ನಾಲ್ಕನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ
ಮೈಸೂರು,ಜೂ.22-ಟೆಸ್ಟ್‌ನಲ್ಲಿ ಕಡಿಮೆ ಅಂಕ ಪಡೆದಿದ್ದಾಳೆಂದು ಕಾಲೇಜು ಮುಖ್ಯಸ್ಥರು ಪೋಷಕರನ್ನು ಕರೆಸಿ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ನಾಲ್ಕನೇ ಮಹಡಿಯಿಂದ ಜಿಗಿದು ಆತಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮಂಡಿ ಪೊಲೀಸ್‌‍ ಠಾಣಾ ವ್ಯಾಪ್ತಿಯ ಫಾರೂಕಿಯಾ ಡೆಂಟಲ್‌ ಕಾಲೇಜಿನಲ್ಲಿ ನಡೆದಿದೆ.
ಲಷ್ಕರ್‌ ಮೊಹಲ್ಲಾ ವಾಸಿ ಮೆಹಕ್‌ (19) ಆತಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.ಫಾರೂಕಿಯಾ ಡೆಂಟಲ್‌ ಕಾಲೇಜಿನಲ್ಲಿ ಲಾ ಟೆಕ್ನೀಷಿಯನ್‌ ಕೋರ್ಸ್‌ ಓದುತ್ತಿದ್ದು, ಇತ್ತೀಚೆಗೆ ನಡೆದ ಟೆಸ್ಟ್‌ನಲ್ಲಿ ಕಡಿಮೆ ಅಂಕ ಪಡೆದಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾಲೇಜು ಮುಖ್ಯಸ್ಥರು ವಿದ್ಯಾರ್ಥಿನಿಯ ಪೋಷಕರನ್ನು ಕರೆಸಿ ಓದಿನ ಕಡೆ ಗಮನ ಹರಿಸುವಂತೆ ತಿಳಿಹೇಳಿ ಎಂದು ತಿಳಿಸಿದ್ದಾರೆ.
ನಾನು ಸರಿಯಾಗಿ ಓದಿದ್ದರೂ ದೂರು ನೀಡಿದ್ದಾರೆಂದು ಬೇಸತ್ತು ಪೋಷಕರ ಮುಂದೆಯೇ ಕಾಲೇಜಿನ ನಾಲ್ಕನೇ ಅಂತಸ್ತಿನಿಂದ ಕೆಳಗೆ ಜಿಗಿದಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಸಂಬಂಧ ಮಂಡಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.