ಪಾಕಿಸ್ತಾನ: ಬಲೂಚಿಸ್ತಾನದಲ್ಲಿ ಕಂದಕಕ್ಕೆ ಬಸ್ ಉರುಳಿ 29 ಮಂದಿ ದಾರುಣ ಸಾವು 70 ಮಂದಿ ಇದ್ದ ಬಸ್, ಇರಾನ್‌ನಿಂದ ಯಾತ್ರಾರ್ಥಿಗಳನ್ನು ಪಂಜಾಬ್ ಪ್ರಾಂತ್ಯಕ್ಕೆ ಕರೆತರುತ್ತಿತ್ತು ಎಂದು ಪತ್ರಿಕೆ ವರದಿ ಮಾಡಿದೆ. ಲಾಹೋರ್: ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 29 ಮಂದಿ ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನಡೆದಿದೆ.30 ಮಂದಿ ಯಾತ್ರಾರ್ಥಿಗಳನ್ನು ಪಂಜಾಬ್ ಪ್ರಾಂತ್ಯಕ್ಕೆ ಕರೆತರುತ್ತಿತ್ತು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಸಿಂಧ್ ಪ್ರಾಂತ್ಯದ ಕರಾಚಿಯಿಂದ ಬಲೂಚಿಸ್ತಾನ ಪ್ರಾಂತ್ಯದ ಗ್ವಾದರ್‌ವರೆಗೆ ಪಾಕಿಸ್ತಾನದ ಅರಬ್ಬಿ ಸಮುದ್ರದ ಕರಾವಳಿಯುದ್ದಕ್ಕೂ ವಿಸ್ತರಿಸಿರುವ 653 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯಾದ ಮಕ್ರಾನ್ ಕರಾವಳಿ ಹೆದ್ದಾರಿಯ ಪಾನಾ ಸೇತುವೆ ಬಳಿ ಅಪಘಾತ ಸಂಭವಿಸಿದೆ.ಬಹುತೇಕ ಪ್ರಯಾಣಿಕರು ಲಾಹೋರ್ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ರಕ್ಷಣಾ ಕಾರ್ಯಾಚರಣೆ ತಂಡ ತಿಳಿಸಿದೆ. ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮಾರ್ಯಮ್ ನವಾಜ್ ಷರೀಫ್ ಘಟನೆ ಬಗ್ಗೆ ತೀವ್ರ ದೂಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ಧಾರೆ.