ಟೊಮೇಟೊ ದರ ಏರಿಕೆ ಪರಿಣಾಮ: ವೆಜ್ ಥಾಲಿಗಳ ಬೆಲೆ ಶೇ.34 ರಷ್ಟು ಏರಿಕೆ! ಟೊಮೇಟೋ ದರ ಏರಿಕೆಯ ಪರಿಣಾಮ ಸಸ್ಯಹಾರಿ ಥಾಲಿಗಳ ಬೆಲೆಯೂ ಏರಿಕೆಯಾಗಿದೆ. ನವದೆಹಲಿ: ಟೊಮೇಟೋ ದರ ಏರಿಕೆಯ ಪರಿಣಾಮ ಸಸ್ಯಹಾರಿ ಥಾಲಿಗಳ ಬೆಲೆಯೂ ಏರಿಕೆಯಾಗಿದೆ. ಜೂನ್ ಗೆ ಹೋಲಿಕೆ ಮಾಡಿದರೆ ಜುಲೈ ತಿಂಗಳಲ್ಲಿ ಸಸ್ಯಹಾರಿ ಥಾಲಿಗಳ ಬೆಲೆ ಶೇ.34 ರಷ್ಟು ಏರಿಕೆಯಾಗಿದೆ ಎಂದು ರೇಟಿಂಗ್ ಏಜೆನ್ಸಿ ತನ್ನ ವರದಿಯಲ್ಲಿ ತಿಳಿಸಿದೆ. ಇದಕ್ಕೆ ಹೋಲಿಕೆ ಮಾಡಿದರೆ ಸಸ್ಯಹಾರಿಯೇತರ ಥಾಲಿಯ ಮೇಲೆ ಟೊಮೇಟೋ ಬೆಲೆ ಏರಿಕೆ ಕಡಿಮೆ ಪ್ರಮಾಣ ಉಂಟುಮಾಡಿದ್ದು, ನಾನ್ ವೆಜ್ ಥಾಲಿ ಬೆಲೆಯಲ್ಲಿ ಶೇ.13 ರಷ್ಟು ಏರಿಕೆ ಕಂಡಿದೆ ಎಂದು ಕ್ರಿಸಿಲ್‌ನ 'ರೋಟಿ ರೈಸ್ ದರ' ವರದಿ ತಿಳಿಸಿದೆ. ಥಾಲಿಗಳಲ್ಲಿನ ಹಣದುಬ್ಬರ, ಟೊಮೇಟೋ ದರ ಶೇ.233 ರಷ್ಟು ಏರಿಕೆಯಾಗಿದ್ದರ ಪರಿಣಾಮವಾಗಿದೆ. ಜೂನ್ ನಲ್ಲಿ ಪ್ರತಿ ಕೆ.ಜಿ ಟೊಮೇಟೋ ದರ 33 ರೂಪಾಯಿಗಳಿದ್ದರೆ ಜುಲೈ ನಲ್ಲಿ 110 ರೂಪಾಯಿಗಳಿಗೆ ಏರಿಕೆಯಾಗಿತ್ತು.ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾರತದಲ್ಲಿ ಚಾಲ್ತಿಯಲ್ಲಿರುವ ಬೆಲೆಗಳ ಆಧಾರದ ಮೇಲೆ ಮನೆಯಲ್ಲಿ ಥಾಲಿಯನ್ನು ತಯಾರಿಸಲು ಸರಾಸರಿ ವೆಚ್ಚವನ್ನು ಲೆಕ್ಕಹಾಕಲಾಗುತ್ತದೆ ಎಂದು ಕ್ರಿಸಿಲ್ ಹೇಳಿದೆ.ಇದನ್ನೂ ಓದಿ: ಚಿತ್ತೂರು: ಟೊಮೆಟೊ ಮಾರಾಟದಿಂದ ಕೋಟ್ಯಾಧಿಪತಿಯಾದ ರೈತ!ಈರುಳ್ಳಿ ಮತ್ತು ಆಲೂಗೆಡ್ಡೆ ಬೆಲೆಗಳು ಕ್ರಮವಾಗಿ ಶೇ.16 ಮತ್ತು ಶೇ.9ರಷ್ಟು ಏರಿಕೆಯಾಗಿದ್ದು, ಇದು ವೆಚ್ಚದ ಹೆಚ್ಚಳಕ್ಕೆ ಮತ್ತಷ್ಟು ಕೊಡುಗೆ ನೀಡಿದೆ ಎಂದು ವರದಿ ತಿಳಿಸಿದೆ.ಇದಷ್ಟೇ ಅಲ್ಲದೇ ಜೂನ್ ಗೆ ಹೋಲಿಕೆ ಮಾಡಿದರೆ ಜುಲೈ ನಲ್ಲಿ ಮೆಣಸಿನಕಾಯಿ ಬೆಲೆ ಶೇ.69 ರಷ್ಟು ಏರಿಕೆಯಾಗಿದೆ. ಇನ್ನು ನಾನ್ ವೆಜ್ ಥಾಲಿಯಲ್ಲಿ, ಬ್ರಾಯ್ಲರ್ ಕೋಳಿ ಬೆಲೆ ಇಳಿಕೆಯಾಗಿರುವುದರಿಂದ ಹೆಚ್ಚಿನ ಬೆಲೆ ಏರಿಕೆ ಕಂಡುಬಂದಿಲ್ಲ ಎಂದು ವರದಿ ಹೇಳಿದೆ.