ಮಹಾರಾಷ್ಟ್ರ: ಅರಣ್ಯದಲ್ಲಿ ಕಬ್ಬಿಣದ ಸರಪಳಿಯಿಂದ ಮರಕ್ಕೆ ಕಟ್ಟಿ ಹಾಕಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ! ಮಹಿಳೆ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದು, ಅವರ ವೈದ್ಯಕೀಯ ಪ್ರಿಸ್ಕ್ರಿಪ್ಷನ್‌ಗಳು ಪತ್ತೆಯಾಗಿವೆ. ತಮಿಳುನಾಡು ವಿಳಾಸವಿರುವ ಆಕೆಯ ಆಧಾರ್ ಕಾರ್ಡ್ ಮತ್ತು ಅಮೆರಿಕ ಪಾಸ್‌ಪೋರ್ಟ್‌ನ ನಕಲು ಪ್ರತಿಯನ್ನು ವಶಕ್ಕೆ ಪಡೆದಿದ್ದೇವೆ. ಸಿಂಧುದುರ್ಗ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಅರಣ್ಯದಲ್ಲಿ 50 ವರ್ಷದ ಅನಿವಾಸಿ ಭಾರತೀಯ ಮಹಿಳೆಯೊಬ್ಬರನ್ನು ಕಬ್ಬಿಣದ ಸರಪಳಿಯಿಂದ ಮರಕ್ಕೆ ಕಟ್ಟಿ ಹಾಕಿರುವುದು ಪತ್ತೆಯಾಗಿದೆ. ಆಕೆಯ ಯುಎಸ್ ಪಾಸ್‌ಪೋರ್ಟ್‌ನ ಫೋಟೋಕಾಪಿ ಮತ್ತು ತಮಿಳುನಾಡು ವಿಳಾಸವಿರುವ ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.ಮುಂಬೈನಿಂದ ಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಸೋನುರ್ಲಿ ಗ್ರಾಮದಲ್ಲಿ ಶನಿವಾರ ಸಂಜೆ ಸಂಕಷ್ಟದಲ್ಲಿರುವ ಮಹಿಳೆಯನ್ನು ನೋಡಿದ ಕುರಿಗಾಯಿಯೊಬ್ಬರು ಮಾಹಿತಿ ನೀಡಿದ ನಂತರ ಅಲ್ಲಿಗೆ ಧಾವಿಸಿ,'ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆಕೆಯ ಮಾನಸಿಕ ಮತ್ತು ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ, ಉನ್ನತ ಚಿಕಿತ್ಸೆಗಾಗಿ ಗೋವಾ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.ಮಹಿಳೆ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದು, ಅವರ ವೈದ್ಯಕೀಯ ಪ್ರಿಸ್ಕ್ರಿಪ್ಷನ್‌ಗಳು ಪತ್ತೆಯಾಗಿವೆ. ತಮಿಳುನಾಡು ವಿಳಾಸವಿರುವ ಆಕೆಯ ಆಧಾರ್ ಕಾರ್ಡ್ ಮತ್ತು ಅಮೆರಿಕ ಪಾಸ್‌ಪೋರ್ಟ್‌ನ ನಕಲು ಪ್ರತಿಯನ್ನು ವಶಕ್ಕೆ ಪಡೆದಿದ್ದೇವೆ. ಆದರೆ ವೀಸಾ ಅವಧಿ ಮುಗಿದಿದೆ. ಪ್ರಾಥಮಿಕ ಮಾಹಿತಿಯಂತೆ ಮಹಿಳೆ ಕಳೆದ 10 ವರ್ಷಗಳಿಂದ ಭಾರತದಲ್ಲಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಅವರು ತಿಳಿಸಿದ್ದಾರೆ.ಒಂದೆರಡು ದಿನಗಳಿಂದ ಏನನ್ನೂ ತಿನ್ನದ ಕಾರಣ ಮಹಿಳೆ ಅಸಕ್ತರಾಗಿದ್ದಾರೆ. ಆಕೆಯ ಪತಿ ತಮಿಳುನಾಡಿನಿಂದ ಬಂದಿದ್ದು, ಆಕೆಯನ್ನು ಅಲ್ಲಿ ಕಟ್ಟಿಹಾಕಿ ಪರಾರಿಯಾಗಿರಬಹುದೆಂಬ ಶಂಕೆಯಿದೆ. ತನಿಖೆಯ ಭಾಗವಾಗಿ ಆಕೆಯ ಸಂಬಂಧಿಕರನ್ನು ಪತ್ತೆಹಚ್ಚಲು ತಮಿಳುನಾಡು, ಗೋವಾ ಮತ್ತು ಇತರ ಕೆಲವು ಸ್ಥಳಗಳಿಗೆ ಪೊಲೀಸ್ ತಂಡಗಳು ತೆರಳಿವೆ ಎಂದು ಅಧಿಕಾರಿ ಹೇಳಿದ್ದಾರೆ.