ಶ್ರೀಲಂಕಾ ತೊರೆದ ಭಾರತ ತಂಡ: ಕ್ವಾರಂಟೈನ್‌ನಲ್ಲೇ ಉಳಿದ ಕೃಣಾಲ್ ಪಾಂಡ್ಯ, ಚಹಲ್, ಕೆ ಗೌತಮ್ ಶ್ರೀಲಂಕಾ ವಿರುದ್ಧ ಏಕದಿನ ಮತ್ತು ಟಿ–20 ಪಂದ್ಯಗಳ ಸರಣಿ ಮುಕ್ತಾಯದ ಹಿನ್ನಲೆಯಲ್ಲಿ ಭಾರತ ಕ್ರಿಕೆಟ್ ತಂಡ ತವರಿಗೆ ವಾಪಸ್ ಆಗಿದೆ. ಕೊಲಂಬೊ: ಶ್ರೀಲಂಕಾ ವಿರುದ್ಧ ಏಕದಿನ ಮತ್ತು ಟಿ–20 ಪಂದ್ಯಗಳ ಸರಣಿ ಮುಕ್ತಾಯದ ಹಿನ್ನಲೆಯಲ್ಲಿ ಭಾರತ ಕ್ರಿಕೆಟ್ ತಂಡ ತವರಿಗೆ ವಾಪಸ್ ಆಗಿದೆ.ಶಿಖರ್ ಧವನ್ ನೇತೃತ್ವದ ಭಾರತ ಕ್ರಿಕೆಟ್ ತಂಡವು ಶುಕ್ರವಾರ ಶ್ರೀಲಂಕಾದಿಂದ ಭಾರತಕ್ಕೆ ತೆರಳಿದ್ದು, ಕೋವಿಡ್ -19ನಿಂದ ಚೇತರಿಸಿಕೊಳ್ಖುತ್ತಿರುವ ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಮಾತ್ರ ಕ್ವಾರಂಟೈನ್‌ ನಲ್ಲೇ ಉಳಿದಿದ್ದಾರೆ. ಅಂತೆಯೇ ಇಂದು ಕೋವಿಡ್ ಪರೀಕ್ಷೆ ಪಾಸಿಟಿವ್ ಬಂದಿರುವ ಯಜುವೇಂದ್ರ ಚಹಲ್, ಮತ್ತು ಕೆ ಗೌತಮ್ ಕೊಲಂಬೋದಲ್ಲಿರುವ ಕೋವಿಡ್ ಕೇಂದ್ರದಲ್ಲಿ ಕೃಣಾಲ್ ಪಾಂಡ್ಯ ಅವರೊಂದಿಗೆ ಐಸೊಲೇಷನ್ ನಲ್ಲಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಒಂದು ವಾರದ ಬಳಿಕ ಆಟಗಾರರಿಗೆ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲಿದ್ದು, ಆ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಮೂವರು ಆಟಗಾರರು ಭಾರತಕ್ಕೆ ವಾಪಸ್ ಆಗಲಿದ್ದಾರೆ.‘ವಾರದ ನಂತರ, ಆಟಗಾರರ ಆರ್‌ಟಿ-ಪಿಸಿಆರ್ ವರದಿಯಲ್ಲಿ ನೆಗೆಟಿವ್ ಬಂದರೆ ಮಾತ್ರ ಅವರನ್ನು ವಾಪಸ್ ತೆರಳಲು ಅನುಮತಿಸಲಾಗುತ್ತದೆ. ಪ್ರಸ್ತುತ, ಅವರು ತಮ್ಮ ಕ್ವಾರಂಟೈನ್‌ ಕೇಂದ್ರದಲ್ಲಿರಲಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಇಂಗ್ಲೆಂಡ್ ಗೆ ಹಾರಿದ ಪೃಥ್ವಿ ಶಾ, ಸೂರ್ಯ ಕುಮಾರ್ ಯಾದವ್ ಇನ್ನು ಇಂಗ್ಲೆಂಡ್‌ನಲ್ಲಿರುವ ಭಾರತ ತಂಡ ಸೇರಬೇಕಿರುವ ಸೂರ್ಯಕುಮಾರ್ ಯಾದವ್ ಮತ್ತು ಪೃಥ್ವಿ ಶಾ ಅವರು ಶ್ರೀಲಂಕಾ ರಾಜಧಾನಿ ಕೊಲಂಬೊದಿಂದಲೇ ಇಂಗ್ಲೆಂಡ್ ಹೊರಡುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.