ಹುಟ್ಟುಹಬ್ಬದ ಕುರಿತು ಅಭಿಮಾನಿಗಳಲ್ಲಿ ವಿನಮ್ರ ಶಿವಣ್ಣ ಮನವಿ
ಬೆಂಗಳೂರು, ಜು. 11-ವಯಸ್ಸು ಅರವತ್ತು ದಾಟಿದರೂ ಚಿರ ಯುವಕರನ್ನೇ ನಾಚಿಸುವಂತೆ ಚಿತ್ರರಂಗದಲ್ಲಿ ಸದಾ ಸಕ್ರಿಯರಾಗಿರುವ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರಿಗೆ ನಾಳೆ 62ನೇ ಹುಟ್ಟುಹಬ್ಬದ ಸಂಭ್ರಮ. ಆದರೆ ಈ ಬಾರಿ ತಮ ಜನದಿನವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಶಿವಸೈನ್ಯಕ್ಕೆ ಬೇಸರ ಮೂಡಿಸಿದ್ದಾರೆ.
ಅಭಿಮಾನಿಗಳ ಪಾಲಿನ ಮೆಚ್ಚಿನ ಶಿವಣ್ಣ ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದರೂ ಸಾಕಷ್ಟು ಉಡುಗೊರೆಗಳ ಮೂಲಕ ಫ್ಯಾನ್ಸ್ ಗಳಿಗೆ ಸಂತಸ ಸಿಗಲಿದೆ. ಹುಟ್ಟುಹಬ್ಬ ಆಚರಿಸಿಕೊಳ್ಳದ ಬಗ್ಗೆ ಸ್ವತಃ ಶಿವರಾಜ್‌ಕುಮಾರ್‌ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಅಭಿಮಾನಿಗಳಿಗೆ ಶಿವಣ್ಣ ಮನವಿ:`ಅಭಿಮಾನಿ ದೇವರುಗಳಿಗೆ,ಪ್ರತಿ ವರ್ಷ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬ ಆಗೋದು ನಿಮ ಜೊತೆ ಕಳೆದಾಗ. ನೀವು ಅಕ್ಕರೆ ಯಿಂದ ಕೊಡೋ ಹಸ್ತಲಾಘವ, ಪ್ರೀತಿಯ ಅಪ್ಪುಗೆ, ನೀಡೋ ಆಶೀರ್ವಾದ ನಿಮ ಶಿವುಗೆ ಶ್ರೀರಕ್ಷೆ. ಈ ವರ್ಷ ಹುಟ್ಟುಹಬ್ಬಕ್ಕೆ ನಿಮ ಜೊತೆ ಇರೋದಕ್ಕೆ ಆಗುವುದಿಲ್ಲ, ಆದರೆ ವರ್ಷವಿಡೀ ಒಟ್ಟಿಗೆ ಪ್ರತಿ ದಿನ ಸೆಲೆಬ್ರೇಟ್‌ ಮಾಡೋಣ. ನಾನು ಹುಟ್ಟುಹಬ್ಬಕ್ಕೆ ಇಲ್ಲದೆ ಇದ್ರೂ ನಿಮ ಜೊತೆ ಭೈರತಿ ರಣಗಲ್‌ ಇರ್ತಾನೆ, ಜುಲೈ 12 ರಂದು ಬೆಳಿಗ್ಗೆ 10:10 ಕ್ಕೆ, ನಿಮ ಆಶೀರ್ವಾದ ಸದಾ ಇರಲಿ’ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಅಭಿಮಾನಿಗಳಿಗೆ ಸಿಗಲಿದೆ ಭರ್ಜರಿ ಗಿಫ್ಟ್ :ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅವರು ಈ ಬಾರಿ ಜನದಿನ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದರೂ, ನಾಳೆ ಶಿವರಾಜ್‌ಕುಮಾರ್‌ ಅವರು ನಟಿಸಿರುವ ಸಿನಿಮಾಗಳ ಫಸ್ಟ್‌ ಲುಕ್‌ , ಟೀಸರ್‌, ಹೊಸ ಸಿನಿಮಾಗಳ ಘೋಷಣೆ ಆಗುವ ಮೂಲಕ ಅಭಿಮಾನಿಗಳಿಗೆ ಸಂತಸದ ವಿಷಯ ಸಿಗಲಿದೆ.
ರಣತಿ ಬೈರತಿ ರಣಗಲ್‌ ಟೀಸರ್‌ ಬಿಡುಗಡೆ:ಡಾ.ಶಿವರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಅಂಗವಾಗಿ ನಾಳೆ ಬೆಳಗ್ಗೆ 10.10ಕ್ಕೆ ಬೈರತಿ ರಣಗಲ್‌ ಸಿನಿಮಾಆದ ಟೀಸರ್‌ ಬಿಡುಗಡೆ ಆಗಲಿದ್ದು, ಸಿನಿಮಾ ರಿಲೀಸ್‌‍ ಕುರಿತು ವಿಷಯವನ್ನು ಚಿತ್ರತಂಡ ಹಂಚಿಕೊಳ್ಳಬಹುದು. ಡಾಲಿ ಧನಂಜಯ್‌ರೊಂದಿಗೆ ನಟಿಸಿರುವ ಉತ್ತರಾಖಂಡ ಸಿನಿಮಾ ತಂಡದಿಂದಲೂ ಏನಾದರೂ ಉಡುಗೊರೆ ಸಿಗುವ ಸಾಧ್ಯತೆಗಳಿವೆ. ಅರ್ಜುನ್‌ ಜನ್ಯ ಇದೇ ಮೊದಲ ಬಾರಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವ `45′ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌‍ ಆಗಲಿದ್ದು, ಈ ಸಿನಿಮಾವನ್ನು ಎಂ. ರಮೇಶ್‌ರೆಡ್ಡಿ ನಿರ್ಮಿಸುತ್ತಿದ್ದಾರೆ.
ತೆಲುಗಿನ ಸ್ಟಾರ್‌ ನಟ ರಾಮ್‌ಚರಣ್‌ ಜೊತೆಗೆ ನಟಿಸುತ್ತಿರುವ ಸಿನಿಮಾ ಹಾಗೂ ಶಿವರಾಜ್‌ಕುಮಾರ್‌ ನಟನೆಯ 131ನೇ ಸಿನಿಮಾದ ಕುರಿತು ನಾಳೆ ಸಂಜೆ 5 ಗಂಟೆಗೆ ಘೋಷಣೆಯಾಗಲಿದ್ದು, ಈ ಚಿತ್ರವನ್ನು ಕಾರ್ತಿಕ್‌ ಅದ್ವೈತ್‌ ನಿರ್ದೇಶಿಸಲಿದ್ದಾರೆ.