ಪೆಂಡಾಲ್‌ಗೆ ಬೆಂಕಿ ಬಿದ್ದು ಐವರ ಸಜೀವ ದಹನ
ಪಾಟ್ನಾ,ಏ.26-ಮದುವೆ ಪೆಂಡಾಲ್‌ಗೆ ಬೆಂಕಿ ಬಿದ್ದು ಆರು ಮಂದಿ ಸಜೀವ ದಹನವಾಗಿರುವ ಘಟನೆ ಬಿಹಾರದ ದರ್ಬಾಂಗಾ ಜಿಲ್ಲೆಯಲ್ಲಿ ಸಂಭವಿಸಿದೆ. ಬಹೇರಾ ಪೊಲೀಸ್‌‍ ಠಾಣೆ ವ್ಯಾಪ್ತಿಯ ಅಲಿನಗರದಲ್ಲಿ ತಡರಾತ್ರಿ 11.15 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆ ಸಂಭ್ರಮದಲ್ಲಿ ಕೆಲ ಯುವಕರು ಪೆಂಡಾಲ್‌ ಸಮೀಪ ಪಟಾಕಿ ಸಿಡಿಸುತ್ತಿದ್ದಾಗ ಆಕಸಿಕವಾಗಿ ಪೆಂಡಾಲ್‌ಗೆ ಬೆಂಕಿ ತಗುಲಿತು. ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಏಕಾಏಕಿ ಇಡಿ ಪೆಂಡಾಲ್‌ಗೆ ಆವರಿಸಿದಾಗ ಪೆಂಡಾಲ್‌ ಕೆಳಗೆ ಕುಳಿತಿದ್ದ ಆರು ಮಂದಿ ಸಜೀವದಹನವಾಗಿದ್ದಾರೆೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪೆಂಡಾಲ್‌ ಒಳಭಾಗದಲ್ಲಿ ಇರಿಸಲಾಗಿದ್ದ ಕೆಲವು ದಹನಕಾರಿ ವಸ್ತುಗಳು ಬೆಂಕಿ ವೇಗವಾಗಿ ಹರಡಲು ಸಹಾಯ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮತರನ್ನು ಸುನೀಲ್‌ ಪಾಸ್ವಾನ್‌ (26), ಲೀಲಾದೇವಿ (23), ಕಾಂಚನ್‌ ದೇವಿ (26), ಸಿದ್ದಾಂತ್‌ ಕುಮಾರ್‌ (4), ಶಶಾಂಕ್‌ ಕುಮಾರ್‌ (3) ಮತ್ತು ಸಾಕ್ಷಿ ಕುಮಾರಿ (5) ಎಂದು ಗುರುತಿಸಲಾಗಿದೆ. ಇವರ ಜೊತೆಗೆ ಮೂರು ಹಸುಗಳೂ ಬೆಂಕಿಗೆ ಆಹುತಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿಯಲು ತನಿಖೆಗೆ ಆದೇಶಿಸಿದ್ದೇನೆ, ಈ ನಡುವೆ ವಿಪತ್ತು ನಿರ್ವಹಣಾ ಮಾರ್ಗಸೂಚಿಯಂತೆ ಸಂತ್ರಸ್ತ ಕುಟುಂಬಗಳಿಗೆ ಜಿಲ್ಲಾಡಳಿತ ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದು ಜಿಲ್ಲಾಧಿಕಾರಿ ರಾಜೀವ್‌ ರೋಷನ್‌ ಪಿಟಿಐಗೆ ತಿಳಿಸಿದ್ದಾರೆ.