ಆರ್ಥಿಕತೆ ಕುರಿತು 50 ಉನ್ನತ ಅಧಿಕಾರಿಗಳೊಂದಿಗೆ ಮೋದಿ ಸಭೆ ಪ್ರಧಾನಿ ನರೇಂದ್ರ ಮೋದಿ ಆರ್ಥಿಕತೆಗೆ ಸಂಬಂಧಿಸಿದಂತೆ 50 ಉನ್ನತ ಅಧಿಕಾರಿಗಳೊಂದಿಗೆ ಮೋದಿ ಸಭೆ ನಡೆಸಲಿದ್ದಾರೆ. ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆರ್ಥಿಕತೆಗೆ ಸಂಬಂಧಿಸಿದಂತೆ 50 ಉನ್ನತ ಅಧಿಕಾರಿಗಳೊಂದಿಗೆ ಮೋದಿ ಸಭೆ ನಡೆಸಲಿದ್ದಾರೆ. ಹಣಕಾಸು, ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ಜು.16 ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗಿಯಾಗಲಿದ್ದು, ಆರ್ಥಿಕ ಸ್ಥಿತಿಗತಿಗಳು ಹಾಗೂ ಅದರ ಚೇತರಿಕೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಪ್ರಸ್ತುತಿ ನೀಡಿ ವಿವರಿಸಲಿದ್ದಾರೆ. ಕೋವಿಡ್-19 ದೇಶದ ಆರ್ಥಿಕತೆಯ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ಈ ಸಭೆಯಲ್ಲಿ ವಿಶ್ಲೇಷಣೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೊರೋನಾದ ಪರಿಣಾಮವಾಗಿ ಇತ್ತೀಚಿನ ತ್ರೈಮಾಸಿಕಗಳಲ್ಲಿ ಕುಸಿಯುತ್ತಿರುವ ಗ್ರಾಹಕ ಬೇಡಿಕೆಯ ಪರಿಣಾಮವಾಗಿ ಆರ್ಥಿಕತೆ ಸಹ ಕುಸಿತ ಕಾಣುತ್ತಿದೆ. ಈ ಪರಿಸ್ಥಿತಿಯ ಸುಧಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಗಮನ ಕೇಂದ್ರೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಒಂದುವರೆ ಗಂಟೆ ನಡೆಯಲಿರುವ ಸಭೆಯಲ್ಲಿ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳು ಪ್ರಧಾನಿಗಳಿಗೆ ವಿವರಣೆ ನೀಡಿಲಿದ್ದಾರೆ. 50 ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ಸಲಹೆಗಾರರ ಪರಿಷತ್ , ಮುಖ್ಯ ಆರ್ಥಿಕ ಸಲಹೆಗಾರರು ನೀತಿ ಆಯೋಗದ ಸಲಹೆಗಾರರೊಂದಿಗೆ ಪ್ರತ್ಯೇಕವಾಗಿ ಮೋದಿ ಮೂರು ಸಭೆಗಳನ್ನು ನಡೆಸಿದ್ದರು. ಕೊರೋನಾ ಬಿಕ್ಕಟ್ಟನ್ನು ನಿರ್ವಹಿಸುವುದಕ್ಕೆ ಕೇಂದ್ರ ಸರ್ಕಾರ 20.97 ಲಕ್ಷ ಕೋಟಿ ರೂಪಾಯಿಗಳ ವಿಶ್ವದ ಅತಿ ದೊಡ್ಡ ಪ್ಯಾಕೇಜ್ ನ್ನು ಘೋಷಿಸಿದ್ದರು.