ಮುಂದಿನ ನಾಲ್ಕು ಪಂದ್ಯಗಳು ಆರ್‌ಸಿಬಿಗೆ ನಿರ್ಣಾಯಕ: ಕೋಚ್ ಸೈಮನ್‌ ಕ್ಯಾಟಿಚ್‌ ಮುಂದಿನ ನಾಲ್ಕು ಪಂದ್ಯಗಳು ರಾಯಲ್‌ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ)ಗೆ ಅತ್ಯಂತ ನಿರ್ಣಾಯಕವಾಗಿದ್ದು, ತಂಡದ ಐಪಿಎಲ್‌ ಟೂರ್ನಿಯ ಭವಿಷ್ಯ ಮುಂಬರುವ 8 ದಿನಗಳಲ್ಲಿ ಹೊರಬೀಳಲಿದೆ ಎಂದು ಆರ್‌ಸಿಬಿ ಮುಖ್ಯ ಕೋಚ್‌ ಸೈಮನ್‌ ಕ್ಯಾಟಿಚ್‌ ಅವರು ತಿಳಿಸಿದ್ದಾರೆ. ದುಬೈ: ಮುಂದಿನ ನಾಲ್ಕು ಪಂದ್ಯಗಳು ರಾಯಲ್‌ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ)ಗೆ ಅತ್ಯಂತ ನಿರ್ಣಾಯಕವಾಗಿದ್ದು, ತಂಡದ ಐಪಿಎಲ್‌ ಟೂರ್ನಿಯ ಭವಿಷ್ಯ ಮುಂಬರುವ 8 ದಿನಗಳಲ್ಲಿ ಹೊರಬೀಳಲಿದೆ ಎಂದು ಆರ್‌ಸಿಬಿ ಮುಖ್ಯ ಕೋಚ್‌ ಸೈಮನ್‌ ಕ್ಯಾಟಿಚ್‌ ಅವರು ತಿಳಿಸಿದ್ದಾರೆ.ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್‌ಗಳಿಗೆ 196 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿ ಹಿಂಬಾಲಿಸಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್‌ಗಳನ್ನು ಕಳೆದುಕೊಂಡು 137 ರನ್‌ಗಳಿಗೆ ಸೀಮಿತವಾಯಿತು. ಕಗಿಸೋ ರಬಾಡ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರೆ, ಅಕ್ಷರ್‌ ಪಟೇಲ್‌ ಹಾಗೂ ಆನ್ರಿಚ್‌ ನಾಟ್ಜ್‌ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆರ್‌ಸಿಬಿ 59 ರನ್‌ಗಳ ಸೋಲು ಅನುಭವಿಸಿತು."ಮುಂದಿನ ಎಂಟು ದಿನಗಳಲ್ಲಿ ನಾವು ತ್ವರಿತವಾಗಿ ನಾಲ್ಕು ಪಂದ್ಯಗಳನ್ನು ಆಡುತ್ತೇವೆ. ಇದು ನಮ್ಮ ಪಾಲಿಗೆ ಕಠಿಣವಾಗಲಿದೆ. ಇದರಿಂದ ನಾವು ಪ್ಲೇಆಫ್‌ ತಲುಪುತ್ತೇವೆ ಅಥವಾ ಇಲ್ಲವೆ ಎಂಬುದು ತಿಳಿಯಲಿದೆ. ತಂಡಕ್ಕೆ ಧನಾತ್ಮಕ ಮನೋಭಾವ ಅಗತ್ಯವಿದೆ," ಎಂದು ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಸೈಮನ್‌ ಕ್ಯಾಟಿಚ್ ಹೇಳಿದ್ದಾರೆ.ಇನ್ನು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ನಾವು ಬೇಗ ಹೊಂದಿಕೊಳ್ಳದ ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭಾರಿ ಅಂತರದಲ್ಲಿ ಸೋಲು ಅನುಭವಿಸಬೇಕಾಯಿತು ಎಂದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ."ಹೌದು, 196 ರನ್‌ಗಳು ಸ್ವಲ್ಪ ಜಾಸ್ತಿ ಆಯ್ತು ಎಂದೆನಿಸಿತು. ಇದರ ಶ್ರೇಯ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸಲ್ಲಬೇಕು. ಮೊದಲ ಆರು ಓವರ್‌ಗಳಲ್ಲಿ ಅವರು ಅತ್ಯುತ್ತಮ ಆರಂಭ ಪಡೆದರು. ಮಧ್ಯಮ ಓವರ್‌ಗಳಲ್ಲಿ ನಾವು ಕಮ್‌ಬ್ಯಾಕ್‌ ಮಾಡಿದ್ದೆವು. ಆದರೆ, ಕೊನೆಯ ಹಂತದಲ್ಲಿ ಡೆಲ್ಲಿ ಮೇಲುಗೈ ಸಾಧಿಸಿತು. ನಿಧಾನಗತಿಯಲ್ಲಿ ಬೌಲಿಂಗ್‌ ಹೊಂದಿಕೊಂಡೆವು. ಅಲ್ಲದೆ, ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಬೇಗ ವಿಕೆಟ್‌ಗಳನ್ನು ಪಡೆದಿದ್ದರೆ, ಇನ್ನೂ 20 ರನ್‌ಗಳನ್ನು ನಿಯಂತ್ರಿಸಬಹುದಿತ್ತು," ಎಂದು ಹೇಳಿದರು."ಡೆಲ್ಲಿ ಬ್ಯಾಟಿಂಗ್‌ ಚೆನ್ನಾಗಿ ಮಾಡಿದರು ಎಂದು ಭಾವಿಸುತ್ತೇನೆ. ನಾವು ಕೂಡ ಒಂದು ಹಂತದಲ್ಲಿ ಕಮ್‌ಬ್ಯಾಕ್‌ ಮಾಡಿದ್ದೆವು. ಆದರೆ, ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾಗಿದ್ದೇವೆ. ಇಲ್ಲಿನ ಪರಿಸ್ಥಿತಿಗಳ ಲಾಭವನ್ನು ನಾವು ಸದುಪಯೋಗಪಡಿಸಿಕೊಳ್ಳಲಿಲ್ಲ. ಕೆಲ ಕ್ಯಾಚ್‌ಗಳನ್ನು ಕೈಚೆಲ್ಲಿದೆವು. ಫೀಲ್ಡಿಂಗ್‌ನಲ್ಲಿ ಕೆಲ ತಪ್ಪುಗಳನ್ನು ಮಾಡಲಾಯಿತು. ಇದರಿಂದ 20 ರಿಂದ 30 ರನ್‌ಗಳನ್ನು ಬಿಟ್ಟುಕೊಡಬೇಕಾಯಿತು. ಬ್ಯಾಟಿಂಗ್‌ನಲ್ಲಿಯೂ ನಾವು ಚೆನ್ನಾಗಿ ಪ್ರದರ್ಶನ ತೋರಲಿಲ್ಲ," ಎಂದು ತಿಳಿಸಿದರು.