ಇಬ್ಬರು ಆರೋಪಿಗಳ ಸೆರೆ: 2.15 ಲಕ್ಷ ಮೌಲ್ಯದ 11 ಮೊಬೈಲ್‌ಗಳ ವಶ
ಬೆಂಗಳೂರು,ಸೆ.26- ನಡೆದು ಹೋಗುತ್ತಿದ್ದ ವ್ಯಕ್ತಿಯ ಕೈಯಲ್ಲಿದ್ದ ದುಬಾರಿ ಬೆಲೆಯ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದ ಇಬ್ಬರು ದರೋಡೆಕೋರರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿ 2.15 ಲಕ್ಷ ರೂ. ಬೆಲೆ ಬಾಳುವ 11 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಎಂಎಸ್‌‍ಪಾಳ್ಯ ನಿವಾಸಿ ಶಾಬಾಜ್‌ ಖಾನ್‌(24) ಮತ್ತು ನಾಯಂಡಹಳ್ಳಿಯ ಮುಬಾರಕ್‌ ಅಲಿಯಾಸ್‌‍ ಕಾಲು(24) ಬಂಧಿತ ದರೋಡೆಕೋರರು. ಜುಲೈ 13ರಂದು ರಾತ್ರಿ 10.30ರ ಸುಮಾರಿನಲ್ಲಿ ಶಿವಕುಮಾರ್‌ ಎಂಬುವರು ಸುಮನಹಳ್ಳಿ ಸರ್ಕಲ್‌ನ ಬಿಡಿಎ ಕಾಂಪ್ಲೆಕ್‌್ಸ ಎದುರಿನ ವರ್ತುಲ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ದರೋಡೆಕೋರರು ಅವರ ಕೈಯಲ್ಲಿದ್ದ ಐಫೋನ್‌ ಕಸಿದುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿದ್ದ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿ ಇಬ್ಬರು ದರೋಡೆಕೋರರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಯಮಹ ಬೈಕ್‌ ಹಾಗೂ ಕಾಡುಗೊಂಡನಹಳ್ಳಿಯಲ್ಲಿ ಕಳ್ಳತನ ಮಾಡಿದ್ದ 1 ದ್ವಿಚಕ್ರ ವಾಹನ ಸೇರಿ 2.15 ಲಕ್ಷ ರೂ. ಬೆಲೆ ಬಾಳುವ 11 ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳ ಬಂಧನದಿಂದ ಅನ್ನಪೂರ್ಣೇಶ್ವರಿ ನಗರ ಠಾಣೆಯ 2 ಪ್ರಕರಣ ಹಾಗೂ ಕಾಡುಗೊಂಡನಹಳ್ಳಿ ಠಾಣೆಯ 1 ಪ್ರಕರಣವನ್ನು ಬೇಧಿಸುವಲ್ಲಿ ಇನ್‌ಸ್ಪೆಕ್ಟರ್‌ ಕುಮಾರ್‌ ಹಾಗೂ ಸಿಬ್ಬಂದಿಯ ತಂಡ ಯಶಸ್ವಿಯಾಗಿದೆ.