ಅಫ್ಗಾನ್‌ ಜೈಲಿನಿಂದ ಹೊರಬಂದ ಖೈದಿಗಳು ಐಸಿಸ್‌, ಅಲ್‌ಖೈದಾ ಉಗ್ರ ಸಂಘಟನೆಗೆ ಸೇರ್ಪಡೆ ತಾಲಿಬಾನ್‌ ಆಡಳಿತದಲ್ಲಿ ಅಫ್ಗಾನ್‌ ಜೈಲಿನಿಂದ ಬಿಡುಗಡೆಗೊಂಡ ಕೈದಿಗಳು ಇಸ್ಲಾಮಿಕ್ ಸ್ಟೇಟ್(ಐಎಸ್‌, ಐಸಿಸ್‌) ಮತ್ತು ಅಲ್-ಖೈದಾ ಭಯೋತ್ಪಾದಕ ಗುಂಪುಗಳನ್ನು ಸೇರಿಕೊಂಡಿದ್ದಾರೆ ಎಂದು ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆಯ ಜಂಟಿ ಸಿಬ್ಬಂದಿ ಮುಖ್ಯಸ್ಥ ಅನಾಟೊಲಿ ಸಿಡೊರೊವ್ ಹೇಳಿದ್ದಾರೆ. ಮಾಸ್ಕೋ: ತಾಲಿಬಾನ್‌ ಆಡಳಿತದಲ್ಲಿ ಅಫ್ಗಾನ್‌ ಜೈಲಿನಿಂದ ಬಿಡುಗಡೆಗೊಂಡ ಕೈದಿಗಳು ಇಸ್ಲಾಮಿಕ್ ಸ್ಟೇಟ್(ಐಎಸ್‌, ಐಸಿಸ್‌) ಮತ್ತು ಅಲ್-ಖೈದಾ ಭಯೋತ್ಪಾದಕ ಗುಂಪುಗಳನ್ನು ಸೇರಿಕೊಂಡಿದ್ದಾರೆ ಎಂದು ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆಯ ಜಂಟಿ ಸಿಬ್ಬಂದಿ ಮುಖ್ಯಸ್ಥ ಅನಾಟೊಲಿ ಸಿಡೊರೊವ್ ಹೇಳಿದ್ದಾರೆ.ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಅಫ್ಘಾನ್ ಕಾರಾಗೃಹಗಳಿಂದ ಬಿಡುಗಡೆಗೊಂಡವರು ಐಸಿಸ್ ಸೇರ್ಪಡೆಗೊಳ್ಳುತ್ತಿರುವುದರ ಜೊತೆಗೆ, ತಾಲಿಬಾನ್‌ ವಿರೋಧಿ ಉಗ್ರರನ್ನು ನೇಮಕ ಮಾಡಿಕೊಳ್ಳುತ್ತಿರುವುದರಿಂದ ಸಂಘಟನೆಗಳು ಬಲಗೊಳ್ಳುತ್ತಿವೆ ಎಂದರು.ತಾಲಿಬಾನ್ ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ 3 ದಶಲಕ್ಷಕ್ಕೂ ಹೆಚ್ಚು ಅಫ್ಘಾನ್ ಜನರು ತಮ್ಮ ದೇಶವನ್ನು ತೊರೆದಿದ್ದು, ಇರಾನ್‌ ಮತ್ತು ಪಾಕಿಸ್ತಾನಕ್ಕೆ ವಲಸೆ ಹೋಗಿದ್ದಾರೆ ಎಂದು ಸಿಡೊರೊವ್ ಮಾಹಿತಿ ನೀಡಿದ್ದಾರೆ.ತಾಲಿಬಾನಿಗಳು ಅಫ್ಘಾನ್ ಜೈಲಿನಲ್ಲಿದ್ದ ಸಾವಿರಾರು ಖೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ್ದರು. ಇದೀಗ ಅವರೆಲ್ಲಾ ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.