ಬಿಬಿಎಂಪಿ ಬಹುಕೋಟಿ ಹಗರಣದ ತನಿಖೆಗೆ ಆಯುಕ್ತರ ಸೂಚನೆ
ಬೆಂಗಳೂರು,ಜು.3-ಬಿಬಿಎಂಪಿ ಕಲ್ಯಾಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ತನಿಖೆಗೆ ನಿರ್ಧರಿಸಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಹಗರಣದ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಆದೇಶಿಸಿದ್ದಾರೆ.
ಅಸ್ತಿತ್ವದಲ್ಲೆ ಇಲ್ಲದ ಸೊಸೈಟಿ ಗಳಿಗೆ ಕೋಟ್ಯಂತರ ಹಣ ವರ್ಗಾವಣೆ ಮಾಡಲಾಗಿದೆ ಎಂದು ಕೆಲ ದಿನಗಳ ಹಿಂದೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ವರದಿಯಿಂದ ಎಚ್ಚೆತ್ತುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ.
ತುಷಾರ್‌ ಗಿರಿನಾಥ್‌ ಅವರು ಪಾಲಿಕೆಯ 8 ವಲಯಗಳ ಕಲ್ಯಾಣ ಇಲಾಖೆಯಲ್ಲಿ ಕೊಟ್ಟಿರೋ ಅನುದಾನದ ಹಂಚಿಕೆ ಸಂಪೂರ್ಣ ವಿವರ ಪಡೆದುಕೊಂಡಿದ್ದಾರೆ. ಸೊಸೈಟಿ ಗಳ ಅಸ್ತಿತ್ವದ ಬಗ್ಗೆ ಹಾಗೂ ಫಲಾನುಭವಿಗಳಿಗೆ ವರ್ಗಾವಣೆ ಅದ ಹಣದ ಬಗ್ಗೆ ತನಿಖೆ ನಡೆಸಿ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ.
ಮೂರು ದಿನಗಳಲ್ಲಿ ಸಮಗ್ರ ಮಾಹಿತಿ ಸಂಗ್ರಹಿಸಿ ನೀಡುವಂತೆ ಸೂಚನೆ ನೀಡಿರುವುದರಿಂದ ಬಿಬಿಎಂಪಿ ಕಂದಾಯ ಅಧಿಕಾರಿಗಳು ಸೊಸೈಟಿ ಗಳ ಬೆನ್ನು ಬಿದ್ದಿದ್ದಾರೆ.