ಐಪಿಎಲ್ 2023 : ಚೆನ್ನೈ ವಿರುದ್ಧ ರಾಜಸ್ಥಾನಕ್ಕೆ 3 ರನ್ ಗಳ ಗೆಲುವು ಚೆನ್ನೈ ನಲ್ಲಿ ನಡೆದ ಐಪಿಎಲ್ 17 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ತಂಡ 3 ರನ್ ಗಳ ಗೆಲುವು ಸಾಧಿಸಿದೆ. ಚೆನ್ನೈ: ಚೆನ್ನೈ ನಲ್ಲಿ ನಡೆದ ಐಪಿಎಲ್ 17 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ತಂಡ 3 ರನ್ ಗಳ ಗೆಲುವು ಸಾಧಿಸಿದೆ. ಚೆನ್ನೈ ಪರ 200 ನೇ ಪಂದ್ಯವನ್ನಾಡಿದ ನಾಯಕ ಎಂಎಸ್ ಧೋನಿ ಉತ್ತಮ ಬ್ಯಾಟಿಂಗ್ ಮಾಡಿದರಾದರೂ ಅಂತಿಮವಾಗಿ ಗೇಮ್ ಫಿನಿಷರ್ ಆಗಲು ಸಾಧ್ಯವಾಗಲಿಲ್ಲ.ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಅಶ್ವಿನ್ ಹಾಗೂ ಯಜುವೇಂದ್ರ ಚಹಾಲ್ ಮುಳುವಾದರು. ಚೆನ್ನೈ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಆರಂಭಿಕ ಆಟಗಾರರಾದ ಋತುರಾಜ್ ಗಾಯಕ್ವಾಡ್ (10 ಎಸೆತಗಳಲ್ಲಿ 8 ರನ್) ಡೆವೊನ್ ಕಾನ್ವೇ ( 38 ಎಸೆತಗಳಲ್ಲಿ 50 ರನ್) ಗಳಿಸಿ ಉತ್ತಮ ಆರಂಭ ನೀಡಿದರು. ನಂತರ ಬಂದ ಅಜಿಂಕ್ಯ ರೆಹಾನೆ ಸಹ 19 ಎಸೆತಗಳಲ್ಲಿ 31 ರನ್ ಗಳಿಸಿದರು. ಚೆನ್ನೈ ತಂಡದ ಈ ಚೇತರಿಕೆ ಹಂತದಲ್ಲಿ ಆರ್ ಅಶ್ವಿನ್ ಶಿವಮ್ ದುಬೆ (9 ಎಸೆತಗಳಲ್ಲಿ 8 ರನ್) ಹಾಗೂ ಅಜಿಂಕ್ಯಾ ರೆಹಾನೆ ವಿಕೆಟ್ ಪಡೆಯುವ ಮೂಲಕ ಮಾರಕವಾಗಿ ಪರಿಣಮಿಸಿದರು. ನಂತರ ಆಂಬಟಿ ರಾಯುಡು (2 ಎಸೆತಗಳಲ್ಲಿ 1 ರನ್) ಅವರನ್ನು ಪೆವಿಲಿಯನ್ ಗೆ ಕಳಿಸುವ ಮೂಲಕ ಚಹಾಲ್ ಚೆನ್ನೈ ಗೆಲುವಿನ ಆಸೆಗೆ ಮತ್ತಷ್ಟು ಮಾರಕವಾದರು. ಕೊನೆಯಲ್ಲಿ ರವೀಂದ್ರ ಜಡೇಜಾ (15 ಎಸೆತಗಳಲ್ಲಿ 25 ರನ್) ಹಾಗೂ ಧೋನಿ (17 ಎಸೆತಗಳಲ್ಲಿ 32) ಗಳಿಸಿ ತಂಡವನ್ನು ಗೆಲ್ಲಿಸಲು ಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ. ಪರಿಣಾಮ ಸಿಎಸ್ ಕೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 172 ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.ರಾಜಸ್ಥಾನ ರಾಯಲ್ಸ್ ಪರ ಆರ್ ಅಶ್ವಿನ್ 25 ರನ್ ನೀಡಿ 2 ವಿಕೆಟ್, 27 ರನ್ ನೀಡಿದ ಯಜುವೇಂದ್ರ ಚಹಾಲ್ 2 ವಿಕೆಟ್ ಪಡೆದು ಉತ್ತಮ ಬೌಲರ್ ಎನಿಸಿದರು.