ರಸ್ತೆಬದಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಲ್ಲು ತೂರಿ ಪುಂಡನ ಅಟ್ಟಹಾಸ
ಬೆಂಗಳೂರು,ಜೂ.27-ರಸ್ತೆಬದಿ ನಿಲ್ಲಿಸಲಾಗಿದ್ದ ವಾಹನಗಳ ಮೇಲೆ ಪುಂಡನೊಬ್ಬ ಕಲ್ಲು ತೂರಿ ಗಾಜುಗಳನ್ನು ಜಖಂಗೊಳಿಸಿರುವ ಘಟನೆ ಬ್ಯಾಟರಾಯನಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಮೈಸೂರು ರಸ್ತೆಯ ಕವಿಕಾ ಮುಂದೆ ರಾತ್ರಿ ಎಂದಿನಂತೆ ರಸ್ತೆಬದಿ ನಾಲ್ಕು ಚಕ್ರದ ವಾಹನಗಳನ್ನು ಪಾರ್ಕಿಂಗ್‌ ಮಾಡಲಾಗಿತ್ತು. ಇಂದು ಬೆಳಗಿನ ಜಾವ 3.30ರಿಂದ 4 ಗಂಟೆ ಮಧ್ಯೆ ಈ ಮಾರ್ಗವಗಿ ಬಂದ ಪುಂಡನೊಬ್ಬ ವಾಹನಗಳ ಮೇಲೆ ಕಲ್ಲು ತೂರಿ ಗಾಜುಗಳನ್ನು ಜಖಂಗೊಳಿಸಿದ್ದಾನೆ ಅಲ್ಲದೆ ಪೈಪ್‌ಗಳಿಂದ ಗಾಜು ಒಡೆದಿದ್ದಾನೆ.
ಈತ ಅಟ್ಟಹಾಸಕ್ಕೆ ಟಾಟಾ ಏಸ್‌‍, ಟಿಟಿ, ಸ್ವಿಫ್ಟ್ ಕಾರು, ಟಾಟಾ ನೆಕ್ಸಾನ್‌ ಸೇರಿದಂತೆ 8 ವಾಹನಗಳ ಗಾಜುಗಳು ಪುಡಿಪುಡಿಯಾಗಿವೆ. ಕುಡಿದ ಮತ್ತಿನಲ್ಲಿ ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.
ಬೈಕ್‌ ಕಳ್ಳತನಕ್ಕೆ ಯತ್ನ:ದುಷ್ಕರ್ಮಿ ರಸ್ತೆಬದಿ ನಿಲ್ಲಿಸಿದ್ದ ಬೈಕ್‌ ಕಳ್ಳತನಕ್ಕೂ ಯತ್ನ ನಡೆಸಿರುವುದು ಕಂಡುಬಂದಿದೆ. ಈ ಬಗ್ಗೆ ಬ್ಯಾಟರಾಯನಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.