2019-20ರಲ್ಲಿ ಭಾರತ-ಪಾಕ್ ನಡುವಿನ ವಾಣಿಜ್ಯ ವಹಿವಾಟು ಗಣನೀಯ ಕುಸಿತ ಭಾರತ-ಪಾಕಿಸ್ತಾನ ನಡುವಿನ ಹಗೆತನದಿಂದ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಗಣನೀಯ ಕುಸಿತವಾಗಿದೆ. ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ನಡುವಿನ ಹಗೆತನದಿಂದ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಗಣನೀಯ ಕುಸಿತವಾಗಿದೆ.2019-20ರ ಮೊದಲಾರ್ಧ ಅವಧಿಯಲ್ಲಿ ಪಾಕಿಸ್ತಾನ, ಭಾರತಕ್ಕೆ ಕೇವಲ 16.8 ದಶಲಕ್ಷ ಡಾಲರ್ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದೆ. 2018-19ರ ಮೊದಲಾರ್ಧದಲ್ಲಿ ನಡೆದಿದ್ದ 213 ದಶಲಕ್ಷ ಡಾಲರ್ ವಹಿವಾಟಿಗೆ ಹೋಲಿಸಿದರೆ ಇದು ಗಮನಾರ್ಹ ಕುಸಿತವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಪ್ರಕಟಿಸಿರುವ ಮಾಹಿತಿಯಿಂದ ತಿಳಿದುಬಂದಿದೆ.ಡಾನ್ ಪತ್ರಿಕೆಯ ವರದಿ ಪ್ರಕಾರ, ಭಾರತದಿಂದ ಪಾಕಿಸ್ತಾನಕ್ಕೆ ಆಮದು ಪ್ರಮಾಣ ಸಹ ತೀವ್ರ ಕುಸಿತವಾಗಿದೆ. 2019-20ರ ಮೊದಲಾರ್ಧದಲ್ಲಿ ಕೇವಲ 286.6 ದಶಲಕ್ಷ ಡಾಲರ್ ವಹಿವಾಟು ನಡೆದಿದೆ. ಆದರೆ, 2018-19ರಲ್ಲಿ ಇದೇ ಅವಧಿಯಲ್ಲಿ 865 ದಶಲಕ್ಷ ಡಾಲರ್ ವಹಿವಾಟು ನಡೆದಿತ್ತು.ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ಉಗ್ರರ ದಾಳಿ ಮತ್ತು ಆ ನಂತರ ಭಯೋತ್ಪಾದಕ ಶಿಬಿರಗಳಿದ್ದ ಬಾಲಕೋಟ್‍ನಲ್ಲಿ ಭಾರತ ವೈಮಾನಿಕ ದಾಳಿ ನಡೆಸಿದ ನಂತರ ಉಭಯ ದೇಶಗಳ ನಡುವಿನ ಬಾಂಧವ್ಯ ಹಳಸಿತ್ತು. ಕಳೆದ ಆಗಸ್ಟ್ ನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಪಾಕಿಸ್ತಾನ, ಭಾರತದ ವಿರುದ್ಧ ರಾಜತಾಂತ್ರಿಕ ದಾಳಿಯನ್ನು ಆರಂಭಿಸಿತ್ತು.