ಜುಲೈ 24 ರಂದು ನಿರ್ಮಲಾ ಸೀತಾರಾಮನ್ ಪೂರ್ಣ ಬಜೆಟ್ ಮಂಡನೆ ಸಾಧ್ಯತೆ ಜುಲೈ 22ರಂದು ಮುಂಗಾರು ಅಧಿವೇಶನ ಆರಂಭವಾಗಲಿದೆ. ಜುಲೈ 23 ರಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸಬಹುದು ಮತ್ತು ನಿರ್ಮಲಾ ಸೀತಾರಾಮನ್ ಅವರು ಜುಲೈ 24 ರಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 24 ರಂದು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಡಿಸಬಹುದು ಎಂದು ವರದಿ ತಿಳಿಸಿದೆ.ಜುಲೈ 22ರಂದು ಮುಂಗಾರು ಅಧಿವೇಶನ ಆರಂಭವಾಗಲಿದೆ. ಜುಲೈ 23 ರಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸಬಹುದು ಮತ್ತು ನಿರ್ಮಲಾ ಸೀತಾರಾಮನ್ ಅವರು ಜುಲೈ 24 ರಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡಿಸುವ ಸಾಧ್ಯತೆ ಇದೆ ಎಂದು ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.ಆದಾಗ್ಯೂ, ಎರಡು ದಿನಾಂಕಗಳ ಕುರಿತು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಮತ್ತು ಶೀಘ್ರದಲ್ಲೇ ಬಜೆಟ್ ಮಂಡಿಸುವ ದಿನಾಂಕ ಪ್ರಕಟಿಸುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.ವಾಡಿಕೆ ಪ್ರಕಾರ ಸಂಸತ್ತಿನ ಎರಡು ಅಧಿವೇಶನಗಳ ನಡುವೆ 15 ದಿನಗಳ ಅಂತರ ಇರಬೇಕು. ಜುಲೈ 2 ರಂದು 18ನೇ ಲೋಕಸಭೆಯ ಚೊಚ್ಚಲ ಅಧಿವೇಶನ ಮುಕ್ತಾಯಗೊಂಡಿದೆ. ಮುಂದಿನ ಅಧಿವೇಶನವು ಜುಲೈ 18 ರಿಂದ ಜುಲೈ 22 ರ ನಡುವೆ ಪ್ರಾರಂಭವಾಗಬೇಕಿತ್ತು. ಆದರೆ, ಈ ಬಾರಿ ಅಧಿವೇಶನ ತುಸು ವಿಳಂಬವಾಗಿ ಶುರುವಾಗಬಹುದು. ಜುಲೈ 22ಕ್ಕೆ ಅಧಿವೇಶನ ಆರಂಭವಾಗಿ ಜುಲೈ 24, ಬುಧವಾರದಂದು ಬಜೆಟ್ ಮಂಡನೆ ಆಗಬಹುದು ಎಂದು ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.ಸಂಸತ್ತಿನಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಬಾರಿಯ ಬಜೆಟ್ನಲ್ಲಿ ಬಡವರು, ಯುವಜನರು, ಮಹಿಳೆಯರು, ರೈತರಿಗೆ ಆದ್ಯತೆ ಸಿಗಲಿದೆ. ದೂರಗಾಮಿ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳು ಅನಾವರಣಗೊಳ್ಳಲಿವೆ ಎಂದು ಹೇಳಿದ್ದರು.