ಹಿಮಾಚಲ ಪ್ರದೇಶ: ಕೊನೆಗೂ ಮೂವರು ಪಕ್ಷೇತರ ಶಾಸಕರ ರಾಜೀನಾಮೆ ಅಂಗೀಕರಿಸಿದ ಸ್ಪೀಕರ್ ಮೂವರು ಪಕ್ಷೇತರ ಶಾಸಕರ ರಾಜೀನಾಮೆಯನ್ನು ಕೊನೆಗೂ ಹಿಮಾಚಲ ಪ್ರದೇಶ ವಿಧಾನಸಭೆ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರು ಸೋಮವಾರ ಅಂಗೀಕರಿಸಿದ್ದಾರೆ. ಶಿಮ್ಲಾ: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ್ದ ಮೂವರು ಪಕ್ಷೇತರ ಶಾಸಕರ ರಾಜೀನಾಮೆಯನ್ನು ಕೊನೆಗೂ ಹಿಮಾಚಲ ಪ್ರದೇಶ ವಿಧಾನಸಭೆ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರು ಸೋಮವಾರ ಅಂಗೀಕರಿಸಿದ್ದಾರೆ."ರಾಜೀನಾಮೆಗಳನ್ನು ಅಂಗೀಕರಿಸಲಾಗಿದೆ ಮತ್ತು ಈ ಮೂವರು ಶಾಸಕರು ತಕ್ಷಣದಿಂದ ಜಾರಿಗೆ ಬರುವಂತೆ 14ನೇ ವಿಧಾನಸಭೆಯ ಸದಸ್ಯತ್ವ ಕಳೆದುಕೊಳ್ಳುತ್ತಾರೆ" ಎಂದು ಪಠಾನಿಯಾ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.ಪಕ್ಷೇತರ ಶಾಸಕರಾದ ಹೋಶಿಯಾರ್ ಸಿಂಗ್(ಡೆಹ್ರಾ), ಆಶಿಶ್ ಶರ್ಮಾ(ಹಮೀರ್‌ಪುರ್) ಮತ್ತು ಕೆ ಎಲ್ ಠಾಕೂರ್(ನಲಗಢ) ಅವರು ಫೆಬ್ರವರಿ 27 ರ ರಾಜ್ಯಸಭಾ ಚುನಾವಣೆಯಲ್ಲಿ ಆರು ಕಾಂಗ್ರೆಸ್ ಬಂಡಾಯ ಶಾಸಕ ಜೊತೆಗೆ ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಪರವಾಗಿ ಮತ ಚಲಾಯಿಸಿದ್ದರು.ಈ ಮೂವರು ಶಾಸಕರು ಮಾರ್ಚ್ 22 ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಸ್ಪೀಕರ್ ಅವರ ರಾಜೀನಾಮೆಯನ್ನು ಅಂಗೀಕರಿಸಲಿಲ್ಲ. ಈ ಶಾಸಕರು ಸ್ವಯಂಪ್ರೇರಿತವಾಗಿ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದಿಂದ ದೂರು ಸ್ವೀಕರಿಸಿರುವುದಾಗಿ ಸ್ಪೀಕರ್ ಹೇಳಿದ್ದರು.ಈ ಮೂವರು ಶಾಸಕರು ಮಾರ್ಚ್ 23 ರಂದು ಬಿಜೆಪಿಗೆ ಸೇರ್ಪಡೆಯಾಗಿದ್ದರು ಮತ್ತು ತಮ್ಮ ರಾಜೀನಾಮೆಗಳನ್ನು ಅಂಗೀಕರಿಸಲು ಸ್ಪೀಕರ್‌ಗೆ ನಿರ್ದೇಶನ ನೀಡುವಂತೆ ಕೋರಿ ಹಿಮಾಚಲ ಪ್ರದೇಶ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.ಆದರೆ, ನ್ಯಾಯಾಲಯವು ಈ ನಿಟ್ಟಿನಲ್ಲಿ ಸ್ಪೀಕರ್‌ಗೆ ನಿರ್ದೇಶನ ನೀಡಬಹುದೇ ಎಂಬ ಬಗ್ಗೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದರಿಂದ, ಪ್ರಕರಣವನ್ನು ಮೂರನೇ ನ್ಯಾಯಾಧೀಶರಿಗೆ ವರ್ಗಾಯಿಸಲಾಯಿತು. ಅದು ನ್ಯಾಯಾಲಯದಲ್ಲಿ ಇನ್ನೂ ಬಾಕಿ ಇದೆ.