ಗುಡಿಸಲಿನಲ್ಲಿ ಮಲಗಿದ್ದ ಎರಡು ಮಕ್ಕಳ ಕಳ್ಳತನ
ಹಾಸನ, ಮಾ.28-ಗುಡಿಸಲಿನಲ್ಲಿ ಮಲಗಿದ್ದ ನಾಲ್ಕು ವರ್ಷದ ಗಂಡು ಮಗು ಹಾಗೂ 14 ತಿಂಗಳ ಹೆಣ್ಣು ಮಗುವನ್ನು ಕಿಡಿಗೇಡಿಗಳು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಮಳಲಿ ಗ್ರಾಮದಲ್ಲಿ ನಡೆದಿದೆ.
ಸಂಜು ಮತ್ತು ರೋಹಿತ್ ದಂಪತಿಯ 4 ವರ್ಷದ ಪುತ್ರ ಹಾಗೂ 14 ತಿಂಗಳ ಕೀರ್ತಿ ಎಂಬ ಹೆಣ್ಣು ಮಗು ಕಳುವಾಗಿದೆ.ಮೂಲತಃ ಮಧ್ಯಪ್ರದೇಶ ರಾಜ್ಯದ ಸತ್ಮ ಜಿಲ್ಲೆ, ವೀರ್‍ಸಿಂಗ್‍ಪುರ್ ತಾಲ್ಲೂಕಿನ ದಂಪತಿ ಕಳೆದ ಮೂರು ತಿಂಗಳ ಹಿಂದೆ ಇಟ್ಟಿಗೆ ಕೆಲಸಕ್ಕಾಗಿ ಬಂದಿದ್ದರು.
ಕೆಲಸ ಮುಗಿಸಿ ಮನೆಯಲ್ಲಿ ಪುಟ್ಟ ಕಂದಮ್ಮ ಹಾಗೂ ನಾಲ್ಕು ವರ್ಷದ ಮಗನನ್ನು ಮಲಗಿಸಿ ಸ್ನಾನಕ್ಕೆ ನದಿಗೆ ತೆರಳಿ 20 ನಿಮಿಷದ ಬಳಿಕ ಮನೆಗೆ ವಾಪಸಾದಾಗ ಎರಡೂ ಮಕ್ಕಳು ಇರಲಿಲ್ಲ.
ತಕ್ಷಣ ದಂಪತಿ ಅಕ್ಕಪಕ್ಕದವರನ್ನು ವಿಚಾರಿಸಿದರೂ ಮಕ್ಕಳ ಸುಳಿವು ಸಿಗಲಿಲ್ಲ. ನಂತರ ಪೊಲೀಸ್ ಠಾಣೆಗೆ ತೆರಳಿ ಮಕ್ಕಳು ಕಳುವಾಗಿರುವ ಬಗ್ಗೆ ದಂಪತಿ ದೂರು ನೀಡಿದ್ದಾರೆ. ಸಕಲೇಶಪುರ ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ದಂಪತಿ ವಾಸವಿದ್ದ ಗುಡಿಸಲಿನ ಸುತ್ತಮುತ್ತಲ ರಸ್ತೆಗಳಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ.