ಟ್ರಂಪ್ ಅವಧಿಯ ಹೆಚ್-1ಬಿ ವೀಸಾ ಆಯ್ಕೆ ಪ್ರಕ್ರಿಯೆ ಪ್ರಸ್ತಾವ ವಜಾಗೊಳಿಸಿದ ಯುಎಸ್ ಕೋರ್ಟ್ ಅಮೆರಿಕದ ಹೆಚ್-1 ಬಿ ವೀಸಾ ಆಯ್ಕೆ ಪ್ರಕ್ರಿಯೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅವಧಿಯ ಕಾನೂನು ಪ್ರಸ್ತಾವವನ್ನು ಅಮೆರಿಕದ ಫೆಡರಲ್ ನ್ಯಾಯಾಧೀಶರು ವಜಾಗೊಳಿಸಿದ್ದಾರೆ. ವಾಷಿಂಗ್ ಟನ್: ಅಮೆರಿಕದ ಹೆಚ್-1 ಬಿ ವೀಸಾ ಆಯ್ಕೆ ಪ್ರಕ್ರಿಯೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅವಧಿಯ ಕಾನೂನು ಪ್ರಸ್ತಾವವನ್ನು ಅಮೆರಿಕದ ಫೆಡರಲ್ ನ್ಯಾಯಾಧೀಶರು ವಜಾಗೊಳಿಸಿದ್ದಾರೆ. ಅಮೆರಿಕದ ಈಗಿನ ಹೆಚ್-1 ಬಿ ಲಾಟರಿ ವ್ಯವಸ್ಥೆಯ ಬದಲಿಗೆ ವೇತನ ಮಟ್ಟವನ್ನು ಆಧರಿಸಿ ವೀಸಾ ಆಯ್ಕೆ ಪ್ರಕ್ರಿಯೆಯನ್ನು ಜಾರಿಗೆ ಟ್ರಂಪ್ ಅವಧಿಯ ಕಾನೂನು ಉದ್ದೇಶಿಸಿತ್ತು. ಅಮೆರಿಕದ ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲೆಯ ನ್ಯಾಯಾಧೀಶ ಜೆಫ್ರಿ ಎಸ್ ವೈಟ್, ಈ ಕಾನೂನು ಘೋಷಣೆಯ ಸಂದರ್ಭದಲ್ಲಿ ಆಗಿನ ಹಂಗಾಮಿ ಹೋಮ್ ಲ್ಯಾಂಡ್ ಭದ್ರತೆ ಕಾರ್ಯದರ್ಶಿ (ಸಚಿವ) ಚಾಡ್ ವುಲ್ಫ್ ಕಾನೂನಾತ್ಮಕವಾಗಿ ತಮ್ಮ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರಲಿಲ್ಲ. ಈ ಆಧಾರದಲ್ಲಿ ಟ್ರಂಪ್ ಅವಧಿಯ ಕಾನೂನನ್ನು ವಜಾಗೊಳಿಸುತ್ತಿರುವುದಾಗಿ ಹೇಳಿದ್ದಾರೆ.ಟ್ರಂಪ್ ಅವಧಿಯ ಕಾನೂನನ್ನು ಪ್ರಶ್ನಿಸಿದ್ದ ಪ್ರಕರಣದಲ್ಲಿ ಅಮೆರಿಕದ ಚೇಂಬರ್ ಆಫ್ ಕಾಮರ್ಸ್ ನ ನಿರ್ಣಯವನ್ನು ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಹೆಚ್-1 ಬಿ ವೀಸಾ ವಲಸೆಯೇತರ ವೀಸಾ ಆಗಿದ್ದು, ವಿದೇಶಿ ನೌಕರನನ್ನು ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಿಗೆ ನೇಮಕ ಮಾಡಿಕೊಳ್ಳುವುದಕ್ಕೆ ಅಮೆರಿಕ ಸಂಸ್ಥೆಗಳಿಗೆ ಅನುವು ಮಾಡಿಕೊಡುವ ವೀಸಾ ಆಗಿದೆ.ಭಾರತ- ಚೀನಾದಂತಹ ರಾಷ್ಟ್ರಗಳಿಂದ ಸಾವಿರಾರು ನೌಕರರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಈ ವೀಸಾದ ಮೇಲೆ ಅನೇಕ ಅಮೆರಿಕದ ಸಂಸ್ಥೆಗಳು ಅವಲಂಬಿತವಾಗಿವೆ.ವಾರ್ಷಿಕವಾಗಿ 65,000 ಹೆಚ್-1 ಬಿ ವೀಸಾಗಳಿಗೆ ಅಮೆರಿಕ ಮಿತಿ ಹಾಕಿಕೊಂಡಿದ್ದು, ಅಮೆರಿಕದಲ್ಲೇ ಉನ್ನತ ಪದವಿಯನ್ನು ಪಡೆದ ವಿದೇಶಿಗರಿಗಾಗಿ ಹೆಚ್ಚುವರಿ 20,000 ಹೆಚ್-1 ಬಿ ವೀಸಾಗಳನ್ನು ಮೀಸಲಿಟ್ಟಿದೆ.ಹೆಚ್-1 ಬಿ ವೀಸಾ ಪಡೆಯುವುದಕ್ಕೆ ಅರ್ಜಿಯನ್ನು ಪರಿಗಣಿಸಲು ಈಗ ಮೊದಲು ಬಂದವರಿಗೆ ಮೊದಲ ಆದ್ಯತೆ ಹಾಗೂ ಲಾಟರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ಅಮೆರಿಕದ ಪೌರತ್ವ ಹಾಗೂ ವಲಸೆ ಸೇವೆಗಳ ಇಲಾಖೆ (ಯುಎಸ್ ಸಿಐಎಸ್) ಹೆಚ್-1 ಬಿ ವೀಸಾ ಅರ್ಜಿಗಳನ್ನು ಆಯ್ಕೆ ಮಾಡಲು ಸಾಂಪ್ರದಾಯಿಕ ಲಾಟರಿ ವ್ಯವಸ್ಥೆಯನ್ನು ತೆಗೆದುಹಾಕುತ್ತಿರುವುದಾಗಿ ಘೋಷಿಸಿತ್ತು.ಹೊಸ ಆದೇಶದಲ್ಲಿ ಅಮೆರಿಕದ ನೌಕರರ ಹಿತಾಸಕ್ತಿಯನ್ನು ಕಾಪಾಡಲು ವೇತನ ಆಧಾರದಲ್ಲಿ ಹೆಚ್-1 ಬಿ ವೀಸಾ ಆಯ್ಕೆ ಪ್ರಕ್ರಿಯೆ ಜಾರಿಗೊಳಿಸುವುದಾಗಿ ತಿಳಿಸಿತ್ತು.