ಬೆಳ್ಳಂಬೆಳಿಗ್ಗೆ ದೆಹಲಿಯಲ್ಲಿ ಇಬ್ಬರ ಮೇಲೆ ಗುಂಡಿನ ದಾಳಿ
ನವದೆಹಲಿ, ಜು.9 (ಪಿಟಿಐ)ಇಂದು ಮುಂಜಾನೆ ದೆಹಲಿಯ ಸೀಲಂಪುರ ಪ್ರದೇಶದಲ್ಲಿ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಉಮರ್‌ ಮತ್ತು ವಸೀಮ್‌‍ ಎಂಬುವರು ಉದ್ಯಾನವನದಲ್ಲಿ ಕುಳಿತಿದ್ದಾಗ, ಬೆಳಗಿನ ಜಾವ 1.40 ರ ಸುಮಾರಿಗೆ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಇಬ್ಬರ ಕಾಲಿಗೆ ಗುಂಡು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಕೋರರಲ್ಲಿ ಒಬ್ಬನನ್ನು ಮುಸ್ತಫಾಬಾದ್‌ ನಿವಾಸಿ ಆಜಾದ್‌ (42) ಎಂದು ಗುರುತಿಸಲಾಗಿದೆ ಎಂದು ಉಪ ಪೊಲೀಸ್‌‍ ಆಯುಕ್ತ (ಈಶಾನ್ಯ) ಜಾಯ್‌ ಟಿರ್ಕಿ ಹೇಳಿದ್ದಾರೆ. ಆತನನ್ನು ಬಂಧಿಸಲಾಗಿದೆ. ಆಜಾದ್‌ ವಿರುದ್ಧ ಐದು ಕಳ್ಳತನ ಮತ್ತು ದರೋಡೆ ಪ್ರಕರಣಗಳು ದಾಖಲಾಗಿದ್ದು, ಆತನಿಂದ 7.65 ಎಂಎಂ ಪಿಸ್ತೂಲ್‌ ವಶಪಡಿಸಿಕೊಳ್ಳಲಾಗಿದೆ ಎಂದು ಟಿರ್ಕಿ ಹೇಳಿದ್ದಾರೆ.
ಮತ್ತೊಬ್ಬ ದಾಳಿಕೋರನನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ ನಿವಾಸಿ ಜಾಹಿದ್‌ ಅಲಿಯಾಸ್‌‍ ಚೋರ್‌ (40) ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಸರಗಳ್ಳತನ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌‍) ಸೆಕ್ಷನ್‌ 109 (1), 3 (5) ಮತ್ತು ಶಸಾ್ತ್ರಸ್ತ್ರ ಕಾಯ್ದೆಯ ಸೆಕ್ಷನ್‌ 25 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಟಿರ್ಕಿ ಹೇಳಿದರು. ಜಾಹಿದ್‌ ನನ್ನು ಬಂಧಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.