ರಾಜಿನಾಮೆ ಕೊಟ್ಟರೆ, ವಿರೋಧ ಪಕ್ಷಗಳನ್ನು ಗುರಿಯಾಗಿಸಲು ಬಿಜೆಪಿಗೆ ಮುಕ್ತ ಹಸ್ತ ನೀಡಿದಂತೆ: ಕೇಜ್ರಿವಾಲ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೇರಿದಂತೆ ಪ್ರತಿಪಕ್ಷಗಳ ಮುಖ್ಯಮಂತ್ರಿಗಳನ್ನು ಗುರಿಯಾಗಿಸಲು ಬಿಜೆಪಿಗೆ ಮುಕ್ತ ಹಸ್ತ ನೀಡಿದಂತೆ. ನವದೆಹಲಿ: ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಏಕೆಂದರೆ ಅದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೇರಿದಂತೆ ಪ್ರತಿಪಕ್ಷಗಳ ಮುಖ್ಯಮಂತ್ರಿಗಳನ್ನು ಗುರಿಯಾಗಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮುಕ್ತ ಹಸ್ತ ನೀಡಿದಂತೆ ಮತ್ತು ಇದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಹೇಳಿದ್ದಾರೆ.ಜೂನ್ 1 ರಂದು ಮಧ್ಯಂತರ ಜಾಮೀನು ಅಂತ್ಯಗೊಂಡ ನಂತರ ತಿಹಾರ್ ಜೈಲಿಗೆ ಹಿಂತಿರುಗಬೇಕಾದ ಕೇಜ್ರಿವಾಲ್ ಅವರು, ಜೈಲಿನಿಂದ ದೆಹಲಿ ಮುಖ್ಯಮಂತ್ರಿಯಾಗಿ ತಮ್ಮ ಕರ್ತವ್ಯಗಳನ್ನು ಪೂರೈಸಲು ಅನುಮತಿ ಕೋರಿ ಕೋರ್ಟ್ ಮೆಟ್ಟಿಲೇರುವುದಾಗಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಕೇಜ್ರಿವಾಲ್ ತಿಳಿಸಿದ್ದಾರೆ.ಎಎಪಿ ರಾಷ್ಟ್ರೀಯ ಸಂಚಾಲಕರರಾಗಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಅಬಕಾರಿ ನೀತಿ ಸಂಬಂಧ ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು."ಆದಾಯ ತೆರಿಗೆ ಆಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ ನಂತರ ನಾನು ದೆಹಲಿಯ ಕೊಳೆಗೇರಿಯಲ್ಲಿ ಕೆಲಸ ಮಾಡಿದ್ದೇನೆ. ನಾನು ಮೊದಲ ಬಾರಿ ದೆಹಲಿಯ ಮುಖ್ಯಮಂತ್ರಿಯಾದ ನಂತರ 49 ದಿನಗಳಲ್ಲಿ(2013 ರಲ್ಲಿ) ಅಧಿಕಾರದಿಂದ ಕೆಳಗಿಳಿದಾಗ ಯಾರೂ ನನ್ನ ರಾಜೀನಾಮೆ ಕೇಳಲಿಲ್ಲ. ಮುಖ್ಯಮಂತ್ರಿ ಗಾದಿ ಅಲ್ಲ ಯಾರೂ ಪ್ಯೂನ್ ಕೆಲಸ ಸಹ ಬಿಟ್ಟುಕೊಡುವುದಿಲ್ಲ. ಆದರೆ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದೆ' ಎಂದರು.ನಾನು ಈ ಬಾರಿ ಉದ್ದೇಶಪೂರ್ವಕವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಇದು ನನ್ನ ಹೋರಾಟದ ಭಾಗವಾಗಿದೆ ಎಂದು ದೆಹಲಿ ಸಿಎಂ ಹೇಳಿದ್ದಾರೆ.ಆಮ್ ಆದ್ಮಿ ಪಕ್ಷವು 67 ಅಸೆಂಬ್ಲಿ ಸ್ಥಾನಗಳನ್ನು (2015 ರಲ್ಲಿ) ಮತ್ತು 62 ಸ್ಥಾನಗಳನ್ನು (2020 ರಲ್ಲಿ) ಪಡೆದುಕೊಂಡಿದೆ ಎಂದು ಹೇಳಿದ ಕೇಜ್ರಿವಾಲ್, ದೆಹಲಿ ಚುನಾವಣೆಯಲ್ಲಿ ಎಎಪಿಯನ್ನು ಸೋಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ, ನನ್ನನ್ನು ಬಂಧಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು."ನಾನು ರಾಜೀನಾಮೆ ನೀಡುತ್ತೇನೆ ಮತ್ತು ನನ್ನ ಸರ್ಕಾರ ಉರುಳುತ್ತದೆ ಎಂದು ಭಾವಿಸಿ ಅವರು ನನ್ನನ್ನು ಬಂಧಿಸಿದರು. ಆದರೆ ಅವರ ಸಂಚು ಯಶಸ್ವಿಯಾಗಲು ನಾನು ಬಿಡುವುದಿಲ್ಲ. ಈ ಸಂಪೂರ್ಣ ಪ್ರಕರಣ(ಅಬಕಾರಿ ಹಗರಣ) ನಕಲಿ ಪ್ರಕರಣವಾಗಿದೆ ಎಂದಿದ್ದಾರೆ.ನಾನೇನಾದರೂ ತಪ್ಪು ಮಾಡಿ ಹಣ ಪಡೆದಿದ್ದರೆ ಒಳಗಿನಿಂದ ತುಂಬಾ ಬಲಹೀನವಾಗಿರುತ್ತಿದ್ದೆ ಮತ್ತು ಬಹುಶಃ ಬಿಜೆಪಿಗೆ ಹೋಗುತ್ತಿದ್ದೆ ಮತ್ತು ನನ್ನ ಪಾಪಗಳೆಲ್ಲವೂ ಕ್ಷಮಿಸಲ್ಪಡುತ್ತಿದ್ದವು ಎಂದು ಕೇಜ್ರಿವಾಲ್ ಹೇಳಿದ್ದಾರೆ.ತಮ್ಮನ್ನು ಬಲವಂತವಾಗಿ ಜೈಲಿನಲ್ಲಿ ಇರಿಸಲಾಗಿದೆ ಎಂದು ಪ್ರತಿಪಾದಿಸಿದ ಕೇಜ್ರಿವಾಲ್, ನಾನು ರಾಜೀನಾಮೆ ನೀಡಿದರೆ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯನ್ನು ಅವರು ಒಂದು ದಿನ ಬಂಧಿಸಿ ರಾಜೀನಾಮೆ ನೀಡುವಂತೆ ಕೇಳುತ್ತಾರೆ. ಅವರು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಸಹ ಬಂಧಿಸಿ ರಾಜೀನಾಮೆ ನೀಡುವಂತೆ ಮಾಡುತ್ತಾರೆ. ಇದು ಪ್ರತಿಪಕ್ಷಗಳ ಮುಖ್ಯಮಂತ್ರಿಗಳ ಬಂಧನಕ್ಕೆ ಬಿಜೆಪಿಗೆ ಮುಕ್ತ ಹಸ್ತ ನೀಡಿದಂತೆ. ಬಿಜೆಪಿ ಚುನಾವಣೆಯಲ್ಲಿ ಸೋತಲ್ಲೆಲ್ಲಾ, ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಬಂಧಿಸಲಾಗುತ್ತದೆ ಮತ್ತು ನಂತರ ಅವರ ಸರ್ಕಾರಗಳನ್ನು ಉರುಳಿಸಲಾಗುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ತುಂಬಾ ಅಪಾಯಕಾರಿ ಎಂದು ಹೇಳಿದರು.