ಸೆಂಗೋಲ್ 'ರಾಜದಂಡ', ಅದನ್ನು ತೆಗೆದು ಸಂವಿಧಾನದ ಪ್ರತಿ ಇಡಬೇಕು: ಸಮಾಜವಾದಿ ಪಕ್ಷದ ಸಂಸದ ಈ ಸಂಬಂಧ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬುಧವಾರ ಪತ್ರ ಬರೆದಿರುವ ಎಸ್ ಪಿ ಸಂಸದ ಆರ್ ಕೆ ಚೌಧರಿ ಅವರು, 'ಸೆಂಗೋಲ್' ಎಂದರೆ 'ರಾಜದಂಡ'. ಅದನ್ನು ತೆಗೆದು ಸಂವಿಧಾನದ ಪ್ರತಿ ಇಡಬೇಕು ಎಂದು ಆಗ್ರಹಿಸಿದ್ದಾರೆ. ನವದೆಹಲಿ: ಪ್ರಜಾಪ್ರಭುತ್ವದ ದೇಗುಲ ಎಂದೇ ಕರೆಯಲಾಗುವ ಹೊಸ ಸಂಸತ್ ಭವನದಲ್ಲಿ ಲೋಕಸಭೆಯ ಸ್ಪೀಕರ್ ಪೀಠದ ಬಲಭಾಗದಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಜದಂಡ `ಸೆಂಗೋಲ್' ಗೆ ಸಮಾಜವಾದಿ ಪಕ್ಷದ ಸಂಸದ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅದನ್ನು ತೆಗೆದು ಆ ಜಾಗದಲ್ಲಿ ಸಂವಿಧಾನದ ಪುಸ್ತಕ ಇಡಬೇಕು ಎಂದು ಒತ್ತಾಯಿಸಿದ್ದಾರೆ.ಈ ಸಂಬಂಧ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬುಧವಾರ ಪತ್ರ ಬರೆದಿರುವ ಎಸ್ ಪಿ ಸಂಸದ ಆರ್ ಕೆ ಚೌಧರಿ ಅವರು, 'ಸೆಂಗೋಲ್' ಎಂದರೆ 'ರಾಜದಂಡ'. ಅದನ್ನು ತೆಗೆದು ಸಂವಿಧಾನದ ಪ್ರತಿ ಇಡಬೇಕು ಎಂದು ಆಗ್ರಹಿಸಿದ್ದಾರೆ.'ಸೆಂಗೋಲ್' ಅನ್ನು 'ರಾಜದಂಡ' ಎಂದು ಕರೆದ ಚೌಧರಿ, "ರಾಜರು ರಾಜದಂಡವನ್ನು ನಾಗರಿಕರ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಬಳಸುತ್ತಿದ್ದರು. ಆದರೆ ಈಗ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದೇವೆ ಮತ್ತು ಸಂವಿಧಾನವನ್ನು ಅನುಸರಿಸುತ್ತೇವೆ" ಎಂದು ಹೇಳಿದ್ದಾರೆ."ಸಂವಿಧಾನದ ಅಂಗೀಕಾರವು ದೇಶದಲ್ಲಿ ಪ್ರಜಾಪ್ರಭುತ್ವದ ಆರಂಭವನ್ನು ಗುರುತಿಸಿದೆ ಮತ್ತು ಸಂವಿಧಾನವು ಅದರ ಸಂಕೇತವಾಗಿದೆ. ಬಿಜೆಪಿ ಸರ್ಕಾರ ತನ್ನ ಕೊನೆಯ ಅವಧಿಯಲ್ಲಿ ಸ್ಪೀಕರ್ ಕುರ್ಚಿಯ ಪಕ್ಕದಲ್ಲಿ 'ಸೆಂಗೋಲ್' ಅನ್ನು ಸ್ಥಾಪಿಸಿತು. ಸೆಂಗೋಲ್ ಎಂಬುದು ತಮಿಳು ಪದವಾಗಿದೆ, ಇದರರ್ಥ ರಾಜದಂಡ. ಆದರೆ ರಾಜರ ಕಾಲದಿಂದ ನಾವು ಈಗ ಸ್ವತಂತ್ರರಾಗಿದ್ದೇವೆ ಎಂದರ್ಥ ಎಂದು ಚೌಧರಿ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ."ಪ್ರಜಾಪ್ರಭುತ್ವವನ್ನು ಉಳಿಸಲು" 'ಸೆಂಗೋಲ್' ಅನ್ನು ತೆಗೆದು ಆ ಜಾಗದಲ್ಲಿ ಸಂವಿಧಾನದ ಪ್ರತಿ ಇಡಬೇಕು ಎಂದು ಉತ್ತರ ಪ್ರದೇಶದ ಮಾಜಿ ಸಚಿವ ಒತ್ತಾಯಿಸಿದರು.ಎಸ್‌ಪಿ ನಾಯಕರ ಈ ಹೇಳಿಕೆಯನ್ನು ಇಂಡಿಯಾ ಬ್ಲಾಕ್ ನಾಯಕರು ಬೆಂಬಲಿಸಿದರೆ, ಬಿಜೆಪಿ ನೇತೃತ್ವದ ಎನ್‌ಡಿಎ ನಾಯಕರು, ಚೌಧರಿ ತಮಿಳು ಸಂಸ್ಕೃತಿಯನ್ನು ಅವಮಾನಿಸಿದ್ದಾರೆ ಎಂದು ಟೀಕಿಸಿದ್ದಾರೆ.ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್ ಕೂಡ ಚೌಧರಿ ಅವರ ಬೇಡಿಕೆಯನ್ನು ಬೆಂಬಲಿಸಿದ್ದಾರೆ. ನೂತನ ಸಂಸತ್ ಭವನ ಉದ್ಘಾಟನೆಯ ಸಮಯದಲ್ಲಿ ಕೇಂದ್ರ ಸರ್ಕಾರ ನಾಟಕೀಯ ಬೆಳವಣಿಗೆಗಳನ್ನು ಸೃಷ್ಟಿಸಿತ್ತು ಎಂದು ಆರೋಪಿಸಿದರು. ಅಲ್ಲದೆ "ಇದು ನಮ್ಮ ಸಮಾಜವಾದಿ ಪಕ್ಷದ ಸಹೋದ್ಯೋಗಿಯ ಉತ್ತಮ ಸಲಹೆಯಾಗಿದೆ" ಎಂದು ಟ್ಯಾಗೋರ್ ಹೇಳಿದ್ದಾರೆ.ಇನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಎಸ್ ಪಿ ಸಂಸದರ ಹೇಳಿಕೆ ಸಾಂಪ್ರದಾಯಿಕ ರಾಜದಂಡ 'ಸೆಂಗೋಲ್'ಗೆ ಮಾಡಿದ "ಅವಮಾನ".ಈ ಹೇಳಿಕೆಯು ಸಮಾಜವಾದಿ ಪಕ್ಷದ(ಎಸ್‌ಪಿ) ನಾಯಕರ ಅಜ್ಞಾನವನ್ನು ಬಹಿರಂಗಪಡಿಸುತ್ತದೆ ಮತ್ತು ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಅವರಿಗೆ ಗೌರವ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.ತಮಿಳುನಾಡಿನಿಂದ ತಂದಿರುವ 5 ಅಡಿ ಉದ್ದದ ಚಿನ್ನದ ಲೇಪನ ಇರುವ ಸೆಂಗೋಲ್ ಅನ್ನು ಲೋಕಸಭೆಯ ಸ್ಪೀಕರ್ ಮುಂದುಗಡೆ ಇಡಲಾಗಿದ್ದು, ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಸಂಸತ್ ಅಧಿವೇಶದಲ್ಲಿ ರಾಜದಂಡ `ಸೆಂಗೋಲ್' ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಗಳಿವೆ. . . ' . ' …