ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದಲೂ ಪಾಂಡ್ಯಾಗೆ ಕೊಕ್‌..!
ಮುಂಬೈ,ಆ.4-ಟಿ20 ತಂಡದ ನಾಯಕತ್ವ ಕಳೆದುಕೊಂಡಿರುವ ಹಾರ್ದಿಕ್‌ ಪಾಂಡ್ಯಾ ಅವರು ಇದೀಗ ಮುಂಬೈ ಇಂಡಿಯನ್ಸ್ ತಂಡದ ನಾಯಕ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಮುಂಬರುವ ಐಪಿಎಲ್‌ ಹರಾಜಿಗೆ ತಯಾರಿ ನಡೆಸ್ತಿರುವ ಮುಂಬೈ ಇಂಡಿಯನ್ಸ್ ತಂಡದ ಫ್ರಾಂಚೈಸಿಯು ಕ್ಯಾಪ್ಟನ್‌ ಹಾರ್ದಿಕ್‌ ಪಾಂಡ್ಯರನ್ನೇ ತಂಡದಿಂದ ಕೈಬಿಡುವ ನಿರ್ಧಾರದಲ್ಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ಪಾಂಡ್ಯರನ್ನು ಕೈಬಿಟ್ಟರೆ, ಮುಂಬೈ ಇಂಡಿಯನ್ಸ್ ಗೆ ಯಾರು ನಾಯಕರಾಗುತ್ತಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡ ರೋಹಿತ್‌ ಶರ್ಮಾ, ಸೂರ್ಯಕುಮಾರ್‌ ಯಾದವ್‌ ಮತ್ತು ಜಸ್ಪ್ರೀತ್‌ ಬುವ್ರಾರನ್ನು ರಿಟೈನ್‌ ಮಾಡಿಕೊಳ್ಳಲು ತೀರ್ಮಾನಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಫ್ರಾಂಚೈಸಿಯು ಹಾರ್ದಿಕ್‌ ಪಾಂಡ್ಯ ಅವರನ್ನು ಬಿಡುಗಡೆ ಮಾಡುತ್ತದೆ.
ಏಕೆಂದರೆ ಸೂರ್ಯಕುಮಾರ್‌ ಈಗ ಟಿ 20 ಸ್ವರೂಪದಲ್ಲಿ ದೇಶದ ನಾಯಕರಾಗಿದ್ದಾರೆ. ಹೀಗಾಗಿ ಅವರಿಗೇ ಮುಂಬೈ ಇಂಡಿಯನ್ಸ್‌‍ ತಂಡದ ಜಾವಾಬ್ದಾರಿಯನ್ನು ನೀಡಬಹುದು. ಸೂರ್ಯನಿಗೆ ಕ್ಯಾಪ್ಟನ್ಸಿಯನ್ನು ಮುಂಬೈ ಇಂಡಿಯನ್ಸ್ ನೀಡೋದೇ ಆದರೆ, ತಿಲಕ್‌ ವರ್ಮಾ ಅವರನ್ನು ಸೂರ್ಯ ಉಳಿಸಿಕೊಳ್ತಾರೆ ಎಂದು ಹೇಳಲಾಗುತ್ತಿದೆ.
2024ರ ಐಪಿಎಲ್‌‍ನಲ್ಲಿ ಹಾರ್ದಿಕ್‌ ಪಾಂಡ್ಯರನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡು ನಾಯಕತ್ವ ಜವಾಬ್ದಾರಿಯನ್ನ ನೀಡಿತ್ತು. ರೋಹಿತ್‌ ಶರ್ಮಾ ಅವರಿಂದ ಕ್ಯಾಪ್ಟನ್ಸಿ ಕಿತ್ಕೊಂಡು ಪಾಂಡ್ಯಗೆ ನೀಡಿರೋದು ಭಾರೀ ಟೀಕೆಗೆ ಕಾರಣವಾಗಿತ್ತು. ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್‌್ಸ ಹೀನಾಯವಾಗಿ ಸೋತಿತ್ತು. ಹೀಗಾಗಿ ಮತ್ತೊಮೆ ನಾಯಕತ್ವ ಬದಲಾವಣೆ ಮಾಡಲು ಮುಂಬೈ ಇಂಡಿಯನ್ಸ್ ತಂಡದ ಫ್ರಾಂಬೈಸಿ ತೀರ್ಮಾನ ಕೈಗೊಂಡಿದೆ ಎಂದು ತಿಳಿದುಬಂದಿದೆ.