ಹೊಡೆದಾಡಿಕೊಂಡ ಎಂಎಸ್ ಧೋನಿ-ರೋಹಿತ್ ಅಭಿಮಾನಿಗಳು: ಓರ್ವನ ಸ್ಥಿತಿ ಗಂಭೀರ! ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರ ಅಭಿಮಾನಿಗಳು ಬ್ಯಾನರ್ ವಿಚಾರಕ್ಕೆ ಬಡಿದಾಡಿಕೊಂಡಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ. ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರ ಅಭಿಮಾನಿಗಳು ಬ್ಯಾನರ್ ವಿಚಾರಕ್ಕೆ ಬಡಿದಾಡಿಕೊಂಡಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ. ಬ್ಯಾನರ್ ಹಾಕುವ ವಿಚಾರಕ್ಕೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕುರುಂದವಾಡ್ ನಲ್ಲಿ ಈ ಘಟನೆ ನಡೆದಿದ್ದು ಧೋನಿ ಅಭಿಮಾನಿಗಳು ರೋಹಿತ್ ಅಭಿಮಾನಿಯೋರ್ವನನ್ನು ಗಂಭೀರವಾಗಿ ಥಳಿಸಿದ್ದಾರೆ. ಎಂಎಸ್ ಧೋನಿ ಆಗಸ್ಟ್ 15ರಂದು ನಿವೃತ್ತಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಧೋನಿ ಅಭಿಮಾನಿಗಳು ಕುರುಂದವಾಡ್ ನಲ್ಲಿ ಬ್ಯಾನರ್ ಹಾಕಿದ್ದರು. ಇನ್ನು ನಿನ್ನೆ ರೋಹಿತ್ ಶರ್ಮಾ ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಘೋಷಣೆಯಾಗಿತ್ತು. ಇದರಿಂದಾಗಿ ರೋಹಿತ್ ಅಭಿಮಾನಿಗಳು ಅದೇ ಜಾಗದಲ್ಲಿ ಬ್ಯಾನರ್ ಹಾಕಿದ್ದರು. ಈ ವೇಳೆ ಧೋನಿ ಬ್ಯಾನರ್ ಅನ್ನು ಕಿತ್ತು ಹಾಕಲಾಗಿತ್ತು. ಇದರಿಂದ ರೊಚ್ಚಿಗೆದ್ದ ಎಂಎಸ್ ಧೋನಿ ಅಭಿಮಾನಿಗಳು ರೋಹಿತ್ ಅಭಿಮಾನಿ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ನಂತರ ಆತನನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ.