"ಇದು ಯುದ್ಧದ ಯುಗವಲ್ಲ": ಪುಟಿನ್ ಗೆ ಪ್ರಧಾನಿ ಮೋದಿಯ ಸಲಹೆ ಜಿ-20 ಶೃಂಗಸಭೆಯಲ್ಲಿ ಸದ್ದು! ರಷ್ಯಾ-ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗಾಣಿಸಲು ರಷ್ಯಾ ಅಧ್ಯಕ್ಷ ಪುಟಿನ್ ಗೆ ಸಲಹೆ ನೀಡಿದ್ದಾಗ ಪ್ರಧಾನಿ ಮೋದಿ ಹೇಳಿದ್ದ ಮಾತುಗಳು ಈಗ ಬಾಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲೂ ಸದ್ದು ಮಾಡಿದೆ. ಬಾಲಿ: ರಷ್ಯಾ-ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗಾಣಿಸಲು ರಷ್ಯಾ ಅಧ್ಯಕ್ಷ ಪುಟಿನ್ ಗೆ ಸಲಹೆ ನೀಡಿದ್ದಾಗ ಪ್ರಧಾನಿ ಮೋದಿ ಹೇಳಿದ್ದ ಮಾತುಗಳು ಈಗ ಬಾಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲೂ ಸದ್ದು ಮಾಡಿದ್ದು, ಸದಸ್ಯ ರಾಷ್ಟ್ರಗಳು ರಷ್ಯಾಗೆ ನೀಡುವ ಸಲಹೆ, ಎಚ್ಚರಿಕೆಗಳಲ್ಲಿ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಉಲ್ಲೇಖಿಸಲು ನಿರ್ಧರಿಸಿವೆ.ಇದು ಯುದ್ಧದ ಕಾಲವಲ್ಲ ಎಂದು ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷರಿಗೆ ಕಿವಿಮಾತು ಹೇಳಿದ್ದು ಜಿ-20 ಯ ಅಧಿಕೃತ ಹೇಳಿಕೆಗಳ ದಾಖಲೆಗೆ ಸೇರ್ಪಡೆಯಾಗಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಪ್ರಕಟಿಸಿದೆ.ಜಾಗತಿಕ ನಾಯಕರು ಪ್ರಧಾನಿ ಅವರ ಈ ಕಾಲ ಯುದ್ಧದ ಕಾಲವಲ್ಲ ಎಂಬ ಹೇಳಿಕೆಯನ್ನು ಜಿ-20 ಶೃಂಗಸಭೆಯಲ್ಲಿ ಪುನರುಚ್ಛರಿಸಲಿದ್ದು, ಕರಡು ದಾಖಲೆಯಲ್ಲಿ ಇದು ಉಲ್ಲೇಖವಾಗಿದೆ. ಇದಕ್ಕೆ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ವಿರೋಧಿಸಿರುವ ಎಲ್ಲಾ ರಾಯಭಾರಿಗಳೂ ಒಪ್ಪಿಗೆ ಸೂಚಿಸಿದ್ದಾರೆ.ಈ ಬಗ್ಗೆ ಮಾಹಿತಿಯುಳ್ಳ ಇಬ್ಬರು ಅಧಿಕಾರಿಗಳ ಪ್ರಕಾರ, ರಷ್ಯಾ ಆಕ್ರಮಣವನ್ನು ತೀವ್ರವಾಗಿ ಟೀಕಿಸುತ್ತಿದ್ದ ಸದಸ್ಯ ರಾಷ್ಟ್ರಗಳ ನಡುವೆ, ರಷ್ಯಾವನ್ನು ಟೀಕಿಸುವ ಮಾತು, ಶಬ್ದಗಳ ಬಗ್ಗೆ ಒಮ್ಮತ ಮೂಡುವುದಕ್ಕೆ ಭಾರತೀಯ ನಿಯೋಗ ಮಹತ್ವದ ಪಾತ್ರ ವಹಿಸಿತ್ತು.ಇದನ್ನೂ ಓದಿ: ಭಾರತ, ಇಂಡೋನೇಷ್ಯಾ ಶ್ರೀಮಂತ ಪರಂಪರೆ ಹಂಚಿಕೊಂಡಿವೆ; ಬಾಲಿಯಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಫೈನಾನ್ಷಿಯಲ್ ಟೈಮ್ಸ್ ಕರಡು ಹೇಳಿಕೆಯನ್ನು ನೋಡಿದ್ದು, ಜಿ-20 ಅಧಿಕೃತ ಹೇಳಿಕೆಯ ಕರಡು ಪ್ರತಿ ಹೀಗಿದೆ "ಬಹುತೇಕ ಸದಸ್ಯ ರಾಷ್ಟ್ರಗಳು ಉಕ್ರೇನ್ ಮೇಲಿನ ಯುದ್ಧವನ್ನು ಖಂಡಿಸಿದ್ದು, ಮನುಷ್ಯರು ಅತೀವ ನೋವು ಎದುರಿಸುವಂತಾಗಿದೆ. ಈ ನಡುವೆ ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಬೆದರಿಕೆ ಸ್ವೀಕಾರಾರ್ಹವಲ್ಲ, ಸಂಘರ್ಷಗಳ ಶಾಂತಿಯುತ ಪರಿಹಾರ, ಬಿಕ್ಕಟ್ಟುಗಳನ್ನು ಪರಿಹರಿಸಲು ಪ್ರಯತ್ನಗಳು, ರಾಜತಾಂತ್ರಿಕತೆ ಮತ್ತು ಸಂಭಾಷಣೆ ಬಹುಮುಖ್ಯವಾದದ್ದು, "ಇಂದಿನ ಯುಗ ಯುದ್ಧದ್ದಾಗಿರಬಾರದು".ಈ ಕರಡು ಹೇಳಿಕೆಗೆ ಎಲ್ಲಾ ದೇಶಗಳ ರಾಜತಾಂತ್ರಿಕ ಅಧಿಕಾರಿಗಳೂ ಒಪ್ಪಿಗೆ ನೀಡಿದ್ದು, ಜಿ-20 ನಾಯಕರಿಂದ ಇನ್ನಷ್ಟೇ ಸಹಿ ಆಗಬೇಕಿದೆ.