ಬೆಂಗಳೂರು : ನಡುರಸ್ತೆಯಲ್ಲೇ ಯುವಕನ ಬೆತ್ತಲೆಗೊಳಿಸಿ ಹಲ್ಲೆ ಮಾಡಿ ಪರಾರಿಯಾದ ರೌಡಿ
              
ಬೆಂಗಳೂರು, ಸೆ.16-ನಡುರಸ್ತೆಯಲ್ಲೇ ಯುವಕನೊಬ್ಬನ ಬೆತ್ತಲೆಗೊಳಿಸಿ ಹಲ್ಲೆ ಮಾಡಿ ಅಟ್ಟಹಾಸ ಮೆರೆದು ಪರಾರಿಯಾಗಿರುವ ರೌಡಿ ಪವನ್‌ ಅಲಿಯಾಸ್‌‍ ಕಡುಬುಗಾಗಿ ಪಶ್ಚಿಮ ವಿಭಾಗದ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ರಾಜಗೋಪಾಲನಗರ ಠಾಣೆಯ ರೌಡಿಶೀಟರ್‌ ಪವನ್‌, ಕೆಲವು ದಿನಗಳ ಹಿಂದೆ ಸುಂಕದಕಟ್ಟೆಯ ಬಳಿ ಯುವಕನೊಬ್ಬನಿಗೆ ಬೆದರಿಸಿ ಬಟ್ಟೆ ಬಿಚ್ಚಿಸಿ ಬೆತ್ತಲೆಗೊಳಿಸಿ ರಕ್ತ ಬರುವಂತೆ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾನೆ.
ಆ ಯುವಕ ಪ್ರಾಣ ಉಳಿಸಿಕೊಳ್ಳಲು ಸ್ಥಳದಿಂದ ಓಡಿದ್ದಾನೆ. ಈ ಬಗ್ಗೆ ವಿಡಿಯೋ ವೈರಲ್ಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಿನ್ನೆ ಈ ರೌಡಿ ಪವನ್‌ ಸುಂಕದಕಟ್ಟೆ ಬಳಿ ವಿಶ್ವಾಸ್‌‍ ಎಂಬ ಯುವಕನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಶ್ಚಿಮ ವಿಭಾಗದ ಪೊಲೀಸರು ರೌಡಿ ಪವನ್‌ ಬಂಧನಕ್ಕಾಗಿ ವ್ಯಾಪಕ ಶೋಧ ನಡೆಸುತ್ತಿದ್ದಾರೆ.