ಕೇಜ್ರಿವಾಲ್ ಆರೋಗ್ಯ ಕುರಿತು ಅತಿಶಿ ಕಳವಳ ಅರವಿಂದ್ ಕೇಜ್ರಿವಾಲ್ ಅವರಿಗೆ ಏನಾದರೂ ಸಂಭವಿಸಿದರೆ, ದೇಶ ಮಾತ್ರವಲ್ಲ, ದೇವರು ಕೂಡ ಅವರನ್ನು ಕ್ಷಮಿಸುವುದಿಲ್ಲ ಎಂಬುದನ್ನು ಬಿಜೆಪಿ ಅರಿಯಬೇಕು ಎಂದು ಅವರು ವಾಗ್ದಾಳಿ ನಡೆಸಿದರು. ನವದೆಹಲಿ: ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯ ಅಪಾಯದಲ್ಲಿದೆ ಎಂದು ಆಮ್ ಆದ್ಮಿ ಪಕ್ಷ ಭಾನುವಾರ ಆರೋಪಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಯಾಬಿನೆಟ್ ಸಚಿವ ಅತಿಶಿ, ತೀವ್ರ ಮಧುಮೇಹ ಇರುವ ಕೇಜ್ರಿವಾಲ್ ಅವರ ದೇಹದ ಸಕ್ಕರೆ ಮಟ್ಟ ತೀವ್ರ ತರವಾಗಿ ಕಡಿಮೆಯಾಗಿದೆ ಎಂದರು.ಸುಳ್ಳು ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಜೈಲಿಗೆ ಹಾಕಲು ಬಿಜೆಪಿ ಸಂಚು ರೂಪಿಸಿದೆ. ಅವರ ಆರೋಗ್ಯ ಅಪಾಯದಲ್ಲಿದೆ. 8.5 ಕೆಜಿ ತೂಕವನ್ನು ಅವರು ಕಳೆದುಕೊಂಡಿದ್ದು, ಐದು ಬಾರಿ ಅವರ ದೇಹದ ಸಕ್ಕರೆ ಮಟ್ಟ 50ಕ್ಕಿಂತಲೂ ಕಡಿಮೆಯಾಗಿದೆ. ಇದು ವಿಶೇಷವಾಗಿ ಮಧುಮೇಹಿಗಳಿಗೆ ಆತಂಕಕಾರಿ ಪರಿಸ್ಥಿತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಒಂದು ವೇಳೆ ಕೇಜ್ರಿವಾಲ್ ಪಾರ್ಶ್ವವಾಯುವಿಗೆ ಒಳಗಾದರೆ, ಮೆದುಳು ಹಾನಿ, ಶಾಶ್ವತ ಹಾನಿಯಾದರೇ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದ ಅವರು, ಅವರು ಜೈಲಿನಲ್ಲಿರುವುದರಿಂದ ಸರಿಯಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ.ಈ ವಿಷಯದ ಬಗ್ಗೆ ತಮ್ಮ ವಕೀಲರು ಮತ್ತು ವೈದ್ಯರೊಂದಿಗೆ ಸಮಾಲೋಚಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಅರವಿಂದ್ ಕೇಜ್ರಿವಾಲ್ ಅವರಿಗೆ ಏನಾದರೂ ಸಂಭವಿಸಿದರೆ, ದೇಶ ಮಾತ್ರವಲ್ಲ, ದೇವರು ಕೂಡ ಅವರನ್ನು ಕ್ಷಮಿಸುವುದಿಲ್ಲ ಎಂಬುದನ್ನು ಬಿಜೆಪಿ ಅರಿಯಬೇಕು ಎಂದು ಅವರು ವಾಗ್ದಾಳಿ ನಡೆಸಿದರು.