ದಾಂಪತ್ಯ ಜೀವನಕ್ಕೆ ಕಾಲಿಟ್ಟ ತರುಣ್‌-ಸೋನಲ್‌ ಜೋಡಿ
ಬೆಂಗಳೂರು, ಆ.11-ಚಂದನವದ ತಾರೆ ಸೋನಲ್‌ ಮಾಂಥರೋ ಹಾಗೂ ಯಶಸ್ವಿ ಚಿತ್ರಗಳ ನಿರ್ದೇಶಕ ತರುಣ್‌ ಸುಧೀರ್‌ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಚಿತ್ರರಂಗ, ರಾಜಕೀಯ ಹಾಗೂ ಅಭಿಮಾನಿಗಳ ಬಳಗವು ಶುಭ ಕೋರಿದೆ.
ನಗರದ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್‌‍ ಈ ಜೋಡಿಯ ದಾಂಪತ್ಯ ಜೀವನಕ್ಕೆ ಸಾಕ್ಷಿಯಾ ಗಿದ್ದು, ವಿವಾಹಕ್ಕೆ ಸಿನಿಮಾ ಸ್ಪರ್ಶವನ್ನು ನೀಡಿದ್ದ ತರುಣ್‌ ಸುಧೀರ್‌ ಕಲ್ಯಾಣ ಮಂಟಪವನ್ನು ರೆಡ್‌ ಥೀಮ್‌ನಲ್ಲಿ ಪ್ರಶಸ್ತಿ ಸಮಾರಂಭದಂತೆ ಸಿಂಗರಿಸಿದ್ದರು.ಇಂದು ಬೆಳಗ್ಗೆ 10.50 ರಿಂದ 11.35ರ ವೇಳೆಯಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಎರಡೂ ಕುಟುಂಬದವರು ಹಾಗೂ ಆಪ್ತೇಷ್ಟರು ತರುಣ್‌ ಹಾಗೂ ಸೋನಲ್‌ ವಿವಾಹದಲ್ಲಿ ಪಾಲ್ಗೊಂಡಿದ್ದರು.
ಮದುವೆಗೆ ಸ್ನೇಹಿತರ ಉಸ್ತುವಾರಿ:ನೆನಪಿರಲಿ ಪ್ರೇಮ್‌ , ಶರಣ್‌ ಹಾಗೂ ತರುಣ್‌ ಸುಧೀರ್‌ ನಡುವೆ ಅಗಾಧವಾದ ಸ್ನೇಹವಿದ್ದು ಇಡೀ ಮದುವೆಯ ಉಸ್ತುವಾರಿಯನ್ನು ಸ್ನೇಹಿತರೇ ವಹಿಸಿಕೊಂಡಿದ್ದರು. ಇಂದು ಬೆಳಗ್ಗೆ ಕಲ್ಯಾಣಮಂಟಪಕ್ಕೆ ವಧು ಆಗಮಿಸುತ್ತಿದ್ದಂತೆ ಸಿನಿಮಾ ರೀತಿಯಲ್ಲಿ ಹೂವುಗಳಿಂದ ರಾಶಿಯಿಂದ ಆಕೆಯನ್ನು ಆಮಂತ್ರಿಸಲಾಯಿತು. ಪಕ್ಕಾ ಸಂಪ್ರದಾಯಿಕ ಉಡುಪಿನಲ್ಲಿ ಸೋನಾಲ್‌ ಹಾಗೂ ತರುಣ್‌ ಕಂಗೊಳಿಸುತ್ತಿದ್ದರು.
ಜನದಿನದಂದೇ ವಿವಾಹ:ನಟಿ ಸೋನಾಲ್‌ ಮಾಂಥರೋಗೆ ಇಂದು ಡಬ್ಬಲ್‌ ಸಂಭ್ರಮ. ಒಂದೆಡೆ ಇಂದು ಅವರು ತಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರೆ, ಇಂತಹ ಶುಭ ಸಂದರ್ಭದಲ್ಲೇ ತರುಣ್‌ ಸುಧೀರ್‌ರೊಂದಿಗೆ ಸಪ್ತಪದಿ ತುಳಿಯುವ ಮೂಲಕ ತಮ ಸಂತಸವನ್ನು ಹೆಚ್ಚಿಸಿ ಕೊಂಡಿದ್ದಾರೆ.
ತಾರೆಯರ ದಂಡು:ನಿನ್ನೆ ನಡೆದ ಅರಕ್ಷತೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ ಸೇರಿದಂತೆ ಹಲವು ರಾಜಕೀಯ ಗಣ್ಯರು, ಮಾಲಾಶ್ರೀ, ಕೆ.ಮಂಜು, ರಾಕ್‌ಲೈನ್‌ ವೆಂಕಟೇಶ್‌ ಸೇರಿದಂತೆ ಹಲವು ಸಿನಿಮಾ ಮಂದಿ ಭಾಗಿಯಾಗಿದ್ದರು. ಇಂದು ಮದುವೆ ಸಮಾರಂಭದಲ್ಲೂ ಕೂಡ ಟಾಲಿವುಡ್‌ ನಟ ಜಗಪತಿ ಬಾಬು, ಶರಣ್‌, ಶ್ರುತಿ ಸೇರಿದಂತೆ ಹಲವು ಆಗಮಿಸಿ ನೂತನ ವಧು-ವರರನ್ನು ಹಾರೈಸಿದರು.
ಕ್ರೈಸ್ತ್ರ ಸಂಪ್ರದಾಯದಲ್ಲೂ ಮದುವೆ:ಮಂಗಳೂರಿನ ಕ್ರೈಸ್ತ್ರ ಧರ್ಮದ ಸೋನಾಲ್‌ ಮಾಂಥರೋ ಅವರ ವಿವಾಹವು ಇಂದು ಹಿಂದೂ ಸಂಪ್ರದಾಯದಂತೆ ನಡೆದಿದ್ದರೂ ಮುಂದಿನ ದಿನದಲ್ಲಿ ಮಂಗಳೂರಿನಲ್ಲಿ ಕ್ರೈಸ್ತ್ರ ಸಂಪ್ರದಾಯದಂತೆ ವಿವಾಹ ನಡೆಯಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.ಪರಿಸರ ಪ್ರೇಮ
ಮೆರೆದ ಜೋಡಿ:ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ನಟಿ ಸೋನಾಲ್‌ ಮಾಂಥರೋ ಅವರ ವಿವಾಹದ ಪತ್ರಿಕೆಗೆ ಪರಿಸರ ಪ್ರೇಮದ ಸ್ಪರ್ಶ ನೀಡಿದ್ದು, ಆಮಂತ್ರಣ ಪತ್ರಿಕೆಯನ್ನು ಮಣ್ಣಿನಲ್ಲಿ ಹೂತರೆ ಗಿಡಗಳಾಗಿ ಬೆಳೆಸುವಂತೆ ರೂಪಿಸಿದ್ದಾರೆ.