ರೈತರ ಸಮಸ್ಯೆ ಆದಷ್ಟು ಬೇಗ ಸರ್ಕಾರ ಪರಿಹರಿಸಲಿ: ಯುವರಾಜ್‌ ಸಿಂಗ್‌ ಶನಿವಾರ ತಮ್ಮ 39ನೇ ಹುಟ್ಟುಹಬ್ಬವನ್ನು ರೈತರಿಗೆ ಸಮರ್ಪಿಸಿದ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಯುವರಾಜ್ ಸಿಂಗ್, ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಜತೆಗೆ ಆದಷ್ಟು ಬೇಗ ರೈತರ ಬೇಡಿಕೆ ಈಡೇರಲಿ ಎಂದು ಆಶಿಸಿದ್ದಾರೆ. ನವದೆಹಲಿ: ಶನಿವಾರ ತಮ್ಮ 39ನೇ ಹುಟ್ಟುಹಬ್ಬವನ್ನು ರೈತರಿಗೆ ಸಮರ್ಪಿಸಿದ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಯುವರಾಜ್ ಸಿಂಗ್, ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಜತೆಗೆ ಆದಷ್ಟು ಬೇಗ ರೈತರ ಬೇಡಿಕೆ ಈಡೇರಲಿ ಎಂದು ಆಶಿಸಿದ್ದಾರೆ.ಪ್ರತಿಭಟನಾ ನಿರತ ರೈತರಿಗೆ ಬೆಂಬಲ ನೀಡಿ ಟ್ವೀಟ್ ಮಾಡಿರುವ ಯುವರಾಜ್‌ ಸಿಂಗ್‌, ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಶೀಘ್ರವೇ ಒಪ್ಪಂದವಾಗಬೇಕು. ಮಾತುಕತೆಯ ಮೂಲಕ ಈ ಸಮಸ್ಯೆಗೆ ಸಾಮಾಜಿಕ ಪರಿಹಾರ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.ಕೇಂದ್ರ ಸರ್ಕಾರ ನೀಡಿರುವ ಪ್ರಶಸ್ತಿಗಳನ್ನು ಕ್ರೀಡಾಪಟುಗಳು ಹಿಂತಿರುಗಿಸಿ ರೈತರ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಯುವರಾಜ್‌ ಸಿಂಗ್‌ ತಂದೆ ಯೋಗರಾಜ್‌ ಸಿಂಗ್‌ ಈ ಹಿಂದೆ ಒತ್ತಾಯಿಸಿದ್ದರು. ಈ ಹೇಳಿಕೆಯನ್ನು ಯುವರಾಜ್‌ ಸಿಂಗ್ ತಾವು ಟ್ವೀಟ್‌ ಮಾಡಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.“ನನ್ನ ತಂದೆ ಇತ್ತೀಚೆಗೆ ಮಾತನಾಡಿದ ಮಾತುಗಳಿಂದ ನನಗೆ ಬೇಸರವಾಗಿದೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ”ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.