ಮುಂಬೈನಲ್ಲಿ ಟೀಮ್ ಇಂಡಿಯಾ ವಿಜಯೋತ್ಸವ ಪರೇಡ್ ಗೆ ಉಚಿತ ಪ್ರವೇಶ ಮುಂಬೈನಲ್ಲಿ ಸಂಜೆ 5 ಗಂಟೆಯಿಂದ ಮರೈನ್ ಡ್ರೈವ್‌ನ ಉದ್ದಕ್ಕೂ ತೆರೆದ ಬಸ್ ನಲ್ಲಿ ಭಾರತ ತಂಡದ ವಿಜಯೋತ್ಸವ ಮೆರವಣಿಗೆ ಸಾಗಲಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿ ಮುಕ್ತಾಯಗೊಳ್ಳುತ್ತದೆ. ಮುಂಬೈ: ಐಸಿಸಿ ಟಿ20 ವಿಶ್ವಕಪ್ ಗೆದ್ದಿರುವ ಭಾರತೀಯ ಕ್ರಿಕೆಟ್ ತಂಡ ಮುಂಬೈನಲ್ಲಿ ಅದ್ಧೂರಿ ವಿಜಯೋತ್ಸವ ಮೆರವಣಿಗೆ ನಡೆಸಲಿದ್ದು, ಈ ಸಂಭ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಅಜಿಂಕ್ಯ ನಾಯ್ಕ್ ಅವರು ಗುರುವಾರ ಹೇಳಿದ್ದಾರೆ.ಇಂದು ಬೆಳಗ್ಗೆ ದೆಹಲಿಯಲ್ಲಿ ಸಂಭ್ರಮಾಚರಣೆ ಮುಗಿಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ರೋಹಿತ್ ಶರ್ಮಾ ನೇತೃತ್ವದ ತಂಡ ಮುಂಬೈಗೆ ತೆರಳಲಿದೆ.ಮುಂಬೈನಲ್ಲಿ ಸಂಜೆ 5 ಗಂಟೆಯಿಂದ ಮರೈನ್ ಡ್ರೈವ್‌ನ ಉದ್ದಕ್ಕೂ ತೆರೆದ ಬಸ್ ನಲ್ಲಿ ಭಾರತ ತಂಡದ ವಿಜಯೋತ್ಸವ ಮೆರವಣಿಗೆ ಸಾಗಲಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿ ಮುಕ್ತಾಯಗೊಳ್ಳುತ್ತದೆ.ಈ ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು ಮುಂಬೈ ಪೊಲೀಸ್ ಮತ್ತು ಬಿಸಿಸಿಐ ಸಹಯೋಗದೊಂದಿಗೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ನಾಯಕ್ ತಿಳಿಸಿದ್ದಾರೆ."ಮುಂಬೈ ಪೊಲೀಸ್ ಮತ್ತು ಬಿಸಿಸಿಐ ಮಾರ್ಗದರ್ಶನದಲ್ಲಿ, ನಾವು ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ಸಾರ್ವಜನಿಕರಿಗೆ ಉಚಿತ ಪ್ರವೇಶವನ್ನು ನೀಡುತ್ತಿದ್ದೇವೆ. ಈ ಸಂಬಂಧ ನಾವು ನಿನ್ನೆ ಮುಂಬೈ ಪೊಲೀಸರೊಂದಿಗೆ ಸಭೆ ನಡೆಸಿದ್ದೇವೆ ಮತ್ತು ಎಂಸಿಎ ಗರಿಷ್ಠ ಪೊಲೀಸ್ ಉಪಸ್ಥಿತಿಗೆ ವ್ಯವಸ್ಥೆ ಮಾಡಿದೆ. ಎಂಸಿಎ ಮತ್ತು ದೇಶಕ್ಕೆ ಹೆಮ್ಮೆಯ ಕ್ಷಣ ಮತ್ತು ಭಾರತ ತಂಡವನ್ನು ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ ಎಂದು ನಾಯಕ್ ಹೇಳಿದ್ದಾರೆ.