ವಯನಾಡು ಭೂಕುಸಿತ: ಮೂರು ಮೃತದೇಹದ ಭಾಗಗಳು ಪತ್ತೆ, ಇನ್ನೂ 130 ಜನ ನಾಪತ್ತೆ "178 ಶವಗಳನ್ನು ಗುರುತಿಸಲಾಗಿದೆ. 51 ಶವಗಳನ್ನು ಗುರುತಿಸಲಾಗಿಲ್ಲ ಮತ್ತು 130 ಜನರು ಕಾಣೆಯಾಗಿದ್ದಾರೆ. ಶವ ಅಥವಾ ದೇಹದ ಭಾಗಗಳನ್ನು ಪಡೆಯಲು ರಕ್ಷಣಾ ತಂಡ ಪ್ರಯತ್ನ ವಯನಾಡು: ಕೇರಳದ ವಯನಾಡಿನ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಭಾನುವಾರ ರಕ್ಷಣಾ ಸಿಬ್ಬಂದಿ ಮೂರು ಮೃತ ದೇಹದ ಭಾಗಗಳನ್ನು ಹೊರತೆಗೆದಿದ್ದಾರೆ ಎಂದು ಕೇರಳ ಸಚಿವ ಪಿಎ ಮೊಹಮ್ಮದ್ ರಿಯಾಸ್ ಹೇಳಿದ್ದಾರೆ. ಜುಲೈ 30 ರಂದು ಗುಡ್ಡಗಾಡು ಜಿಲ್ಲೆಯಲ್ಲಿ ಸಂಭವಿಸಿದ ವಿನಾಶಕಾರಿ ದುರಂತದ ನಂತರ ಇನ್ನೂ 130 ಜನರು ನಾಪತ್ತೆಯಾಗಿದ್ದಾರೆ ಎಂದು ಅವರು ತಿಳಿಸಿದರು."178 ಶವಗಳನ್ನು ಗುರುತಿಸಲಾಗಿದೆ. 51 ಶವಗಳನ್ನು ಗುರುತಿಸಲಾಗಿಲ್ಲ ಮತ್ತು 130 ಜನರು ಕಾಣೆಯಾಗಿದ್ದಾರೆ. ಶವ ಅಥವಾ ದೇಹದ ಭಾಗಗಳನ್ನು ಪಡೆಯಲು ರಕ್ಷಣಾ ತಂಡವು ಪ್ರಯತ್ನಿಸುತ್ತಿದೆ. ಇಂದು ಮೂರು ದೇಹದ ಭಾಗಗಳನ್ನು ಹೊರತೆಗೆದಿದ್ದೇವೆ. ಮರಣೋತ್ತರ ಪರೀಕ್ಷೆಯ ನಂತರ, ಅವು ಮನುಷ್ಯರಿಗೆ ಸೇರಿದ್ದ ಅಥವಾ ಪ್ರಾಣಿಗಳಿಗೆ ಸೇರಿದ್ದವ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ರಿಯಾಸ್ ಎಎನ್‌ಐಗೆ ತಿಳಿಸಿದರು.ಅಟ್ಟಮಲದಿಂದ ಮೂಳೆ ಸಿಕ್ಕಿದೆ. ಶಿಬಿರದಲ್ಲಿ 18 ತಂಡಗಳೊಂದಿಗೆ ಸಮೀಕ್ಷೆ ನಡೆಸುತ್ತಿದ್ದೇವೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳಲ್ಲದೆ, ವಿವಿಧ ಸೇವಾ ಮತ್ತು ಯುವ ಸಂಘಟನೆಗಳ ಸ್ವಯಂಸೇವಕರು, ಭೂಕುಸಿತದಿಂದ ಬದುಕುಳಿದವರು ಮತ್ತು ಸಂತ್ರಸ್ತರ ಸಂಬಂಧಿಕರು ಇನ್ನೂ ಕಾಣೆಯಾದವರ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿದರು.ಇಂದು ನಡೆದ ಶೋಧ ಕಾರ್ಯದಲ್ಲಿ ಸುಮಾರು ಎರಡು ಸಾವಿರ ಮಂದಿ ಪಾಲ್ಗೊಂಡಿದ್ದರು. ನಾಳೆ ಮತ್ತು ನಾಡಿದು ಚಾಲಿಯಾರ್ ನದಿ ಬಳಿ ಶೋಧ ನಡೆಸಲಾಗುವುದು ಎಂದು ಅವರು ಹೇಳಿದರು.