ಹೈದರಾಬಾದ್‌: ದೆಹಲಿ ಮೂಲದ ವ್ಯಕ್ತಿಗೆ 20 ಲಕ್ಷ ರೂ. ವಂಚನೆ, ಪಿಹೆಚ್ ಡಿ ಸ್ಕಾಲರ್ ಬಂಧನ ಆರೋಪಿ ಲಕ್ಕು ಅಖಿಲೇಶ್ವರ್ ರೆಡ್ಡಿ ತೆಲಂಗಾಣದ ನಿವಾಸಿಯಾಗಿದ್ದು, ಅವರು ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪಿಹೆಚ್ ಡಿ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಫ್ಲೆಕ್ಸ್ ಪ್ರಿಂಟಿಂಗ್ ವ್ಯವಹಾರ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈದರಾಬಾದ್: ಆನ್‌ಲೈನ್ ಕೆಲಸಗಳನ್ನು ಪೂರ್ಣಗೊಳಿಸುವ ಮೂಲಕ ಹೆಚ್ಚು ಹಣ ಗಳಿಸುವುದಾಗಿ ಆಮಿಷ ಒಡ್ಡಿ ದೆಹಲಿ ಮೂಲದ ವ್ಯಕ್ತಿಗೆ ಸುಮಾರು 20 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ಪಿಹೆಚ್ ಡಿ ಸ್ಕಾಲರ್ ಒಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.ಆರೋಪಿ ಲಕ್ಕು ಅಖಿಲೇಶ್ವರ್ ರೆಡ್ಡಿ ತೆಲಂಗಾಣದ ನಿವಾಸಿಯಾಗಿದ್ದು, ಅವರು ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪಿಹೆಚ್ ಡಿ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಫ್ಲೆಕ್ಸ್ ಪ್ರಿಂಟಿಂಗ್ ವ್ಯವಹಾರ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ದೆಹಲಿಯ ದ್ವಾರಕ ನಿವಾಸಿ ಅಕ್ಷಯ್ ಕುಮಾರ್ ಸಿಂಗ್ "ರಾಷ್ಟ್ರೀಯ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ ದೂರನ್ನು ದಾಖಲಿಸಿದ್ದರು.ಕಳೆದ ವರ್ಷ ನವೆಂಬರ್ 23 ರಂದು ಆನ್‌ಲೈನ್ ಮೆಸೇಜಿಂಗ್ ಆ್ಯಪ್ ಟೆಲಿಗ್ರಾಮ್‌ನಲ್ಲಿ ಅರೆಕಾಲಿಕ ಉದ್ಯೋಗದ ಕುರಿತು ಸಂದೇಶವೊಂದನ್ನು ಸ್ವೀಕರಿಸಲಾಗಿತ್ತು. ಆರೋಪಿಗಳು ಕ್ರಿಪ್ಟೋಕರೆನ್ಸಿಯನ್ನು ಖರೀದಿಸಲು ಮತ್ತು ಮಾರಾಟ ಮಾಡಲು ವೆಬ್‌ಸೈಟ್‌ನಲ್ಲಿ ಖಾತೆಯೊಂದನ್ನು ತೆರೆಯಲು ಸೂಚಿಸಿದರು. ಅಲ್ಲದೇ ಕೆಲವೊಂದು ಕೆಲಸಗಳನ್ನು ಹೇಳಲಾಗಿತ್ತು. ಆರೋಪಿಗಳ ನಿರ್ದೇಶನದಂತೆ ರೂ. 20 ಲಕ್ಷದ 16 ಸಾವಿರ ಹೂಡಿಕೆ ಮಾಡಿದ್ದು, ನಂತರ ವಂಚಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ದ್ವಾರಕ ಉಪ ಆಯುಕ್ತ ಅಂಕಿತ್ ಸಿಂಗ್ ಹೇಳಿದ್ದಾರೆ. ದೂರನ್ನು ಸ್ವೀಕರಿಸಿದ ನಂತರ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.