ಮೇ.14ರಂದು ವಾರಾಣಸಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ
ವಾರಾಣಸಿ,ಮೇ5-ಪ್ರಧಾನಿ ನರೇಂದ್ರಮೋದಿ ಅವರು ಮೇ 14ರಂದು ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮನ್ನ ಮೇ 13ರಂದು ಜಿಲ್ಲೆಯಲ್ಲಿ ಭರ್ಜರಿ ರೋಡ್‌ ಶೋ ನಡೆಸಲಿದ್ದಾರೆ. ಅವರ ನಾಮಪತ್ರ ಸಲ್ಲಿಕೆ ದಿನವನ್ನು ಐತಿಹಾಸಿಕ ದಿನವನ್ನಾಗಿ ಮಾಡಲು ಬಿಜೆಪಿ ಬೃಹತ್‌ ಯೋಜನೆ ಹಾಕಿಕೊಂಡಿದೆ.
ಅರ್ಧ ಡಜನ್‌ಗಿಂತಲೂ ಹೆಚ್ಚು ರಾಜ್ಯಗಳ ಮುಖ್ಯಮಂತ್ರಿಗಳು, ಹತ್ತಕ್ಕೂ ಹೆಚ್ಚು ಕೇಂದ್ರ ಸಚಿವರು ಮತ್ತು ಅಷ್ಟೇ ಸಂಖ್ಯೆಯ ಕ್ಯಾಬಿನೆಟ್‌ ಮಂತ್ರಿಗಳು ಮೋದಿ ಅವರ ರೋಡ್‌ ಶೋ ಮತ್ತು ನಾಮಪತ್ರ ಸಲ್ಲಿಕೆಯ ದಿನಕ್ಕೆ ಸಾಕ್ಷಿಯಾಗಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಎನ್‌ಡಿಎ ಮೈತ್ರಿಕೂಟದ ರಾಷ್ಟ್ರೀಯ ನಾಯಕರು ಮತ್ತು ಮುಖ್ಯಮಂತ್ರಿಗಳ ಉಪಸ್ಥಿತಿಗೆ ಸಿದ್ಧತೆ ನಡೆಸಲಾಗಿದೆ. ಇವರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ, ಕೈಗಾರಿಕಾ ಸಚಿವ ಡಾ.ಮಹೇಂದ್ರ ನಾಥ್‌ ಪಾಂಡೆ, ಕೃಷಿ ಸಚಿವ ಅರ್ಜುನ್‌ ಮುಂಡಾ, ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್‌ ಸೇರಿದಂತೆ ಅನೇಕ ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌, ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್‌ ಸಾಯಿ, ರಾಜಸ್ಥಾನ ಸಿಎಂ ಭಜನಲಾಲ್‌ ಶರ್ಮಾ, ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್‌ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಕೂಡ ಉಪಸ್ಥಿತರಿರುವರು.
ಎನ್‌ಡಿಎ ಮೈತ್ರಿಕೂಟದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಲೋಕ್‌ ಜನಶಕ್ತಿ ಪಕ್ಷದ ಚಿರಾಗ್‌ ಪಾಸ್ವಾನ್‌ ಅವರಿಗೂ ಆಹ್ವಾನ ನೀಡಲಾಗಿದೆ. ಮೇ 13ರಂದು ನಡೆಯಲಿರುವ ಪ್ರಧಾನಿ ನರೇಂದ್ರಮೋದಿ ಅವರ ರೋಡ್‌ಶೋಗೆ 5 ಲಕ್ಷಕ್ಕೂ ಹೆಚ್ಚು ಜನರನ್ನು ಒಟ್ಟುಗೂಡಿಸಲು ಸಿದ್ಧತೆ ನಡೆಸಲಾಗುತ್ತಿದೆ. 13ರಂದು ವಾರಾಣಸಿಗೆ ಬರುವ ಪ್ರಧಾನಿ ಮೋದಿ, ಬನಾರಸ್‌ ಲೋಕೋಮೋಟಿವ್‌ ವರ್ಕ್‌ಶಾಪ್‌ನ ಅತಿಥಿ ಗೃಹದಲ್ಲಿ ರಾತ್ರಿ ವಿಶ್ರಾಂತಿ ಪಡೆಯಲಿದ್ದು, ಇಲ್ಲಿಂದ ಹೊರಟು ಮರುದಿನ ಬೆಳಗ್ಗೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ನೇರವಾಗಿ ನಾಮಪತ್ರ ಸಲ್ಲಿಕೆಗೆ ತೆರಳಲಿದ್ದಾರೆ.
ಅಂದೇ ನಾಮಪತ್ರ ಸಲ್ಲಿಸಲು ಕಾರಣ ಏನು?:ಪ್ರಧಾನಿ ಮೋದಿ ಅವರು ಮೇ 14ರಂದು ನಾಮಪತ್ರ ಸಲ್ಲಿಸಲು ಬಲವಾದ ಕಾರಣವೂ ಇದೆ. ಮೇ 14 ಅತ್ಯಂತ ಮಂಗಳಕರ ದಿನ. ಗಂಗಾ ಸಪ್ತಮಿ ಕೂಡ ಇದೆ. ಈ ದಿನವು ಗಂಗೆಯ ಅವತಾರ ದಿನದ ಪವಿತ್ರ ಹಬ್ಬ. ಪಂಡಿತ್‌ ಋಷಿ ದ್ವಿವೇದಿ ಅವರ ಜ್ಯೋತಿಷ್ಯದ ದೃಷ್ಟಿಯಿಂದ ಮೇ14 ಬಹಳ ಒಳ್ಳೆಯ ದಿನ ಕೂಡ. ಅಲ್ಲದೇ ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಕೂಡ ಹೌದು. ಹಾಗಾಗಿ ಅಂದೇ ನಾಮಪತ್ರ ಸಲ್ಲಿಸಲು ಮೋದಿ ಸಿದ್ಧತೆ ನಡೆಸಿದ್ದಾರೆ.
ಇದೇ ಕ್ಷೇತ್ರದಿಂದ ಹಾಸ್ಯನಟ ಶ್ಯಾಮ್‌ ರಂಗೀಲಾ, ಕಾಂಗ್ರೆಸ್‌ನ ಅಜಯ್‌ ರಾಯ್‌ ಮತ್ತು ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಅಥರ್‌ ಅಲಿ ಲಾರಿ ಕಣಕ್ಕಿಳಿದಿದ್ದು ಅವರ ವಿರುದ್ಧ ಮೋದಿ ಅವರು ಸ್ಪರ್ಧಿಸಲಿದ್ದಾರೆ. ಪ್ರಧಾನಿ ಮೋದಿ ವಾರಾಣಸಿ ಕ್ಷೇತ್ರದಿಂದ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದು 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಅವರು ಭರ್ಜರಿ ಜಯ ಸಾಧಿಸಿದ್ದರು.
ವಾರಾಣಸಿ ಲೋಕಸಭೆ ಚುನಾವಣೆ 2024ರ ಕೊನೆಯ ಮತ್ತು ಏಳನೇ ಹಂತದ ಚುನಾವಣೆಯಾಗಿದ್ದು ಜೂನ್‌ 1 ರಂದು ಮತದಾನ ನಡೆಯಲಿದೆ. ಜೂನ್‌ 4ರಂದು ಫಲಿತಾಂಶ ಹೊರಬೀಳಲಿದೆ. ಏಳನೇ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಮೇ 7 ರಿಂದ ಪ್ರಾರಂಭವಾಗಿ ಮೇ 14 ರಂದು ಕೊನೆಗೊಳ್ಳಲಿದೆ.