ರಸ್ತೆ ಅಪಘಾತದಲ್ಲಿ ಒಬ್ಬ ಸಾವು, 11 ಮಂದಿ ಗಾಯ
ಜಮ್ಮು, ಮೇ 2 – ಕೇರಳದ ಪ್ರವಾಸಿಗರಿದ್ದ ಟೆಂಪೋ ಟ್ರಾವೆಲರ್‍ನಲ್ಲಿ ಇಲ್ಲಿನ ರಾಂಬನ್ ಜಿಲ್ಲೆಯ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್‍ಗೆ ಡಿಕ್ಕಿ ಹೊಡೆದು ಪರಿಣಾಮ ಒಬ್ಬರು ಸಾವನ್ನಪ್ಪಿದ್ದು, ಹನ್ನೊಂದು ಮಂದಿ ಗಾಯಗೊಂಡಿದ್ದಾರೆ.
ತಡರಾತ್ರಿ ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ಬನಿಹಾಲ್‍ನ ಶಾಬನ್‍ಬಾಸ್ ಪ್ರದೇಶದಲ್ಲಿ ಎದುರಿಗೆ ಬರುತ್ತಿದ್ದ ಟ್ರಕ್‍ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದಾರೆ. ಟೆಂಪೋ ಟ್ರಾವೆಲರ್‍ನಲ್ಲಿ ಕೇರಳದ 12 ಪ್ರವಾಸಿಗರು ಸೇರಿದಂತೆ 16 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದ್ದು ಒಬ್ಬ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಹನ್ನೊಂದು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರವಾಸಿಗರ ಬಗ್ಗೆ ಹೆಚ್ಚನ ಮಾಹಿತಿ ಕಲೆ ಹಾಕಲಾಗುತ್ತಿದೆ ಮತ್ತು ರಸ್ತೆ ಪಕ್ಕ ಅಪಘಾತಗೊಂಡ ವಾಹನವನ್ನು ಸರಿಸಿ ಬೇರೆ ವಾಹನಗಳ ಸಂಚಾರಕ್ಕೆ ಅನುವು ಮಾಡಲಾಗಿದೆ.