3ನೇ ಟಿ20 ಪಂದ್ಯ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 12 ರನ್ ಗಳ ಸೋಲು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 12 ರನ್ ಗಳ ಸೋಲು ಕಂಡಿದೆ. ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 12 ರನ್ ಗಳ ಸೋಲು ಕಂಡಿದೆ. ಆಸ್ಟ್ರೇಲಿಯಾ ನೀಡಿದ 187 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ಭಾರತ ತಂಡ ನಿಗಧಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಆ ಮೂಲಕ ಆಸ್ಟ್ರೇಲಿಯಾ ವಿರುದ್ಧ 12 ರನ್ ಗಳ ಸೋಲು ಕಂಡಿತು.ಆಸ್ಟ್ರೇಲಿಯಾ ನೀಡಿದ 187 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಒಂದೂ ರನ್ ಗಳಿಸದೇ ಕೆಎಲ್ ರಾಹುಲ್ ಔಟ್ ಆದರು. ಈ ಹಂತದಲ್ಲಿ ಕ್ರೀಸ್ ಗೆ ಆಗಮಿಸಿದ ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 61 ಎಸೆತಗಳಲ್ಲಿ 85 ರನ್ ಗಳಿಸಿದರು. ಆದಕೆ ಕೊಹ್ಲಿ ತಂಡದ ಇತರೆ ಬ್ಯಾಟ್ಸ್ ಮನ್ ಗಳಿಂದ ಉತ್ತಮ ಸಾಥ್ ದೊರೆಯಲಿಲ್ಲ. ಶಿಖರ್ ಧವನ್ 28 ರನ್ ಗಳಿಸಿ ಔಟ್ ಆದರೆ, ಸಂಜು ಸ್ಯಾಮ್ಸನ್ 10 ರನ್ ಗಳಿಸಿ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್ ಶೂನ್ಯ ಸುತ್ತಿದರೆ, ಹಾರ್ದಿಕ್ ಪಾಂಡ್ಯಾ ಹೋರಾಟ 20 ರನ್ ಗಳಿಗೆ ಸೀಮಿತವಾಯಿತು. ಅಂತಿಮವಾಗಿ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಮಾತ್ರ ಗಳಿಸಿ 12 ರನ್ ಗಳ ಅಂತರದಲ್ಲಿ ಸೋಲು ಕಂಡಿತು.ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ ಮ್ಯಾಥ್ಯೂ ವೇಡ್ (80 ರನ್) ಮತ್ತು ಗ್ಲೇನ್ ಮ್ಯಾಕ್ಸ್ ವೆಲ್ (54 ರನ್) ಅವರ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ನಾಯಕ ಫಿಂಚ್ ಶೂನ್ಯಕ್ಕೆ ಔಟಾದರೂ, ಮತ್ತೊಂದು ತುದಿಯಲ್ಲಿದ್ದ ಮ್ಯಾಥ್ಯೂ ವೇಡ್ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೇವಲ 53 ಎಸೆತಗಳನ್ನು ಎದುರಿಸಿದ ಅವರು, 7 ಬೌಂಡರಿ ಮತ್ತು 2 ಸಿಕ್ಸರ್ ಗಳ ನೆರವಿನಿಂದ 80 ರನ್ ಸಿಡಿಸಿದರು. ಸ್ಟ್ವೀವೆನ್ ಸ್ಮಿತ್ 24 ರನ್ ಗಳಿಸಿ ಔಟಾದರೆ ಬಳಿಕ ಕ್ರೀಸ್ ಗೆ ಆಗಮಿಸಿದ ಮಧ್ಯಮ ಕ್ರಮಾಂಕ ಆಟಗಾರ ಗ್ಲೇನ್ ಮ್ಯಾಕ್ಸ್ ವೆಲ್ ಸ್ಫೋಟಕ ಪ್ರದರ್ಶನ ನೀಡಿದರು, ಕೇವಲ 36 ಎಸೆತಗಳನ್ನು ಎದುರಿಸಿದ ಅವರು 54 ರನ್ ಗಳನ್ನು ಸಿಡಿಸಿ ಆಸ್ಟ್ರೇಲಿಯಾ ಮೊತ್ತ 160 ಗಡಿ ದಾಟಲು ನೆರವಾದರು. ಅಂತಿಮವಾಗಿ ಫಿಂಚ್ ಪಡೆ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು.ಭಾರತದ ಪರ ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರೆ, ನಟರಾಜನ್ ಮತ್ತು ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದರು.ಆದರೆ ಇದಕ್ಕೂ ಮೊದಲಿನ ಎರಡು ಪಂದ್ಯಗಳನ್ನು ಗೆದ್ದಿರುವುದರಿಂದ ಸರಣಿಯನ್ನು ಭಾರತ ತಂಡ 2-1 ಅಂತರದಲ್ಲಿ ಗೆದ್ದುಕೊಂಡಿತು.