ನಾಳೆ ಆಂಧ್ರ ಪ್ರದೇಶ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಬುಧವಾರ ನಾಲ್ಕನೇ ಬಾರಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಮರಾವತಿ: ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಬುಧವಾರ ನಾಲ್ಕನೇ ಬಾರಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ವಿಜಯವಾಡದ ಹೊರವಲಯದಲ್ಲಿರುವ ಕೆಸರಪಲ್ಲಿಯಲ್ಲಿರುವ ಗನ್ನವರಂ ವಿಮಾನ ನಿಲ್ದಾಣದ ಎದುರಿನ ಮೇಧಾ ಐಟಿ ಪಾರ್ಕ್ ಬಳಿ ನಾಳೆ ಬೆಳಗ್ಗೆ 11.27ಕ್ಕೆ ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸಚಿವರಾದ ಜೆ ಪಿ ನಡ್ಡಾ ಮತ್ತು ಬಂಡಿ ಸಂಜಯ್ ಕುಮಾರ್ ಸೇರಿದಂತೆ ಹಲವಾರು ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.ಇಂದು ರಾತ್ರಿಯೇ ಅಮರಾವತಿಗೆ ಆಗಮಿಸಲಿರುವ ಅಮಿತ್ ಶಾ ಅವರು ನಾಯ್ಡು ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಲಿದ್ದಾರೆ ಎಂದು ಎನ್‌ಡಿಎ ಮೂಲಗಳು ತಿಳಿಸಿವೆ.ಟಿಡಿಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಚಂದ್ರಬಾಬು ನಾಯ್ಡು ಅವರು ಅಮರಾವತಿಯ ರಾಜಭವನದಲ್ಲಿ ರಾಜ್ಯಪಾಲ ಎಸ್ ಅಬ್ದುಲ್ ನಜೀರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ನಂತರ ಸಂಜೆ ಸರ್ಕಾರ ರಚಿಸಲು ನಾಯ್ಡುಗೆ ರಾಜ್ಯಪಾಲರು ಆಹ್ವಾನಿಸಿದ್ದಾರೆ.