ಮೇಲಿದ್ದ ರೇಷ್ಮೆಯ ಶಲ್ಯದಿಂದ ತಮ್ಮ ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದರು. ಕೊನೆಗೊಮ್ಮೆ ತಮ್ಮ ಭಾವೋದ್ವೇಗವನ್ನು ತಡೆಯಲಾರದೆ, ತಮ್ಮ ಎಡ ಮತ್ತು ಬಲದಲ್ಲಿ ಕುಳಿತಿದ್ದ ವಿದ್ವಾಂಸರತ್ತ ತಿರುಗಿ, ನಾವೆಲ್ಲಾ ಹಣಕ್ಕಾಗಿ ಹಾಡುತ್ತೇವೆ, ನೋಡಿ ಈ ಹೆಣ್ಣುಮಗಳು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಾನು ಈ ಭೂಮಿಗೆ ಬಂದಿರುವುದು ಈ ರೀತಿಯ ಸಂಗೀತ ಸೇವೆಗಾಗಿ ಎಂಬಂತೆ ಹಾಡುತ್ತಿದ್ದಾಳೆ ಎನ್ನುತ್ತಾ ಸುಬ್ಬುಲಕ್ಷ್ಮಿಯವರು ಕುಳಿತಿದ್ದ ವೇದಿಕೆಯತ್ತ ಕೈ ಜೋಡಿಸಿ ನಮಿಸಿದರು. ಕರ್ನಾಟಕ ಸಂಗೀತ ಲೋಕದ ಹಿರಿಯ ಜೀವವೊಂದು ತನಗಿಂತ ಕಿರಿಯವಳಾದ ಹೆಣ್ಣುಮಗಳಿಗೆ ಈ ರೀತಿ ಕೈ ಮುಗಿದು ಗೌರವ ಸೂಚಿಸಿದ ಕ್ರಿಯೆಯಲ್ಲಿ ಯಾವುದೇಕೃತಿಮತೆಯಾಗಲಿ ಅಥವಾ ನಾಟಕೀಯ ಭಾವವಾಗಲಿ ಇರಲಿಲ್ಲ. ಹಿರಿಯ ವಿದ್ವಾಂಸರ ಗೌರವಕ್ಕೆ ಈ ರೀತಿ ಪಾತ್ರರಾಗುವ ಎಲ್ಲಾ ಅರ್ಹತೆಗಳು ಸುಬ್ಬುಲಕ್ಷ್ಮಿಯವರಿಗಿತ್ತು. ಏಕೆಂದರೆ, ಸಂಗೀತವೆಂದರೆ ಸುಬ್ಬುಲಕ್ಷ್ಮಿ, ಸುಬ್ಬುಲಕ್ಷ್ಮಿಯೆಂದರೆ, ಸಂಗೀತ ಎನ್ನುವಷ್ಟರ ಮಟ್ಟಿಗೆ ಕರ್ನಾಟಕ ಸಂಗೀತಕ್ಕೆ ತಮ್ಮನ್ನು ಅರ್ಪಿಸಿಕೊಂಡು ಅದಕ್ಕಾಗಿ ಇಡೀ ಜೀವನವನ್ನ ಮುಡಿಪಾಗಿಟ್ಟು ಬದುಕಿದವರು ಅವರು. ಭಾರತದಲ್ಲಿ ವಿಶೇಷವಾಗಿ ಕರ್ನಾಟಕ ಸಂಗೀತದ ಇತಿಹಾಸದಲ್ಲಿಅವರಷ್ಟು ದೇವರನಾಮ ಮತ್ತು ಕೀರ್ತನೆಗಳನ್ನು ಹಾಡಿದ ಬೇರೊಬ್ಬ ಕಲಾವಿದರಿಲ್ಲ. ಭಾರತದ ಯಾವ ದೇವರ ಹೆಸರೂಅವರ ನಾಲಿಗೆ ಮೇಲೆ ಸಂಗೀತದ ಸ್ವರವಾಗಿ ನಲಿಯದೇ ಉಳಿದಿಲ್ಲ. ಇದು ಎಂ.ಎಸ್. ಸುಬ್ಬುಲಕ್ಷ್ಮಿಯವರ ವಿಶೇಷ. ಅವರಿಗೆ ತಾವು ನೀಡುವ ಸಂಗೀತಕಛೇರಿಯಲ್ಲಿ ಭಾಗವಹಿಸುವ ಶೋತೃಗಳ ಕುರಿತಂತೆ ಯಾವುದೇ ಬಗೆಯ ತಾರತಮ್ಯವಿರಲಿಲ್ಲ. ವಿದ್ಯಾವಂತ ಮತ್ತು ಪ್ರಜ್ಞಾವಂತ ರಸಿಕರೆದುರು ಮಾತ್ರ ಹಾಡುವ ಕಲಾವಿದರಿಗಿಂತ ಭಿನ್ನವಾಗಿ, ಬಡವ, ಬಲ್ಲಿದ ಎನ್ನದೆ, ಜಾತಿ-ಧರ್ಮಗಳನ್ನು ನಿರ್ಲಕ್ಷಿಸಿ ತನ್ನ ಮುಂದೆ ಕುಳಿತ ಸಂಗೀತ ರಸಿಕರನ್ನು ದೇವರೆಂಬಂತೆ ಭಾವಿಸಿ ಧ್ಯಾನಸ್ಥ ಮನಸ್ಸಿನಲ್ಲಿ ಹಾಡುವುದು ಎಂ.ಎಸ್. ಸುಬ್ಬುಲಕ್ಷ್ಮಿಯವರ ವೈಶಿಷ್ಟವಾಗಿತ್ತು. 1993 ರ ಜನವರಿ ತಿಂಗಳಿನಲ್ಲಿ ತಂಜಾವೂರಿನ ಬೃಹದೇಶ್ವರ ದೇಗುಲದ ಆವರಣದಲ್ಲಿ ಒಂದು ವಾರ ಕಾಲ ಹೆಸರಾಂತ ಕಲಾವಿದರಿಂದ ಕರ್ನಾಟಕ ಸಂಗೀತದ ಉತ್ಸವವನ್ನು ಏರ್ಪಡಿಸಲಾಗಿತ್ತು. ಸಂಗೀತೋತ್ಸವದ ಕೊನೆಯ ದಿನ ಎಂ.ಎಸ್. ಸುಬ್ಬುಲಕ್ಷ್ಮಿಯವರ ಸಂಗೀತ ಕಾರ್ಯಕ್ರಮ ಏರ್ಪಾಡಾಗಿತ್ತು. ಆ ರಾತ್ರಿ ಒಂಬತ್ತು ಗಂಟೆಗೆ ಆರಂಭವಾದ ಅವರ ಸಂಗೀತ ಕಛೇರಿ ಮಧ್ಯರಾತ್ರಿ ದಾಟಿ ಹನ್ನರೆಡೂವರೆ ಗಂಟೆಗೆ ಮುಕ್ತಾಯದ ಹಂತ ತಲುಪಿತ್ತು. ಆ ವೇಳೆಗೆ ಸರಿಯಾಗಿ ತಂಜಾವೂರಿನಿಂದ ಸುಮಾರು 48 ಕಿಲೋಮೀಟರ್ ದೂರವಿರುವ ಅಯ್ಯಲೂರು ಎಂಬ ಗ್ರಾಮದ ನೂರಾರು ರೈತರು, ಕೃಷಿ ಕಾರ್ಮಿಕರು, ಮಹಿಳೆಯರು ಸಂಜೆ ಆರುಗಂಟೆಗೆ ತಮ್ಮ ಊರನ್ನು ಬಿಟ್ಟು ತಂಜಾವೂರನ್ನು ಕಾಲ್ನಡಿಗೆಯಲ್ಲಿ ತಲುಪಿದ್ದರು. ದೇವಸ್ಥಾನದ ಆವರಣಕ್ಕೆ ಅವರು ಬರುತ್ತಿದ್ದಂತೆ ಸಂಗೀತ ಕಛೇರಿ ಮಂಗಳ ಹಾಡುವ ಹಂತ ತಲುಪಿತ್ತು. ಕೂಡಲೇಅಷ್ಟು ಮಂದಿ ಅನಕ್ಷರಸ್ಥ ಜನರೂ ಸುಬ್ಬುಲಕ್ಷ್ಮಿಯವರ ಮುಂದೆ ನಿಂತು 'ಅಮ್ಮಾ ನಿಮ್ಮ ಸಂಗೀತ ಕೇಳಲುಅಷ್ಟು ದೂರದಿಂದ ನಡೆದು ಬಂದಿದ್ದೇವೆ. ನಮಗಾಗಿ ಒಂದೆರೆಡು ಕೀರ್ತನೆಗಳನ್ನು ಹಾಡು ತಾಯಿ' ಎನ್ನುತ್ತಾ ಕೈ ಮುಗಿದು ನಿಂತರು. ಅರಬೆತ್ತಲೆಯಲ್ಲಿ ಧೂಳು ಹಿಡಿದ ಪಂಚೆ ಟವಲ್‌ಗಳನ್ನು ಹೊದ್ದು ನಿಂತಿದ್ದ ಆ ಜನರನ್ನು ನೋಡಿ ಸುಬ್ಬುಲಕ್ಷ್ಮಿಯವರ ಕಣ್ಣು ತೇವವಾಯಿತು. ಅವರು ಬೆಳಗಿನ ಜಾವ ಐದು ಗಂಟೆಗೆ ಮದ್ರಾಸ್ ನಗರಕ್ಕೆ ಹೊರಡುವ ಕಾರ್ಯಕ್ರಮವಿತ್ತು. ಆದರೂ ಕೂಡ, ಕಛೇರಿ ಮುಂದುವರಿಸುವುದು ಬೇಡ ಎಂಬ ತಮ್ಮ ಸಹ ಕಲಾವಿದರ ಮತ್ತು ಕಾರ್ಯಕ್ರಮ ಆಯೋಜಕರ ಸಲಹೆಯನ್ನು ಧಿಕ್ಕರಿಸಿ ಮತ್ತೆ ಆ ಹಳ್ಳಿಯ ಜನರೆದುರು ಹೊಸದಾಗಿ ಹಾಡಲು ಕುಳಿತರು. ಕಿಂಚಿತ್ತೂ ಆಯಾಸವಿಲ್ಲದೆ ಬೆಳಗಿನ ಜಾವ ಮೂರು ಗಂಟೆಯವರೆಗೆ ಹಳ್ಳಿಯ ಜನರ ಮನತಣಿಯುವಂತೆ ಹಾಡಿದರು. ಸುಬ್ಬುಲಕ್ಷ್ಮಿಯವರ ಸಂಗೀತ ಕೇಳಿದ ಆ ಜನರೆಲ್ಲಾ ಕಾರ್ಯಕ್ರಮ ಮುಗಿದ ನಂತರ ದೇವತೆಯ ಕಾಲು ಮುಟ್ಟಿ ನಮಸ್ಕರಿಸುವಂತೆ ಅವರಿಗೆ ನಮಸ್ಕರಿಸಿ ತಮ್ಮ ಧನ್ಯವಾದ ತಿಳಿಸಿದರು. ಎಂ.ಎಸ್. ಸುಬ್ಬುಲಕ್ಷ್ಮಿಯವರ ಇಂತಹ ನಿಸ್ವಾರ್ಥ ಸೇವೆಗಾಗಿ ಕೇಂದ್ರ ಸರ್ಕಾರ, ದೇಶದ ಅತ್ಯುನ್ನತ ಗೌರವ ಪ್ರಶಸ್ತಿಯಾದ ಭಾರತರತ್ನ ಪ್ರಶಸ್ತಿಯನ್ನು 1998 ರಲ್ಲಿ ಘೋಷಿಸಿದ ಸಂದರ್ಭದಲ್ಲಿ ಸುಬ್ಬುಲಕ್ಷ್ಮಿಯವರನ್ನು 'ಭಾರತದ ಸ್ವರ ಗಂಗೆ' ಎಂದು ಕರೆದು ಗೌರವಿಸಿತು. ಕೇಂದ್ರ ಸರ್ಕಾರದ ಈ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆ ಇರಲಿಲ್ಲ. ಏಕೆಂದರೆ ಭಾರತದ ಜನತೆ ಭಾಷೆಯ ಹಂಗಿಲ್ಲದೆ ಎಂ.ಎಸ್. ಸುಬ್ಬುಲಕ್ಷ್ಮಿ ಎಂಬ ನಾದದ ನದಿಯಲ್ಲಿ ಮಿಂದು ಎದ್ದಿದ್ದಾರೆ. ಸಂಗೀತ ರಸಿಕರ ಪಾಲಿಗೆ ಅವರು ಎಂದೂ ಬತ್ತಲಾರದ ಗಂಗೆಯಾಗಿದ್ದಾರೆ. ಒಬ್ಬ ಜಗತ್‌ಪ್ರಸಿದ್ಧ ಸಂಗೀತಗಾರ್ತಿಯಾಗಿದ್ದರೂ ಕೂಡ ಸುಬ್ಬುಲಕ್ಷ್ಮಿ ಅವರು ಸ್ವಂತ ಹಿತಾಸಕ್ತಿಗೆ ಅಥವಾ ಹಣ ಸಂಪಾದನೆಗಾಗಿ ಹಾಡಿದ್ದಕ್ಕಿಂತ ಹೆಚ್ಚಾಗಿ ಹಲವಾರು ಸಂಘ ಸಂಸ್ಥೆಗಳ ಸಹಾಯಾರ್ಥ ನಿಧಿಗಾಗಿ, ಮತ್ತು ದೇವರ ಸೇವೆಯ ನೆಪದಲ್ಲಿ ಉಚಿತವಾಗಿ ಹಾಡಿದ್ದೇ ಹೆಚ್ಚು. 1977 ರಲ್ಲಿ ತಮ್ಮ ಪತಿ ತ್ಯಾಗರಾಜನ್ ಸದಾಶಿವಂ ಅವರ ಅಭಿಲಾಷೆಯಂತೆ 1997 ರ ವರೆಗೆ ಸುಮಾರು 20 ವರ್ಷಗಳ ಕಾಲ ನಿರಂತರವಾಗಿ ದೇಶ ವಿದೇಶಗಳಲ್ಲಿ ಉಚಿತವಾಗಿ ಸಂಗೀತ ಕಛೇರಿ ನಡೆಸಿಕೊಟ್ಟರು. 1997 ನವೆಂಬರ್ ತಿಂಗಳಿನಲ್ಲಿ ಅವರ ಪತಿ ಟಿ.ಸದಾಶಿವಂ ಅವರ ನಿಧನಾನಂತರ ತಮ್ಮ ಸಾರ್ವಜನಿಕ ಸಂಗೀತ ಕಛೇರಿಗಳಿಗೆ ಅವರು ತಿಲಾಂಜಲಿಯನ್ನಿತ್ತರು. 1930 ರ ದಶಕದಲ್ಲಿ ಬದುಕಿನ ಭವಿಷ್ಯ ಅರಸುತ್ತಾ ದಕ್ಷಿಣದ ತಮಿಳುನಾಡಿನ ಮಧುರೈ ನಗರದಿಂದ ಉತ್ತರ ದಿಕ್ಕಿನ ಅಂದಿನ ಮದ್ರಾಸ್ ನಗರಕ್ಕೆ ಬಂದ ಸಂದರ್ಭದಲ್ಲಿ ತನಗೊಂದು ದಿಕ್ಕು ದಿಶೆ ತೋರಿಸುವುದರ ಜೊತೆಗೆ, ಸಂಗೀತ ಲೋಕದಲ್ಲಿ ಉನ್ನತ ಸ್ಥಾನ ದೊರಕಿಸಿಕೊಡುವುದರಿಂದ ಹಿಡಿದು, ದೇವದಾಸಿ ಕುಲದಿಂದ ಬಂದ ತನ್ನಂತಹವಳನ್ನು ಓರ್ವ ಬ್ರಾಹ್ಮಣ ವ್ಯಕ್ತಿಯಾಗಿ ಕೈ ಹಿಡಿದು ಬಾಳು ಬೆಳಗಿದ ತಮ್ಮ ಪತಿ ಟಿ.ಸದಾಶಿವಂ ಅವರಿಗೆ ಸುಬ್ಬುಲಕ್ಷ್ಮಿಯವರು ತೋರಿಸಿದ ಗೌರವದ ಪ್ರತೀಕವೂ ಇದಾಗಿತ್ತು. ವಿಧೇಯತೆ ಮತ್ತು ವಿನಯ ಇವೆರಡರ ಭಾವಗಳಲ್ಲಿ ಅದ್ದಿ ತೆಗದಂತೆ ಕಾಣುತ್ತಿದ್ದ ಸುಬ್ಬುಲಕ್ಷ್ಮಿಯವರು ತಮ್ಮ ಜೀವನ ಪೂರ್ತಿ ಸದಾಶಿವಂ ಅವರ ನೆರಳಿನಂತೆ ಅವರನ್ನು ಹಿಂಬಾಲಿಸಿದ್ದರು. ಸದಾಶಿವಂ ಅವರ ಸಾವಿನಿಂದ ಅವರ ಬದುಕಿನಲ್ಲಿ ಆವರಿಸಿಕೊಂಡ ಶೂನ್ಯ ಭಾವದಿಂದಾಗಿಅವರು, ತಮ್ಮ ಎಂಬತ್ತರೆರಡರ ಇಳಿವಯಸ್ಸಿನಲ್ಲೂ ದಿನಪೂರ್ತಿ ತಮ್ಮ ನಿವಾಸದ ದೇವರಕೋಣೆಯಲ್ಲಿ ಕುಳಿತು ಪೂಜೆ ಮತ್ತು ಭಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಭಾರತದ ಸಂಗೀತದ ಇತಿಹಾಸದಲ್ಲಿ ಸುಬ್ಬುಲಕ್ಷ್ಮಿ ಎಂಬ ಹೆಸರು ಕೇವಲ ಹೆಣ್ಣು ಜೀವವೊಂದರ ನಾಮ ಸೂಚಿ ಪದವಲ್ಲ ಅಥವಾ ಸುಲಭದ ವ್ಯಾಖ್ಯಾನಕ್ಕೆ ಮತ್ತು ವಿವರಣೆಗೆ ಸಿಗುವಂತಹ ಸಡಿಲ ವ್ಯಕ್ತಿತ್ವವೂ ಅವರದಲ್ಲ. ಅದೊಂದು ರೀತಿಯಲ್ಲಿ ಭಾರತದ ಸಂಗೀತ ಶೋತೃಗಳು ಮತ್ತು ಜನಸಾಮಾನ್ಯರ ಮನದಲ್ಲಿ ಸದಾ ಹಸಿರಾಗಿರುವ ಅಂತ್ಯವಿಲ್ಲದ ಸುಪ್ರಭಾತ. ಎಂ.ಎಸ್. ಸುಬ್ಬುಲಕ್ಷ್ಮಿ ಎಂದರೆ, ಕರ್ನಾಟಕ ಸಂಗೀತ, ಎಂ. ಎಸ್. ಸುಬ್ಬುಲಕ್ಷ್ಮಿ ಎಂದರೆ, ಶ್ರೀ ವೆಂಕಟೇಶ್ವರ ಸುಪ್ರಭಾತ, ಎಂ.ಎಸ್. ಸುಬ್ಬುಲಕ್ಷ್ಮಿ ಎಂದರೆ, ಮಾಸದ ಮುಗುಳ್ನಗೆ, ಎಂ.ಎಸ್.ಸುಬ್ಬುಲಕ್ಷ್ಮಿ ಎಂದರೆ, ಭಾರತದ ಬೆಳಗಿನ ಸೂರ್ಯೋದಯಕ್ಕೆ ಬರೆದ ಹೊಸ ಹೆಸರು ಹೀಗೆ ಯಾವ ಉಪಮೆಗಳನ್ನು ಸೇರಿಸಿ ಕರೆದರೂ ಅದುಅವರಿಗೆ ಸಲ್ಲುತ್ತದೆ. ತಮಿಳುನಾಡಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ನಗರಿ ಎಂದು ಕರೆಸಿಕೊಳ್ಳುವ ಮಧುರೈ ನಗರದ ಹೃದಯದಂತಿರುವ ಮೀನಾಕ್ಷಿ ದೇಗುಲದ ಪೂರ್ಣ ಹೆಸರು ಶ್ರೀ ಮೀನಾಕ್ಷಿ ಸುಂದರೇಶ್ವರ್ ಕೋಯಿಲ್ ಎಂದು. (ಕೋಯಿಲ್ ಎಂದರೆ ದೇವಸ್ಥಾನ)ಆದರೆ, ಮಧುರೈ ನಗರದಲ್ಲಿ ವಾಸಿಸುತ್ತಿರುವ ಸುಮಾರು ಒಂದು ಕೋಟಿ ಹತ್ತು ಲಕ್ಷ ತಮಿಳರ ಬಾಯಲ್ಲಿ ಅದು ಅಮ್ಮನ್ ಕೋಯಿಲ್ ಎಂದು ಕರೆಯಲ್ಪಡುತ್ತದೆ.(ಅಮ್ಮನವರ ಸನ್ನಿಧಿ ಅಥವಾ ದೇಗುಲ)ಅಮ್ಮ ಎಂದರೆ ಅದು ಮೀನಾಕ್ಷಿ ದೇವತೆ ಎಂಬುದು ಅಲ್ಲಿನ ಜನರಿಗೆ ತಿಳಿದ ವಿಷಯ. ಅದೇ ರೀತಿ ಮಧುರೈ ನೆಲದಿಂದ ಬಂದ ಸುಬ್ಬುಲಕ್ಷ್ಮಿಯವರು ಸಹ ತಮಿಳುನಾಡಿನಲ್ಲಿ ಎಂ.ಎಸ್.ಅಮ್ಮ ಎಂದು ಪ್ರಸಿದ್ಧರಾಗಿದ್ದಾರೆ. ಎಂ.ಎಸ್. ಎಂದರೆ, ಮಧುರೈ ಷಣ್ಮುಗವಡಿವು ಎಂಬುದು ಅವರ ತಾಯಿಯ ಹೆಸರು. ಸುಬ್ಬುಲಕ್ಷ್ಮಿಯವರ ತಾಯಿ ಆ ಕಾಲಕ್ಕೆ ಮಧುರೈ ನಗರದ ಪ್ರಸಿದ್ಧ ವೀಣಾ ವಿಧುಷಿಯಾಗಿದ್ದರು. ತಾಯಿಯ ಪ್ರತಿಭೆ, ಮಧುರೈ ನಗರದ ಮಣ್ಣಿನ ಗುಣ ಮತ್ತು ಸಂಸ್ಕೃತಿ ಇವುಗಳನ್ನು ಮೈಗೂಡಿಸಿಕೊಂಡು ಬೆಳೆದ ಸುಬ್ಬುಲಕ್ಷ್ಮಿಯವರು ಐತಿಹಾಸಿಕ ಪುರಾತನ ನಗರಿ ಮಧುರೈ ನಗರದಂತೆ ಇತಿಹಾಸ ಸೃಷ್ಟಿಸಿ, ತಾವೂ ಸಹ ಚರಿತ್ರೆಯ ಒಂದು ಭಾಗವಾಗಿ, ಸಂಗೀತ ಲೋಕದಲ್ಲಿ ಅಳಿಸಲಾರದ ಒಂದು ಅಧ್ಯಾಯವಾಗಿ ಅಜರಾಮರವಾಗಿ ಉಳಿದರು. ಭಾರತದ ಅತ್ಯಂತ ಪುರಾತನ ನಗರಿಗಳಲ್ಲಿ ಮಧುರೈ ನಗರವೂ ಕೂಡ ಒಂದು. ತಮಿಳು ಸಾಹಿತ್ಯದಲ್ಲಿ ಸುವರ್ಣಯುಗ ಎಂದು ಕರೆಯಲಾಗುವ ಸಂಗಂ ಸಾಹಿತ್ಯ ಸೃಷ್ಟಿಯ ಸಮಯದಲ್ಲಿ ಅಂದರೆ, ಕ್ರಿಸ್ತಶಕ ಒಂದನೆಯ ಶತಮಾನದಿಂದ ಹಿಡಿದು ಮೂರನೆಯ ಶತಮಾನದ ಅವಧಿಯಲ್ಲಿ ಈ ನಗರ ಅಸ್ತಿತ್ವದಲ್ಲಿ ಇದ್ದುದಕ್ಕೆ ದಾಖಲೆಗಳು ಲಭ್ಯವಾಗಿವೆ. ಪೂರ್ವ ಜಗತ್ತಿನ ಅಥೆನ್ಸ್ ನಗರ ಎಂದು ಇತಿಹಾಸದಲ್ಲಿ ಬಣ್ಣಿಸಲ್ಪಟ್ಟಿರುವ ಈ ನಗರದ ಬಗ್ಗೆ ಕ್ರಿ.ಶ. 302 ರಲ್ಲಿ ಭಾರತ ಪ್ರವಾಸ ಮಾಡಿದ ಮೆಗಾಸ್ತನಿಸ್ ಎಂಬ ಪ್ರವಾಸಿಗ ಮತ್ತು ಆನಂತರ ಪ್ರವಾಸ ಮಾಡಿದ ಮಾರ್ಕ್‌ಪೊಲೊ ಎಂಬ ನಾವಿಕ ಇವರುಗಳ ಪ್ರವಾಸದ ದಿನಚರಿಯಲ್ಲಿ ಮಧುರೈ ನಗರದ ಹೆಸರು ದಾಖಲಾಗಿದೆ. ಅಲ್ಲದೆ ಆ ಕಾಲದ ಮಧುರೈ ಪುರಿಯನ್ನು ಆಳುತ್ತಿದ್ದ ಪಾಂಡ್ಯ ರಾಜ ಮನೆತನದ ಅರಸರು ಗ್ರೀಕ್ ಮತ್ತು ರೋಮ್ ವರ್ತಕರ ಜೊತೆ ವ್ಯಾಪಾರ ವಹಿವಾಟು ನಡೆಸಿದ ಸಂಗತಿಗಳು ಇತಿಹಾಸದಲ್ಲಿದಾಖಲಾಗಿವೆ. ಮಧುರೈ ನಗರದ ಮೂಲ ಹೆಸರು ಕದಂಬವನಂ ಎಂಬುದಾಗಿತ್ತು. ಪುರಾಣದ ಕಥೆಯೊಂದರ ಪ್ರಕಾರ ಕದಂಬವನಂ ಅರಣ್ಯ ಪ್ರದೇಶದಲ್ಲಿ ಇಂದ್ರನು ಸ್ವಯಂಭೂ ಲಿಂಗವನ್ನು ಪೂಜಿಸುತ್ತಿದ್ದುದನ್ನು ನೋಡಿದ ವರ್ತಕನೊಬ್ಬನು ಈ ವಿಷಯವನ್ನು ಅಂದಿನ ಪಾಂಡ್ಯ ದೊರೆ ರಾಜ ಕುಲಶೇಖರನಿಗೆ ತಿಳಿಸುತ್ತಾನೆ. ರಾಜನು ಅರಣ್ಯದಲ್ಲಿದ್ದ ಗಿಡಮರಗಳನ್ನು ತೆರವುಗೊಳಿಸಿ ಆ ಜಾಗದಲ್ಲಿ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನ ನಿರ್ಮಾಣ ಮಾಡುತ್ತಾನೆ. ದೇವಸ್ಥಾನ ನಿರ್ಮಾಣವಾದ ನಂತರ ಅದರ ಉದ್ಘಾಟನೆಯ ಪೂಜಾ ಸಂದರ್ಭದಲ್ಲಿ ಹಾಜರಿದ್ದ ದೇವತೆಗಳು ಮಧುವನ್ನು ನೀಡಿ (ಜೇನುತುಪ್ಪ) ಹಾರೈಸುತ್ತಾರೆ. ಹಾಗಾಗಿ ಈ ಸ್ಥಳಕ್ಕೆ ಮಧುರೈ ಪುರಿ ಎಂದು ಹೆಸರಾಯಿತು ಎಂಬುದು ಪುರಾಣಗಳ ನಂಬಿಕೆ. ಮಧುರೈ ನಗರದ ಅತ್ಯಂತ ವಿಶೇಷವೆಂದರೆ, ಈಗಿನ ಹೊಸ ಬಡಾವಣೆಗಳನ್ನು ಹೊರತು ಪಡಿಸಿದರೆ, ಇಡೀ ಮಧುರೈ ನಗರ ಒಂದು ಕಮಲದ ಹೂವಿನ ಆಕಾರದಲ್ಲಿ ರೂಪುಗೊಂಡಿದೆ. ಮಧ್ಯ ಭಾಗದಲ್ಲಿ ಮೀನಾಕ್ಷಿ ದೇಗುಲವಿದ್ದು ಸುತ್ತ ದಳದ ಆಕಾರದಲ್ಲಿ ರಸ್ತೆಗಳು ಮತ್ತು ವಾಸಸ್ಥಳಗಳು ತಲೆ ಎತ್ತಿವೆ. ತಮಿಳುನಾಡಿನ ಪ್ರಸಿದ್ಧ ನದಿಗಳಲ್ಲಿ ಒಂದಾದ ವೈಗೈ ನದಿಯ ದಂಡೆಯ ಮೇಲೆ ತಲೆ ಎತ್ತಿರುವ ಮಧುರೈ ನಗರ ಕೌಟಿಲ್ಯನ ಅರ್ಥಶಾಸ್ತ್ರ ಕೃತಿಯಲ್ಲೂ ಸಹ ದಾಖಲಾಗಿದ್ದು, ಹಲವು ಶತಮಾನಗಳ ಕಾಲ ಪಾಂಡ್ಯರು, ಚೋಳರು, ಚೇರರು, ಮತ್ತು ದಿಲ್ಲಿಯ ಸುಲ್ತಾನರು (ಅಲ್ಲಾವುದ್ಧೀನ್ ಖಿಲ್ಜಿ ಮತ್ತು ತುಘಲಕ್) ಇವರ ಆಳ್ವಿಕೆಗೆ ಒಳಪಟ್ಟು ನಂತರ ವಿಜಯನಗರ ಅರಸರು ಮತ್ತು ಮರಾಠಿ ಸಾಮಂತರ ಆಡಳಿತಕ್ಕೆ ಒಳಪಡುವುದರ ಮೂಲಕ ಹಲವಾರು ಏಳು ಬೀಳುಗಳನ್ನು ಕಂಡಿದೆ. ಹತ್ತನೇ ಶತಮಾನದವರೆಗೆ ಪಾಂಡ್ಯರ ವಶದಲ್ಲಿದ್ದ ಮಧುರೈ ನಗರ, ಹತ್ತರಿಂದ ಹದಿಮೂರನೇ ಶತಮಾನದವರೆಗೆ ಚೋಳರ ಕೈವಶವಾಗಿತ್ತು. 1223ರಲ್ಲಿ ಮತ್ತೆ ಪಾಂಡ್ಯರ ವಶವಾಯಿತು. ಆದರೆ ಹದಿನಾಲ್ಕನೆಯಶತಮಾನದಲ್ಲಿ (1311 ರ ಏಪ್ರಿಲ್ ತಿಂಗಳಿನಲ್ಲಿ) ದೆಹಲಿಯ ಅಲ್ಲಾವುದ್ಧೀನ್ ಖಿಲ್ಜಿಯ ದಂಡನಾಯಕನಾದ ಮಲ್ಲಿಕಾಫರ್ ಸೇನೆಯ ದಾಳಿಗೆ ಒಳಗಾಗಿ ತನ್ನ ಒಡಲಲ್ಲಿದ್ದಅಮೂಲ್ಯ ಸಂಪತ್ತನ್ನು ಕಳೆದುಕೊಂಡಿತು. ನಂತರದ ದಿನಗಳಲ್ಲಿ ದಿಲ್ಲಿಯ ತುಘಲಕ್ ಸುಪರ್ಧಿಗೆ ಬಂದಿದ್ದ ಈ ಐತಿಹಾಸಿಕ ನಗರಿ, 1371 ರಲ್ಲಿ ತುಘಲಕ್ ಸಾಮ್ರಾಜ್ಯ ಪತನಾನಂತರ ವಿಜಯ ನಗರ ಅರಸರ ಪಾಲಾಯಿತು ಹದಿನಾರನೇಯ ಶತಮಾತನದಲ್ಲಿ ವಿಜಯನಗರದ ಅರಸು ಕೃಷ್ಣದೇವರಾಯನು ರಕ್ಕಸತಂಗಡಿ ಯುದ್ಧದಲ್ಲಿ ಸೋತು ಮೃತಪಟ್ಟ ನಂತರ ಮಧುರೈ ನಗರದಲ್ಲಿ ವಿಜಯ ನಗರ ಅರಸರ ಮಾಂಡಲೀಕನಾಗಿದ್ದ ತಿರುಮಲ ನಾಯಕನು ಸ್ವತಂತ್ರ ಮಾಂಡಲೀಕನಾಗಿ ಘೋಷಿಸಿಕೊಂಡನು. ಈತನ ಅವಧಿಯಲ್ಲಿ (1523-59) ಮಧುರೈ ನಗರ ಸರ್ವಾಂಗೀಣ ಪ್ರಗತಿ ಕಂಡಿತು. ತಿರುಮಲ ನಾಯಕನು ಮಧುರೈ ಮೀನಾಕ್ಷಿ ದೇವಾಲಯಕ್ಕೆ ನಾಲ್ಕು ದಿಕ್ಕುಗಳಲ್ಲಿ ರಾಜಗೋಪುರಗಳನ್ನು ನಿರ್ಮಾಣ ಮಾಡಿದುದಲ್ಲದೆ, ವಾಸ್ತು ಪ್ರಕಾರ ದೇವಸ್ಥಾನದ ಸುತ್ತ ರಸ್ತೆಗಳನ್ನು ನಿರ್ಮಾಣ ಮಾಡಿದ. ಜೊತೆಗೆ ದೇವಸ್ಥಾನದ ನಿರ್ವಹಣೆಗಾಗಿ ಭೂಮಿಯನ್ನು ದಾನ ಮಾಡಿ, ಅರ್ಚಕರು, ಸೇವಕರು, ದೇವದಾಸಿಯರು, ಸಂಗೀತಗಾರರು, ವಾದ್ಯ ತಂಡ, ಹೀಗೆ ದೇಗುಲದ ವಿವಿಧ ವರ್ಗದ ಸಿಬ್ಬಂದಿಗೆ ಸನಿಹದಲ್ಲಿ ವಸತಿ ವ್ಯವಸ್ಥೆಯನ್ನು ಸಹ ಕಲ್ಪಿಸಿಕೊಟ್ಟ. ತಿರುಮಲ ನಾಯಕನ ಅವಧಿಯಲ್ಲಿ ತಮಿಳುನಾಡಿನ ತಂಜಾವೂರು ಮತ್ತು ಮಧುರೈ ನಗರಗಳು ಸಂಗೀತ, ಸಾಹಿತ್ಯ, ದೇವಸ್ಥಾನಗಳ ಕೇಂದ್ರ ಬಿಂದುಗಳಾಗಿ ಪ್ರಮುಖ ಸಾಂಸ್ಕೃತಿಕ ನಗರಗಳಾಗಿ ಬೆಳೆದವು. ತಮಿಳಿನ ಪ್ರಮುಖ ಮಹಾಕಾವ್ಯಗಳಲ್ಲಿ ಒಂದಾದ 'ಶಿಲಪ್ಪದಿಗಾರಂ' ಕಾವ್ಯ ಮಧುರೈ ನಗರದಲ್ಲಿ ರಚಿತವಾಗಿದೆ. ಸುಮಾರು 5270 ಸಾಲುಗಳ ಈ ಪುರಾತನ ಮಹಾಕಾವ್ಯವು ಚೇರ ಸಾಮ್ರಾಜ್ಯದ ದೊರೆಯಾದ ಶೆಂಗೋಟವನ್ ವಂಶಸ್ಥನಾದ ಇಳಂಗೊ ಅಡಿಗಳ್ ಎಂಬುವನಿಂದ ರಚಿತವಾಯಿತು ಎಂದು ಹೇಳಲಾಗಿದೆ. 'ಶಿಲಪ್ಪದಿಗಾರಂ' ಕಾವ್ಯದಲ್ಲಿನ ಕಥೆಗೂ ಮತ್ತು ಮಧುರೈ ನಗರಕ್ಕೂ ಇವೊತ್ತಿಗೂ ಅವಿನಾಭಾವ ಸಂಬಂಧವಿದೆ. ಕನ್ನಗಿ-ಕೋವಲನ್ ಮತ್ತು ಮಾಧವಿ ಇವರ ಪ್ರೇಮ ಮತ್ತು ದುರಂತ ಕಥೆಯನ್ನು ಒಳಗೊಂಡ ಈ ಕಾವ್ಯದಲ್ಲಿ ಕನ್ನಗಿಯ ಕೋಪ ಮತ್ತು ಶಾಪಕ್ಕೆ ಇಡೀ ಮಧುರೈ ನಗರ ಸುಟ್ಟು ಭಸ್ಮವಾಗುವ ಘಟನೆಗಳಿವೆ. ಕನ್ನಗಿ ಎಂಬ ಹೆಸರು ತಮಿಳರ ಜನಮಾನಸದಲ್ಲಿ ಗೌರಯುತವಾದ ಹೆಸರಾಗಿದೆ. ಈ ಕಾರಣಕ್ಕಾಗಿ ಇವೊತ್ತಿಗೂ ಕನ್ನಗಿ ಎಂಬ ಹೆಣ್ಣುಮಗಳು ತಮಿಳಿನ ಸಾಹಿತ್ಯದಲ್ಲಿ, ಸಂಗೀತದಲ್ಲಿ ಮತ್ತು ಅಲ್ಲಿನ ಜನರ ಹೃದಯದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದ್ದಾಳೆ. ಈ ಮಹಾ ಕಾವ್ಯದ ಸಂಕ್ಷಿಪ್ತ ಕಥನ ಹೀಗಿದೆ. ಇಂದಿನ ಮೈಯಿಲಾಡುತೊರೈ ಪಟ್ಟಣದ (ಹಳೆಯ ಹೆಸರು ಅಮ್ಮಾವರಂ ಇದು ಮಣಿಶಂಕರ್ ಅಯ್ಯರ್ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ) ಸಮೀಪ ಹಾಗೂ ಕಾವೇರಿ ನದಿ ಸಮುದ್ರ ಸೇರುವ ಪ್ರದೇಶದ ಕಾವೇರಿಪಟ್ಟಣಂ ಎಂಬ ಪುರಾತನ ನಗರವೊಂದರಲ್ಲಿ (ಪೂಂಪುಹಾರ್) ಕೋವಲನ್ ಎಂಬ ಶ್ರೀಮಂತ ವರ್ತಕ ಮತ್ತು ಅವನ ಪತ್ನಿ ಕನ್ನಗಿ ವಾಸವಾಗಿರುತ್ತಾರೆ. ಇಲ್ಲಿಗೆ ಬಂದ ಆಸ್ಥಾನದ ನರ್ತಕಿ ಮಾಧವಿ ಎಂಬಾಕೆಯ ಪ್ರೇಮದ ಬಲೆಯಲ್ಲಿ ಬೀಳುವ ಕೋವಲನ್ ಅವಳ ಹಿಂದೆ ಬಿದ್ದು ಮಧುರೈ ನಗರಕ್ಕೆ ಹೋಗಿ ತನ್ನ ಸರ್ವಸ್ವವನ್ನೂ ಕಳೆದುಕೊಂಡು ಬೀದಿ ಭಿಕಾರಿಯಾಗುತ್ತಾನೆ. ಅಂತಿಮವಾಗಿ ತನ್ನ ತಪ್ಪು ಅರಿವಾಗುತ್ತಿದ್ದಂತೆ ತನ್ನ ಪತ್ನಿಯಾದ ಕನ್ನಗಿ ಬಳಿ ಬಂದು ಕ್ಷಮೆ ಕೋರುತ್ತಾನೆ. ವ್ಯಾಪಾರ ಮುಂದುವರಿಸಲು ಹಣವಿಲ್ಲದೆಅಸಹಾಯಕನಾದ ಪತಿ ಕೋವಲನ್‌ಗೆ ಕನ್ನಗಿ ತನ್ನ ಕಾಲಿನಲ್ಲಿದ್ದ ಒಂದು ಚಿನ್ನದ ಕಡಗವನ್ನು ಕಳಚಿ ಕೊಡುವುದರ ಮೂಲಕ ಮಾರಾಟ ಮಾಡುವಂತೆ ಹೇಳುತ್ತಾಳೆ. ಕೋವಲನ್ ಕಡಗವನ್ನು ಮಾರಾಟ ಮಾಡಲು ಮಧುರೈ ನಗರಿಗೆ ಬಂದುಅಕ್ಕಸಾಲಿಗನಿಗೆ ನೀಡಿದಾಗ, ಇದು ಅರಮನೆಯಿಂದ ಕದ್ದಿರಬಹುದಾದ ಚಿನ್ನದ ಕಡಗ ಎಂದು ಅಕ್ಕಸಾಲಿಗ ಸಂಶಯಗೊಳ್ಳುತ್ತಾನೆ. ಈ ಕುರಿತು ಅರಮನೆಯ ಸಿಬ್ಬಂದಿಗೆ ದೂರು ಸಲ್ಲಿಸುತ್ತಾನೆ. ಅರಮನೆಯಲ್ಲಿ ವಿಚಾರಣೆ ನಡೆಸಿದ ರಾಜ ಮತ್ತು ರಾಣಿಯರು ಕೋವಲನ್‌ಗೆ ಮರಣದಂಡನೆ ವಿಧಿಸುತ್ತಾರೆ. ವಿಷಯ ತಿಳಿದು ಅರಮನೆಗೆಧಾವಿಸಿದ ಕನ್ನಗಿ ತನ್ನ ಕಾಲಿನಲ್ಲಿದ್ದ ಇನ್ನೊಂದು ಕಡಗವನ್ನು ತೋರಿಸಿ, ನನ್ನ ಗಂಡನ ಬಳಿ ಇದ್ದ ಚಿನ್ನದ ಕಡಗ ಅರಮನೆಯ ಸ್ವತ್ತಾಗಿದ್ದರೆ, ಕಡಗದ ಒಳಗೆ ಏನಿದೆ ಹೇಳಿ ಎಂದು ಸವಾಲು ಹಾಕುತ್ತಾಳೆ. ಅದರೊಳಗೆ ರತ್ನ ಮುತ್ತುಗಳಿರುವುದನ್ನು ಹೇಳಿ, ತನ್ನ ಬಳಿ ಇದ್ದ ಇನ್ನೊಂದು ಕಡಗವನ್ನು ಸೀಳಿ ಅದರೊಳಗೆ ಇರುವ ರತ್ನಗಳನ್ನು ತೋರಿಸಿ, ತನ್ನ ಪತಿ ನಿರಪರಾಧಿ ಹಾಗೂ ಚಿನ್ನದ ಕಡಗ ತನ್ನದೆಂದು ಸಾಬೀತು ಪಡಿಸುತ್ತಾಳೆ. ಅಷ್ಟರ ವೇಳೆಗೆ ಕೋವಲನ್‌ನನ್ನು ಅರಮನೆ ಸಿಬ್ಬಂದಿ ವಧಿಸಿರುತ್ತಾರೆ. ರಾಜ ರಾಣಿ ಇಬ್ಬರೂ ತಾವು ಮಾಡಿದ ತಪ್ಪಿಗೆ ಕ್ಷಮೆ ಕೋರುತ್ತಾರೆ. ಆದರೆ ತನ್ನ ಪತಿಯ ಸಾವಿನಿಂದ ಕೆರಳಿದ ಕನ್ನಗಿ ಮಧುರೈ ಸಾಮ್ರಾಜ್ಯ ಸುಟ್ಟುಭಸ್ಮವಾಗುವಂತೆ ಶಾಪ ಕೊಡುತ್ತಾಳೆ.ಅವಳ ಶಾಪಕ್ಕೆ ಇಡೀ ಮಧುರೈ ನಗರ ನಾಶವಾಗುತ್ತದೆ. ಆನಂತರ ದೇವತೆಗಳು ಭೂಮಿಗೆ ಬಂದು ಕೋವಲನ್‌ನನ್ನು ಬದುಕಿಸಿ, ಕೋವಲನ್ ಮತ್ತು ಕನ್ನಗಿ ದಂಪತಿಗಳನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತಾರೆ. ಈ ಪುರಾಣದ ಕಥೆಯ ಕನ್ನಗಿಯನ್ನು ನೆನಪಿಸುವಂತೆ, ತೀರಾ ಪ್ರಾಮಾಣಿಕತೆಯಿಂದ ದುಡಿದು ತಿನ್ನುವ ಆಧುನಿಕ ಕನ್ನಗಿಯರು ಮಧುರೈ ನಗರದ ಎಲ್ಲೆಡೆ ನಮಗೆ ಕಾಣಬರುತ್ತಾರೆ. ನಗರದ ಮುಖ್ಯರಸ್ತೆಗಳಲ್ಲಿ ಮಲ್ಲಿಗೆಯ ಹೂವಿನ ಮಾಲೆ, ನಿಂಬೆ ಹಣ್ಣು, ತೆಂಗಿನ ಕಾಯಿ ಮಾರುವ ಮತ್ತು ಸಂಜೆಯ ವೇಳೆ ಪಾದಚಾರಿಗಳ ರಸ್ತೆಯಲ್ಲಿ ಕುಳಿತು ಬಿಸಿ ಬಿಸಿ ಉದ್ದಿನ ವಡೆ ಮತ್ತು ಮಸಾಲೆ ವಡೆ ಹಾಕುವ ವೃದ್ಧೆಯರನ್ನು ನೋಡಿದಾಗ ಪುರಾಣದ ಕನ್ನಗಿ ನೆನಪಿಗೆ ಬರುತ್ತಾಳೆ.ಅಷ್ಟೇ ಅಲ್ಲ, ಮೀನಾಕ್ಷಿ ದೇವಸ್ಥಾನದ ರಸ್ತೆಯಲ್ಲಿ ಮತ್ತು ಸಮೀಪದ ಅಯ್ಯನವರ್ ದೇಗುಲದ ಬಳಿ ಬೆಳಗಿನ ಜಾವ ಇಡ್ಲಿ ದೋಸೆ ಮತ್ತು ತಾಜಾ ತರಕಾರಿ ಹಣ್ಣುಗಳನ್ನು ಮಾರುವ ಹೆಂಗಸರ ದುಡಿಮೆಯ ಬದುಕು, ಅವರ ಸ್ವಾಭಿಮಾನದ ನಿಷ್ಟೆ ಇವೆಲ್ಲವನ್ನು ಗಮನಿಸುವಾಗ ಈ ಮಾನಿನಿಯರು ಕನ್ನಗಿಯ ವಾರಸುದಾರರು ಎಂಬಂತೆ ಕಾಣುತ್ತಾರೆ. ಇಂತಹ ಭವ್ಯ ಇತಿಹಾಸವಿರುವ ಮೀನಾಕ್ಷಿ ದೇವಸ್ಥಾನದ ಬಳಿಯಶ್ರೀಹನುಮಂತರಾಯರ್ ಬೀದಿಯ ಮನೆಯೊಂದರಲ್ಲಿ 1916ರ ಸೆಪ್ಟಂಬರ್ 16 ರಂದು ಈ ಕಥನದ ನಾಯಕಿ ಸುಬ್ಬುಲಕ್ಷ್ಮಿಯವರು ಜನಿಸಿದರು. ಮೀನಾಕ್ಷಿ ದೇಗುಲದ ಗಂಟೆಯ ನೀನಾದ, ಗರ್ಭಗುಡಿಯಲ್ಲಿನ ವೇದ ಮಂತ್ರ ಘೋಷಣೆ, ಕರ್ಪೂರ, ಗಂಧದಕಡ್ಡಿ, ಮಲ್ಲಿಗೆ ಹೂವಿನ ಹಾರದ ಸುವಾಸನೆ ಇವೆಲ್ಲವುಗಳು ಬಾಲ್ಯದಲ್ಲಿ ಕುಂಜಮ್ಮ ಎಂದು ಕರೆಸಿಕೊಳ್ಳುತ್ತಿದ್ದ ಸುಬ್ಬುಲಕ್ಷ್ಮಿಯವರ ಇಂದ್ರಿಯಗಳಿಗೆ ತಲುಪುವಷ್ಟು ಹತ್ತಿರದಲ್ಲಿ ಅವರ ಮನೆಯಿತ್ತು. ಹಾಗಾಗಿ ಮೀನಾಕ್ಷಿ ಅಮ್ಮನ ಸನ್ನಿಧಿಯಲ್ಲಿ, ಆಡಿ ಬೆಳೆದ ಸುಬ್ಬುಲಕ್ಷ್ಮಿಯವರಿಗೆ ತಮ್ಮ ಜೀವಿತದ ಕೊನೆಯವರೆಗೂ ದೇವರು, ಭಕ್ತಿ, ಪೂಜೆ, ಭಜನೆ ಕೀರ್ತನೆ, ಸಂಸ್ಕೃತಿ ಇವೆಲ್ಲವೂ ಅವರ ಬದುಕಿನೊಂದಿಗೆ ಮಿಳಿತಗೊಂಡಿದ್ದವು. ದೇವದಾಸಿ ಮನೆತನದಿಂದ ಬಂದ ಹೆಣ್ಣು ಮಗಳಾಗಿದ್ದರೂ ಅವರ ಮುಖದಲ್ಲಿದ್ದ ಕಾಂತಿ, ತೇಜಸ್ಸು ಇವೆಲ್ಲವೂ ಆಕೆ ದೇವದಾಸಿಯ ಮಗಳಲ್ಲ, ದೇವತೆಯ ಮಗಳು ಎಂಬಂತಿದ್ದರು. ಅವರು ಹುಟ್ಟಿ ಬೆಳೆದ ಮನೆಯ ಗೋಡೆಯ ಮೇಲೆ ಸುಣ್ಣದ ಗಾರೆಯಲ್ಲಿ ಬಿಡಿಸಿರುವ ಸರಸ್ವತಿ ದೇವತೆಯ ವೀಣೆಯ ಚಿತ್ತಾರ ಕೂಡ, ಹೌದು ಸುಬ್ಬುಲಕ್ಷ್ಮಿ ದೇವದಾಸಿ ಕುಲದಿಂದ ಬಂದ ಮಗಳಲ್ಲ, ಅವಳು ನನ್ನ ಮಗಳು ಎಂಬ ಸಂದೇಶವನ್ನು ಜಗತ್ತಿಗೆ ಸಾರುತ್ತಿತ್ತು. (ಮುಂದುವರಿಯುವುದು) - ಜಗದೀಶ್ ಕೊಪ್ಪ @. ಮೊ: 9164557999 (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/47713ಗೆ ಭೇಟಿನೀಡಿ.