ಐಪಿಎಲ್ 2023: ಗಾಯಗೊಂಡು ಟೂರ್ನಿಯಲ್ಲಿ ಪಾಲ್ಗೊಳ್ಳದಿದ್ದರೂ ರಿಷಬ್ ಪಂತ್ ಗೆ 16 ಕೋಟಿ ರೂ! ರಸ್ತೆ ಅಪಘಾತದಲ್ಲಿ ಗಾಯಗೊಂಡು ಐಪಿಎಲ್ ಟೂರ್ನಿಯಿಂದಲೇ ರಿಷಬ್ ಪಂತ್ ಹೊರಬಿದ್ದಿದ್ದು, ಆದರೂ ಬಿಸಿಸಿಐನಿಂದ 16 ಕೋಟಿ ರೂ ವೇತನ ಪಡೆಯಲಿದ್ದಾರೆ. ಮುಂಬೈ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಐಪಿಎಲ್ ಟೂರ್ನಿಯಿಂದಲೇ ರಿಷಬ್ ಪಂತ್ ಹೊರಬಿದ್ದಿದ್ದು, ಆದರೂ ಬಿಸಿಸಿಐನಿಂದ 16 ಕೋಟಿ ರೂ ವೇತನ ಪಡೆಯಲಿದ್ದಾರೆ.ಹೌದು... ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರಿಷಭ್ ಪಂತ್ ಚೇತರಿಕೆಗೆ ಸುಮಾರು 9 ತಿಂಗಳು ಸಮಯ ತೆಗೆದುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ಪಂತ್ ಈ ವರ್ಷ ನಡೆಯುವ ಎಲ್ಲ ಕ್ರಿಕೆಟ್ ಸರಣಿಯಿಂದ ದೂರ ಉಳಿಯುವುದು ಬಹುತೇಕ ಖಚಿತವಾಗಿದೆ. ಮುಂಬೈನ ಸದ್ಯ ಪಂತ್ ಅಂಧೇರಿ ಪಶ್ಚಿಮದಲ್ಲಿರುವ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದು, 16ನೇ ಆವೃತ್ತಿಯ ಐಪಿಎಲ್ನಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಚೊಚ್ಚಲ ಮಹಿಳಾ ಐಪಿಎಲ್: ಆಟಗಾರ್ತಿಯರಿಗೆ ಮೂಲಬೆಲೆ ನಿಗದಿ, ನೋಂದಣಿಗೆ ಜ.26 ಅಂತಿಮ ದಿನಾಂಕ: ಬಿಸಿಸಿಐ ಮೂಲಗಳುಐಪಿಎಲ್ 2023ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪಂತ್ ಅವರನ್ನು 16 ಕೋ.ರೂ.ಗೆ ತಂಡದಲ್ಲೇ ಉಳಿಸಿಕೊಂಡಿತ್ತು. ಆದರೆ ಇದೀಗ ಪಂತ್ ಅವರು ಐಪಿಎಲ್ನಲ್ಲಿ ಆಡದಿದ್ದಲ್ಲಿ ಅವರಿಗೆ ಹಣ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಹಣವನ್ನು ಫ್ರಾಂಚೈಸಿ ಬದಲು ಬಿಸಿಸಿಐ ನೀಡುತ್ತದೆ ಎಂದು ವರದಿಯಾಗಿದೆ. ಪಂತ್ ಈ ವರ್ಷ ಐಪಿಎಲ್‌ನಲ್ಲಿ ಆಡದಿದ್ದರೂ, ಬಿಸಿಸಿಐ ಅವರ ಐಪಿಎಲ್ ಸಂಬಳದ 16 ಕೋಟಿ ರೂ.ಗಳನ್ನು ದಿಲ್ಲಿ ಕ್ಯಾಪಿಟಲ್ಸ್‌ ಪರವಾಗಿ ಸಂಪೂರ್ಣವಾಗಿ ಪಾವತಿಸುತ್ತದೆ. ಇದು ಮಾತ್ರವಲ್ಲದೆ, ಕೇಂದ್ರ ಒಪ್ಪಂದದಡಿಯಲ್ಲಿ ಅವರು ಪಡೆದ ವಾರ್ಷಿಕ ರಿಟೈನರ್‌ಶಿಪ್ ಶುಲ್ಕಕ್ಕೆ 5 ಕೋಟಿ ರೂ.ಗಳನ್ನು ನೀಡುತ್ತದೆ ಎಂದು ವರದಿಯಾಗಿದೆ.ಇದನ್ನೂ ಓದಿ: ಮುಂಬೈನಲ್ಲಿ ರಿಷಬ್ ಪಂತ್ ಗೆ ಯಶಸ್ವಿ ಮೊಣಕಾಲಿನ ಶಸ್ತ್ರಚಿಕಿತ್ಸೆಬಿಸಿಸಿಐ, ಟೀಮ್ ಇಂಡಿಯಾದ ಎಲ್ಲ ಕೇಂದ್ರೀಯ ಗುತ್ತಿಗೆ ಆಟಗಾರರಿಗೆ ವಿಮೆ ಮಾಡಲಾಗುತ್ತದೆ. ಬಿಸಿಸಿಐ ನಿಯಮಗಳ ಪ್ರಕಾರ, ಈ ಆಟಗಾರರು ಗಾಯದ ಕಾರಣ ಐಪಿಎಲ್‌ನಿಂದ ಹೊರಗುಳಿದಿದ್ದಲ್ಲಿ ಮಂಡಳಿಯಿಂದ ಪೂರ್ಣವಾಗಿ ಅವರಿಗೆ ಮೊತ್ತವನ್ನು ಪಾವತಿಸಲಾಗುತ್ತದೆ. ಈ ಮೊತ್ತವನ್ನು ವಿಮಾ ಕಂಪನಿ ಪಾವತಿಸುತ್ತದೆ. ಆದ್ದರಿಂದ ಫ್ರಾಂಚೈಸಿ ಬದಲು ಆಟಗಾರರಿಗೆ ಬಿಸಿಸಿಐ ಹಣ ಪಾವತಿಸುತ್ತದೆ ಎನ್ನಲಾಗಿದೆ.