ಮೃಣಾಲ್‌ ಹೆಬ್ಬಾಳ್ಕರ್‌ ಸೋಲಿಗೆ ಕ್ಷಮೆ ಯಾಚಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು,ಜೂ.10– ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮೃಣಾಲ್‌ ಹೆಬ್ಬಾಳ್ಕರ್‌ ಸೋಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆ ಯಾಚಿಸಿದ್ದಾರೆ.ಇಂದು ಬೆಳಿಗ್ಗೆ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್‌‍ ಶಾಸಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಆಗಮಿಸಿತ್ತು.
ಅವರನ್ನು ಕಂಡ ಕೂಡಲೇ ಏನು ವಿಶೇಷ ಬೆಳಗಾವಿಯವರೆಲ್ಲಾ ಬಂದಿದ್ದೀರಲ್ಲಾ ಎಂದು ಮುಖ್ಯಮಂತ್ರಿ ಹೇಳಿದರು. ಅದೇ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೈ ಮುಗಿದು ವಂದಿಸಿದರು.
ಪ್ರತಿವಂದನೆ ಸಲ್ಲಿಸಿದ ಮುಖ್ಯಮಂತ್ರಿ ಏನಮ್ಮ ಎಂದು ಮಾತು ಮುಂದುವರೆಸಲು ಬಯಸಿದರಾದರೂ ಅರ್ಧಕ್ಕೆ ಕಡಿತ ಮಾಡಿ, ಸಾರಿ ಕಣಮ್ಮ ಎಂದರು. ಇದನ್ನು ಕೇಳುತ್ತಿದ್ದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಭಾವುಕರಾದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಪ್ರಿಯಾಂಕ ಜಾರಕಿಹೊಳಿ ಮುಖ್ಯಮಂತ್ರಿಯವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಅದೇ ಸಭಾಂಗಣದಲ್ಲಿದ್ದ ಸಚಿವ ಸತೀಶ್‌ ಜಾರಕಿಹೊಳಿಯವರ ಕುರಿತು, ಮೊನ್ನೆ ರಾಹುಲ್‌ಗಾಂಧಿಯವರು ಬಂದಾಗ ಪ್ರಿಯಾಂಕ ಅವರು ಭೇಟಿಯಾಗಿದ್ದರು ಎಂದು ಹೇಳಿದರು. ಗೆಲುವಿಗಾಗಿ ಶುಭ ಹಾರೈಸಿದರು.