ಮುಂಬೈನ ಕಟ್ಟಡದಲ್ಲಿ ಬೆಂಕಿ, 7 ಮಂದಿ ಸಾವು
5       --   
ಮುಂಬೈ,ಅ.6-ಮುಂಬೈನ ಎರಡು ಅಂತಸ್ತಿನ ಅಂಗಡಿ ಮತ್ತು ವಸತಿ ಕಟ್ಟಡದಲ್ಲಿ ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡು ಮೂವರು ಅಪ್ರಾಪ್ತರು ಸೇರಿದಂತೆ ಏಳು ಜನರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಮೃತರನ್ನು ಪ್ಯಾರಿಸ್‌‍ ಗುಪ್ತಾ (7), ಮಂಜು ಪ್ರೇಮ್‌ ಗುಪ್ತಾ (30), ಅನಿತಾ ಗುಪ್ತಾ (39), ಪ್ರೇಮ್‌ ಗುಪ್ತಾ (30), ನರೇಂದ್ರ ಗುಪ್ತಾ (10), ವಿಧಿ ಚೇದಿರಾಮ್‌ ಗುಪ್ತಾ (15) ಮತ್ತು ಗೀತಾದೇವಿ ಧರಂದೇವ್‌ ಗುಪ್ತಾ (60) ಮೃತಪಟ್ಟ ದುರ್ದೈವಿಗಳು.
ಚೆಂಬೂರ್‌ ಪ್ರದೇಶದ ಸಿದ್ಧಾರ್ಥ್‌ ಕಾಲೋನಿಯಲ್ಲಿ ಬೆಳಿಗ್ಗೆ 5.20 ಕ್ಕೆ ಈ ಘಟನೆ ನಡೆದಿದೆ. ಬೆೆಂಕಿ ಹೊತ್ತಿಕೊಳ್ಳಲು ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿಯು ನೆಲ ಮಹಡಿಯಲ್ಲಿನ ಅಂಗಡಿಯಲ್ಲಿನ ವಿದ್ಯುತ್‌ ವೈರಿಂಗ್‌ ಮತ್ತು ಅನುಸ್ಥಾಪನೆಗಳಿಗೆ ಸೀಮಿತವಾಗಿತ್ತು ಮತ್ತು ಮೇಲಿನ ಮಹಡಿಗೆ ವ್ಯಾಪಿಸಿದೆ.ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ರಾಜವಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಚಿಕಿತ್ಸೆ ಫಲಕಾರಿಯಾಗದೆ ಅವರೆಲ್ಲರೂ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ವಾಹನಗಳು, ನೀರಿನ ಟ್ಯಾಂಕರ್‌ಗಳು ಮತ್ತು ಇತರ ಸಹಾಯವನ್ನು ಸ್ಥಳಕ್ಕೆ ಧಾವಿಸಲಾಯಿತು ಮತ್ತು ಬೆಳಿಗ್ಗೆ 9.15ರ ಹೊತ್ತಿಗೆ ಬೆಂಕಿಯನ್ನು ನಂದಿಸಲಾಗಿದೆ.
ಕಟ್ಟಡದ ನೆಲ ಮಹಡಿಯಲ್ಲಿ ಅಂಗಡಿಗಳಿದ್ದು, ಮೇಲಿನ ಮಹಡಿಯಲ್ಲಿ ಮನೆಗಳಿದ್ದವು. ಬೆಂಕಿಯ ಜ್ವಾಲೆ ನೆಲಮಹಡಿಯ ಎಲೆಕ್ಟ್ರಿಕ್‌ ವೈರಿಂಗ್‌ ಮತ್ತು ಇತರೆ ಸಾಮಗ್ರಿಗಳಿಗೆ ಹೊತ್ತಿಕೊಂಡು ಬಳಿಕ ಎರಡನೇ ಮಹಡಿಗೆ ವ್ಯಾಪಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.