ಹುಡುಗಿ ವಿಷಯಕ್ಕೆ ಸ್ನೇಹಿತರ ನಡುವೆ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ
        ' 
ಬೆಂಗಳೂರು,ಸೆ.21– ಹುಡುಗಿ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ಜಗಳ ನಡೆದು ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಂಜಯ ನಗರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.ಗೆದ್ದಲಹಳ್ಳಿಯಲ್ಲಿ ವಾಸವಾಗಿದ್ದ ವರುಣ್‌ ಕೋಟ್ಯಾನ್‌ (24) ಕೊಲೆಯಾದ ಯುವಕ.
ಬಾಗಲೂರಿನ ಕಂಪನಿಯೊಂದರಲ್ಲಿ ಸೇಫ್ಟಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ವರುಣ್‌ ಗೆದ್ದಲಹಳ್ಳಿಯಲ್ಲಿ ಮನೆ ಮಾಡಿಕೊಂಡಿದ್ದು, ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ಸ್ನೇಹಿತ ದಿವೇಶನೂ ಸಹ ಈತನ ಜೊತೆಯಲ್ಲಿ ವಾಸವಿದ್ದಾನೆ.
ವರುಣ್‌, ದಿವೇಶ್‌, ದೀಪು ಮತ್ತು ಸನಾ ಸ್ನೇಹಿತರಾಗಿದ್ದು, ಆಗಾಗ್ಗೆ ವರುಣ್‌ ಮನೆಗೆ ಬಂದು ಹೋಗುತ್ತಿದ್ದರು. ನಿನ್ನೆ ಈ ನಾಲ್ಕೂ ಮಂದಿ ಎರಡು ಬೈಕ್‌ಗಳಲ್ಲಿ ಕೋರಮಂಗಲದ ಕ್ಲಬ್‌ಗೆ ಹೋಗಿ ಪಾರ್ಟಿ ಮಾಡಿಕೊಂಡು ವಾಪಸ್‌‍ ವರುಣ್‌ ಮನೆಗೆ ಬಂದಿದ್ದಾರೆ.
ಇಂದು ಮುಂಜಾನೆ 4.30ರ ಸುಮಾರಿನಲ್ಲಿ ಮತ್ತೆ ನಾಲ್ವರು ಎರಡು ಬೈಕ್‌ಗಳಲ್ಲಿ ದೇವನಹಳ್ಳಿ ಕಡೆ ಜಾಲಿರೈಡ್‌ ಹೋಗಿ ವಾಪಸ್‌‍ ಮನೆಗೆ ಬಂದಿದ್ದಾರೆ. ಆ ಸಂದರ್ಭದಲ್ಲಿ ವರುಣ್‌ ರೂಂನಲ್ಲಿ ಸನಾ ಮಲಗಿದ್ದಾಳೆ. ದೀಪು ತನ್ನ ಮನೆಗೆ ಹೋಗಿದ್ದಾನೆ.
ಹೊರಗಡೆ ವರುಣ್‌, ದಿವೇಶ್‌ ಮಾತನಾಡುತ್ತಾ ಕುಳಿತಿದ್ದರು. ಆ ಸಂದರ್ಭದಲ್ಲಿ ವರುಣ್‌ ಮತ್ತು ದಿವೇಶ್‌ ನಡುವೆ ಹುಡುಗಿ ವಿಚಾರಕ್ಕೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ದಿವೇಶ್‌ ಹಲ್ಲೆಗೆ ಮುಂದಾದಾಗ ವರುಣ್‌ ಅಲ್ಲಿಂದ ಓಡಿದ್ದಾನೆ.
ಆತನನ್ನು ಸ್ವಲ್ಪದೂರ ಅಟ್ಟಾಡಿಸಿಕೊಂಡು ಹೋಗಿ ವಾಟರ್‌ಟ್ಯಾಂಕ್‌ ಬಳಿ ಮತ್ತೆ ಜಗಳವಾಡುತ್ತಿದ್ದಾಗ ದಾರಿಹೋಕರು ಅವರಿಗೆ ಬೈದು ಕಳುಹಿಸಿದ್ದಾರೆ.ವಾಪಸ್‌‍ ಇವರಿಬ್ಬರೂ ಮನೆ ಬಳಿ ಬಂದಾಗ ಮತ್ತೆ ಜಗಳವಾಗಿದೆ. ಆ ವೇಳೆ ದಿವೇಶ್‌ ತಳ್ಳಿದಾಗ ಕುಸಿದು ಬಿದ್ದ ವರುಣ್‌ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.ನಂತರ ರೂಂನಲ್ಲಿ ಮಲಗಿದ್ದ ಸನಾಗೆ ಎಬ್ಬಿಸಿ ಮನೆಗೆ ಹೋಗುವಂತೆ ಹೇಳಿ ಕಳುಹಿಸಿ, ಇತ್ತ ದಿವೇಶ್‌ ಪರಾರಿಯಾಗಿದ್ದಾನೆ.
ಸುದ್ದಿ ತಿಳಿದು ಸಂಜಯನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ದಿವೇಶ್‌ ಪತ್ತೆಗಾಗಿ ಶೋಧ ಮುಂದುವರೆಸಿದ್ದಾರೆ.ಮತ್ತೊಂದು ಮೂಲದ ಪ್ರಕಾರ ವರುಣ್‌ ಮಾಟಮಂತ್ರ ಮಾಡಿಸಿದ್ದಾನೆಂಬ ಕಾರಣಕ್ಕೆ ದಿವೇಶ್‌ ಆತನ ಜೊತೆ ಜಗಳವಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.ಒಟ್ಟಾರೆ ಯಾವ ವಿಚಾರಕ್ಕೆ ಕೊಲೆ ನಡೆದಿದೆ ಎಂಬುದು ಪೊಲೀಸರ ತನಿಖೆಯಿಂದಷ್ಟೇ ಹೊರಬರಬೇಕಿದೆ.